ಹೊಸದಿಲ್ಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಬ್ಬ ಬೌಲರ್ ಗಳ ನಾಯಕ. ಕೊಹ್ಲಿಯಂತವರನ್ನು ನಾಯಕನನ್ನಾಗಿ ಪಡೆದುದಕ್ಕೆ ಭಾರತೀಯ ಬೌಲರ್ ಗಳಿಗೆ ಒಳ್ಳೆಯದಾಗಿದೆ ಎಂದು ಪಾಕಿಸ್ಥಾನದ ಮಾಜಿ ವೇಗಿ ಶೋಯೇಬ್ ಅಖ್ತರ್ ಹೇಳಿದ್ದಾರೆ.
ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ರಾವಲ್ಪಿಂಡಿ ಎಕ್ಸ್ ಪ್ರೆಸ್ ಅಖ್ತರ್, ವಿರಾಟ್ ಒಬ್ಬ ಬೌಲರ್ ಗಳ ನಾಯಕ. ಬೌಲರ್ ಗಳ ಜೊತೆಗಿರುವಾಗ ಆತ ನಾಯಕನಾಗಿರುವುದಿಲ್ಲ. ಆತನ ಬೌಲರ್ ಗಳು ಎದುರಾಳಿಗಳ ಮೇಲೆ ದಾಳಿ ನಡೆಸುವಾಗ ತುಂಬಾ ಖುಷಿ ಪಡುತ್ತಾನೆ ಎಂದು ಅಖ್ತರ್ ಹೇಳಿದ್ದಾರೆ.
ವೇಗಿ ಮೊಹಮ್ಮದ್ ಶಮಿ ಅವರ ಕುರಿತು ಮಾತನಾಡಿದ ಶೋಯೇಬ್, ವಿಶ್ವಕಪ್ ಸೆಮಿ ಫೈನಲ್ ಸೋಲಿನ ನಂತರ ಶಮಿ ನನಗೆ ಕರೆ ಮಾಡಿದ್ದರು. ವಿಶ್ವಕಪ್ ಗೆಲ್ಲಲು ಸಾಧ್ಯವಾಗದ ಕುರಿತು ಬೇಸರ ವ್ಯಕ್ತಪಡಿಸಿದ್ದರು. ನಾನು ಆತನಿಗೆ ಸಮಾಧಾನ ಮಾಡಿದ್ದೆ. ನಿನ್ನಲ್ಲಿ ಉತ್ತಮ ಔಟ್ ಸ್ವಿಂಗರ್ ಗಳಿವೆ. ಇದರಿಂದ ಭಾರತೀಯ ಉಪಖಂಡದಲ್ಲಿ ಬೌಲಿಂಗ್ ನಡೆಸಲು ಅನುಕೂಲವಾಗಲಿದೆ. ಪ್ರಯತ್ನ ಮಾಡಿದರೆ ನೀನು ರಿವರ್ಸ್ ಸ್ವಿಂಗ್ ನ ರಾಜನಾಗಿ ಮೆರೆಯಬಹುದು ಎಂದು ಹೇಳಿದ್ದೆ ಎಂದರು.
ವಿಶಾಖಪಟ್ಟಣದಂತಹ ಫ್ಲಾಟ್ ಪಿಚ್ ನಲ್ಲಿ ಶಮಿಯ ಪ್ರದರ್ಶನ ಕಂಡು ಖುಷಿಯಾಗಿದೆ. ವಿಪರ್ಯಾಸವೆಂದರೆ ಪಾಕ್ ಬೌಲರ್ ಗಳು ನನ್ನಲ್ಲಿ ಸಲಹೆ ಕೇಳುವುದಿಲ್ಲ. ಆದರೆ ಭಾರತೀಯ ಶಮಿ ನನ್ನಲ್ಲಿ ಸಲಹೆ ಪಡೆಯುತ್ತಾರೆ. ಅವರು ಅದರಿಂದ ಯಶಸ್ಸು ಪಡೆದಿದ್ದಾರೆ ಎಂದರು.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಶಮಿ ಐದು ವಿಕೆಟ್ ಪಡೆದು ಮಿಂಚಿದ್ದರು.