Advertisement

ಕೊಹ್ಲಿ ಬಂದು ಹೋದ್ಮೇಲೆ ಇಲ್ಲಾಯ್ತು ಮ್ಯಾಜಿಕ್‌

04:50 PM Apr 29, 2017 | |

ಜಕ್ಕೂರಿನ ಚಾರ್ಲೀಸ್   ಎನಿಮಲ್‌ ರೆಸ್ಕ್ಯೂ ಸೆಂಟರ್‌ನ ಹೊರ ಭಾಗ… ಅವತ್ತು ಕೊಹ್ಲಿ ಬರುವ ದಿನ. ಯಾರೋ ಸ್ಟಾರ್‌ ಬರುತ್ತಾರೆ ಎನ್ನುವ ಮಾಹಿತಿ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಮುಂಚಿತವಾಗಿ ಸಿಕ್ಕಿತ್ತು. ಆದರೆ, ಯಾರೆನ್ನುವುದು ತಿಳಿದಿರಲಿಲ್ಲ. ಕಂದುಬಣ್ಣದ ಇನ್ನೋವಾದಲ್ಲಿ ಬಂದ ಕೊಹ್ಲಿ ಗೇಟ್‌ ಹತ್ತಿರ ಕಾರು ನಿಲ್ಲಿಸಿದ್ದಾರೆ. ಗೇಟ್‌ನಲ್ಲಿರುವ ವಾಚ್‌ಮನ್‌ಗೆ ಅವರು ವಿರಾಟ್‌ ಕೊಹ್ಲಿ, ಭಾರತ ಕ್ರಿಕೆಟ್‌ ತಂಡದ ಕ್ಯಾಪ್ಟನ್‌, ಆರ್‌ಸಿಬಿಯ ಸಾರಥಿ, ಸ್ಫೋಟಕ ಶತಕಗಳನ್ನು ದಾಖಲಿಸಿದ ಸರದಾರ ಎನ್ನುವ ಯಾವುದೇ ಮಾಹಿತಿಯೂ ತಿಳಿದಿಲ್ಲ. ಕಪ್ಪು ಟಿ ಶರ್ಟು, ಜೀನ್ಸ್‌ ಪ್ಯಾಂಟು, ಕನ್ನಡಕ ಧರಿಸಿದ್ದವನನ್ನು ಕಂಡು ಇವನ್ಯಾರೋ ಗಡ್ಡಬಿಟ್ಟ ಕಾಲೇಜು ಹುಡುಗ ಅಂತಲೇ ತಿಳಿದಿದ್ದರೇನೋ. “ಹೊರಗೆ ಯಾರೋ ಬಂದಿದ್ದಾರೆ’ ಎಂದು ಆ ವಾಚ್‌ಮನ್‌, ಡಾ. ಲೋಹಿತ್‌ ಅವರ ಗಮನಕ್ಕೆ ತಂದ. ಲೋಹಿತ್‌ ಅವರಿಗೂ ಆಮೇಲೆಯೇ ಗೊತ್ತಾಗಿದ್ದು, ಅದು ವಿರಾಟ್‌ ಕೊಹ್ಲಿ ಅಂತ! ವಾಚ್‌ಮನ್‌ಗೆ ಹೇಳಿದರು: “ಇವ್ರೇ ನಮ್ಮ ಕ್ರಿಕೆಟ್‌ ಟೀಮಿನ ಕ್ಯಾಪ್ಟನ್‌’ ಅಂತ!

Advertisement

ಸುಮಾರು ಒಂದು ಗಂಟೆ ಕಾಲ ಇದೇ ಕೇಂದ್ರದಲ್ಲಿ ಕೊಹ್ಲಿ ಪ್ರಾಣಿಗಳೊಂದಿಗೆ ಮಾತಿಗೆ ಕುಳಿತರು. ಕಾಲು ಕಳೆದುಕೊಂಡ ನಾಯಿಗಳನ್ನು, ಗಾಯಗೊಂಡ ಬೆಕ್ಕುಗಳನ್ನು ನೋಡಿ ಅವುಗಳ ಹಿಂದಿನ ಕತೆಗಳನ್ನು ಪುಟ್ಟ ಮಗುವಿನಂತೆ ಕೇಳಿದರು. ಕೊಹ್ಲಿಯ ಕಣ್ಣುಗಳು ತೇವಗೊಂಡವು. ಕಣ್ಣು ಕಳೆದುಕೊಂಡ, ಕರುಳು ಬೇನೆಯಿಂದ ನರಳುತ್ತಿದ್ದ 15 ನಾಯಿಗಳನ್ನು ಮುದ್ದಾಡುತ್ತಾ, “ಇವುಗಳ ಚಿಕಿತ್ಸೆಗೆ ಎಷ್ಟು ವೆಚ್ಚವಾಗುತ್ತದೋ, ಅದನ್ನು ಭರಿಸುತ್ತೇನೆ’ ಎಂದು ಹೇಳಿ ಹೊರಟರು!

ಇದಾದ ಬಳಿಕ ಬೇರೆಯದೇ ಕತೆ… “ಸರ್‌ ನಮಸ್ತೇ, ನಾನು ಇಲ್ಲಿಯೇ ಸಮೀಪದವನು. ನಾಲ್ಕು ಹೆಜ್ಜೆ ನಡೆದರೆ ನಮ್ಮ ಮನೆ ಸಿಗುತ್ತೆ. ಆದರೂ ಇಲ್ಲಿಯ ತನಕ ಇಂಥದ್ದೊಂದು ಪ್ರಾಣಿ ರಕ್ಷಣೆಯ ಕೇಂದ್ರ ಇರುವುದು ನನಗೆ ತಿಳಿದೇ ಇರಲಿಲ್ಲ. ಮೊನ್ನೆ ವಿರಾಟ್‌ ಕೊಹ್ಲಿ ಬಂದಿದ್ರಂತಲ್ಲ. ಪೇಪರ್‌ನಲ್ಲಿ ನೋಡಿದೆ. ನಿಮ್ಮ ಪ್ರಾಣಿ ಪ್ರೀತಿ ಇಷ್ಟ ಆಯ್ತು. ನಾನು ಎರಡು ನಾಯಿಯ ಚಿಕಿತ್ಸಾ ವೆಚ್ಚದ ಖರ್ಚನ್ನು ನೀಡುತ್ತೇನೆ. ನನ್ನ ಕೈಲಾದಷ್ಟು ಅವುಗಳಿಗೆ ನೆರವಾಗುವೆ…’

ಹೀಗೆ ಹೇಳಿಕೊಂಡು ಜಕ್ಕೂರಿನಲ್ಲಿರುವ ಚಾರ್ಲೀಸ್   ಎನಿಮಲ್‌ ರೆಸ್ಕ್ಯೂ ಸೆಂಟರ್‌ಗೆ (ಕೇರ್‌) ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊಹ್ಲಿ ಇಲ್ಲಿಗೆ ಬಂದಮೇಲೆ ಅನೇಕರಿಗೆ ಈ ಸಂಸ್ಥೆಯ ವಿಳಾಸ ಸುಲಭದಲ್ಲಿ ಸಿಗುತ್ತಿದೆ. ತಬ್ಬಲಿ ಜೀವಿಗಳ ಮೇಲೆ ಪ್ರೀತಿ ಹುಟ್ಟುತ್ತಿದೆ. ಅಂಗಾಂಗ ಕಳೆದುಕೊಂಡ, ಅನಾರೋಗ್ಯ ಸ್ಥಿತಿಯಲ್ಲಿರುವ ಶ್ವಾನಗಳನ್ನು ದತ್ತು ತೆಗೆದುಕೊಳ್ಳಲು ಜನ ತಾವಾಗಿಯೇ ಮುಂದೆ ಬರುತ್ತಿದ್ದಾರೆ. “ನಮ್ಮ ಸಂಸ್ಥೆಯ ಕೆಲಸಗಳನ್ನು ಜನರ ಮನಕ್ಕೆ ಮುಟ್ಟಿಸಿದ ವಿರಾಟ್‌ ಕೊಹ್ಲಿಗೆ ತುಂಬಾ ತುಂಬಾ ಥ್ಯಾಂಕ್ಸ್‌’ ಎನ್ನುವುದು ಪ್ರಾಣಿ ರಕ್ಷಣಾ ಕೇಂದ್ರದ ಡಾ. ಲೋಹಿತ್‌ ಅವರ ಮಾತು.

ಕೇರ್‌ ಹುಟ್ಟಿದ್ದು ಹೇಗೆ?
ಬೆಂಗಳೂರಿನಲ್ಲಿ ಆಶ್ರಯದಾತರು, ಅನ್ನದಾತರು ಇಲ್ಲದೆ ಅಸಂಖ್ಯ ನಾಯಿಗಳು ಬೀದಿಯಲ್ಲಿ ನರಳುತ್ತಿದ್ದವು. ಒಂದೋ ಎರಡೋ ಕಾಲುಗಳನ್ನು ಕಳೆದುಕೊಂಡ ಬೀದಿನಾಯಿಗಳಿಗೆ ಆ ಹೊತ್ತಿನಲ್ಲಿ ಹೆಬ್ಟಾಳದ “ಕ್ಯೂಪಾ’ ಶಾಖೆ ಆಪತಾºಂಧವನಾಗಿತ್ತು. ದುರಾದೃಷ್ಟವಶಾತ್‌ ನಾನಾ ಕಾರಣಗಳಿಂದ 2012ರಲ್ಲಿ ಪ್ರಾಣಿ ರಕ್ಷಣೆಯ ಕಾರ್ಯ ನಿಂತು ಹೋಯಿತು. ಆದರೆ ಕ್ಯೂಪಾದೊಂದಿಗೆ ಗುರುತಿಸಿಕೊಂಡಿದ್ದ ಸುಧಾ ನಾರಾಯಣ್‌, ಡಾ. ಲೋಹಿತ್‌ ಸೇರಿದಂತೆ ಕೆಲವು ಸಮಾನ ಮನಸ್ಕರ ಕಾಳಜಿ ಮಾತ್ರ ಕಡಿಮೆಯಾಗಲಿಲ್ಲ. ಇವರೆಲ್ಲ ಸೇರಿಕೊಂಡು 2013ರಲ್ಲಿ ಅದೇ ಮಾದರಿಯ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಜನ್ಮಕೊಟ್ಟರು. ಇದೀಗ ಅವರ ಶ್ರಮದಿಂದ ತಬ್ಬಲಿ ಜೀವಿಗಳಿಗೊಂದು ಆಶ್ರಯ ಸಿಕ್ಕಿದೆ.

Advertisement

ಬೀದಿ ನಾಯಿಗಳೇ ಟಾರ್ಗೆಟ್‌
ಕೇರ್‌ನಲ್ಲಿ ನಾಯಿ, ಬೆಕ್ಕು, ಹಂದಿ, ಮೊಲ… ಹೀಗೆ ಹಲವು ವಿವಿಧ ಪ್ರಾಣಿಗಳು ಇವೆ. ಬೀದಿಗಳಲ್ಲಿ ಅನಾರೋಗ್ಯದಿಂದ ಬಿದ್ದಿರುವ ಶ್ವಾನಗಳನ್ನು ತಂದು ಚಿಕಿತ್ಸೆ ನೀಡಲಾಗುತ್ತದೆ. ಶೇ.100ರಷ್ಟು ದೈಹಿಕ ಫಿಟ್‌ ಆದ ಮೇಲೆ ಅವುಗಳನ್ನು ಅಗತ್ಯ ಸ್ಥಳಗಳಿಗೆ ಬಿಡಲಾಗುತ್ತದೆ. ಆದರೆ, ಅಪಘಾತವಾಗಿ ಕಾಲುಗಳನ್ನು ಕಳೆದುಕೊಂಡ, ದೃಷ್ಟಿ ಕಳೆದುಕೊಂಡ, ದೈಹಿಕ ಫಿಟೆ°ಸ್‌ ಇಲ್ಲದ ಪ್ರಾಣಿಗಳನ್ನು ಕೇಂದ್ರದಲ್ಲಿಯೇ ಸಾಕಲಾಗುತ್ತದೆ. ಪ್ರತಿದಿನವೂ ಶ್ವಾನಗಳನ್ನು ತಂದು ಚಿಕಿತ್ಸೆ ನೀಡಲಾಗುತ್ತದೆ. ತಿಂಗಳಲ್ಲಿ ಸುಮಾರು 100 ಶ್ವಾನಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. “ರಕ್ಷಣಾ ಕೇಂದ್ರ ಆರಂಭವಾದ ಮೇಲೆ ಸುಮಾರು 10 ಸಾವಿರಕ್ಕೂ ಅಧಿಕ ಪ್ರಾಣಿಗಳಿಗೆ ಚಿಕಿತ್ಸೆ ನೀಡಿದ್ದೇವೆ’ ಎಂದು ಪ್ರಾಣಿ ರಕ್ಷಣಾ ಕೇಂದ್ರದ ಡಾ.ಲೋಹಿತ್‌ ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿ ಭೇಟಿ ನೀಡಿದ ಮೇಲೆ ಪರಿಸ್ಥಿತಿಯೇ ಬದಲಾಗಿದೆ. ಅಷ್ಟು ದೊಡ್ಡ ಸ್ಟಾರ್‌ ಆದರೂ ಇಲ್ಲಿನ ಪ್ರಾಣಿಗಳನ್ನು ಪ್ರೀತಿಯಿಂದ ನೋಡಿ, ಅವುಗಳ ಯೋಗಕ್ಷೇಮ, ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಈ ಬೆಳವಣಿಗೆಯ ನಂತರ ಕೇರ್‌ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದ್ದು, ಪ್ರಾಣಿಗಳ ಚಿಕಿತ್ಸೆಗೂ ಹಲವರು ನೆರವಾಗುತ್ತಿದ್ದಾರೆ.
– ಡಾ. ಲೋಹಿತ್‌, ಚಾರ್ಲೀಸ್   ಎನಿಮಲ್‌ ರೆಸ್ಕ್ಯೂ ಸೆಂಟರ್‌ , ಜಕ್ಕೂರು

ಆರ್‌ಸಿಬಿ ಹುಡುಗನ ಶ್ವಾನ ಪ್ರೀತಿ
ಆರ್‌ಸಿಬಿ ತಂಡದ ವಿರಾಟ್‌ ಕೊಹ್ಲಿ ಅವರಿಗೆ ಮೊದಲಿನಿಂದಲೂ ಶ್ವಾನಗಳ ಮೇಲೆ ಹೆಚ್ಚು ಪ್ರೀತಿ. ಕೊಹ್ಲಿಯ ಮನೆಯಲ್ಲಿ “ಬ್ರೂನೋ’ ಎಂಬ ಶ್ವಾನವಿದೆ. ಅದಕ್ಕೆ ಮುತ್ತಿಕ್ಕಿಯೇ, ಅವರು ಹೊರಗೆ ಬ್ಯಾಟ್‌ ಹಿಡಿದು ಹೊರಡುತ್ತಾರೆ. ಸಮಯ ಸಿಕ್ಕಾಗಲೆಲ್ಲ ಅದರೊಂದಿಗೆ ಆಟ ಆಡುತ್ತಾರೆ. ಕೊಹ್ಲಿ ಬ್ರೂನೋ ಮಾತ್ರವಲ್ಲ, ಸ್ಟೇಡಿಯಮ್ಮಿಗೆ ಬರುವ ಭದ್ರತಾ ದಳದ ನಾಯಿಗಳ ಮೈಯನ್ನೂ ದಡವುತ್ತಾರೆ. ಎಷ್ಟೋ ಸಲ ಚಿನ್ನಸ್ವಾಮಿ ಸ್ಟೇಡಿಯಮ್ಮಿನೊಳಗೆ ಬೀದಿನಾಯಿಗಳು ನುಗ್ಗಿದಾಗ, ಅವುಗಳನ್ನು ಪ್ರೀತಿಯಿಂದ ಕಂಡಿದ್ದಾರೆ. ಈ ಪ್ರಾಣಿಪ್ರೀತಿಯೇ ಅವರಿಗೆ ಜಕ್ಕೂರಿನ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಲು ಪ್ರೇರಣೆ.

ನೀವೂ ದತ್ತು ತೆಗೆದೊRಳ್ಳಿ…
ಪ್ರಾಣಿಗಳ ಮೇಲೆ ನಿಮಗೂ ಪ್ರೀತಿ, ಕಾಳಜಿ ಇದ್ದರೆ ಇಲ್ಲಿನ ದತ್ತು ಕಾರ್ಯಕ್ಕೆ ನೀವೂ ಕೈಜೋಡಿಸಬಹುದು. ಅನಾಥ ಶ್ವಾನ, ಬೆಕ್ಕಿನ ಅನಾರೋಗ್ಯಕ್ಕೆ ನಿಮ್ಮ ಮನಸ್ಸು ಕರಗಿದರೆ ಅವುಗಳನ್ನು ದತ್ತು ತೆಗೆದುಕೊಂಡು, ಚಿಕಿತ್ಸಾ ವೆಚ್ಚ ಭರಿಸಬಹುದು. ಗಾಯಗೊಂಡ, ದೃಷ್ಟಿ ಕಳೆದುಕೊಂಡ, ಅನಾರೋಗ್ಯಕ್ಕೆ ತುತ್ತಾದ, ಅಪಘಾತದಿಂದ ಕಾಲುಗಳನ್ನು ಕಳೆದುಕೊಂಡ ಪ್ರಾಣಿಗಳಿಗೆ ಇಲ್ಲಿ ಆಶ್ರಯ ನೀಡಲಾಗಿದೆ. ದತ್ತು ತೆಗೆದುಕೊಂಡ ನಂತರ ಆಗಾಗ್ಗೆ ಬಂದು, ಆ ಪ್ರಾಣಿಗಳ ಜತೆ ಸಮಯ ಕಳೆಯಬಹುದು. ಅಷ್ಟೇ ಅಲ್ಲ, ನಿಮಗೆ ಇಷ್ಟವಾದ ಶ್ವಾನವನ್ನು ಮನೆಗೆ ತೆಗೆದುಕೊಂಡು ಹೋಗಲೂ ಅವಕಾಶವಿದೆ. ಆದರೆ, ನೀವು ಆ ಪ್ರಾಣಿಯನ್ನು ಪ್ರೀತಿಯಿಂದ ಸಾಕುತ್ತೀರಿ ಎನ್ನುವ ಖಚಿತ ಭರವಸೆ ಇಲ್ಲಿನ ಸಂರಕ್ಷಣಾ ಕೇಂದ್ರಕ್ಕೆ ಸಿಕ್ಕಿದ ಮೇಲೆಯೇ ನಿಮಗೆ ಪ್ರಾಣಿಯನ್ನು ನೀಡಲಾಗುತ್ತದೆ.

ವೆಬ್‌ಸೈಟ್‌: www.charlies-care.com

ಎಲ್ಲಿದೆ?: ಚಾರ್ಲೀಸ್  ಎನಿಮಲ್‌ ರೆಸ್ಕ್ಯೂ ಸೆಂಟರ್‌ (ಕೇರ್‌)
ನಂ. 19/1, ಜಕ್ಕೂರು, ಯಲಹಂಕ ಹೋಬಳಿ, ಬೆಂಗಳೂರು
 ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next