ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಮವಾರ ನಡೆದ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವೀರೋಚಿತ ಸೋಲನುಭವಿಸಿದೆ. ಕೊನೆಯ ತನಕ ಹೋರಾಡಿದ ಆರ್ ಸಿಬಿ ಎಂಟು ರನ್ ಅಂತರದ ಸೋಲು ಕಂಡಿದೆ.
ಈ ಪಂದ್ಯದ ಬಳಿಕ ಆರ್ ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ದಂಡ ವಿಧಿಸಲಾಗಿದೆ. ಪಂದ್ಯದ ಸಂಭಾವನೆಯ ಶೇಕಡಾ ಹತ್ತರಷ್ಟು ದಂಡ ವಿಧಿಸಲಾಗಿದೆ.
“ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬ್ಯಾಟರ್ ವಿರಾಟ್ ಕೊಹ್ಲಿಗೆ ಪಂದ್ಯ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ” ಎಂದು ಐಪಿಎಲ್ ಮಂಡಳಿ ತಿಳಿಸಿದೆ.
“ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಕೊಹ್ಲಿ ಒಪ್ಪಿಕೊಂಡಿದ್ದಾರೆ” ಎಂದು ಸೇರಿಸಲಾಗಿದೆ.
ನಿಖರವಾಗಿ ಯಾವ ಕಾರಣಕ್ಕಾಗಿ ಕೊಹ್ಲಿಗೆ ದಂಡ ವಿಧಿಸಲಾಗಿದೆ ಎಂದು ಸೂಚಿಸಲಾಗಿಲ್ಲ. ಆದರೆ ಸಿಎಸ್ ಕೆ ಬ್ಯಾಟರ್ ಶಿವಂ ದುಬೆ ಅವರು ಔಟಾದಾಗ ವಿರಾಟ್ ನಡೆಸಿದ ಸಂಭ್ರಮಾಚರಣೆಗೆ ದಂಡ ಹಾಕಲಾಗಿದೆ ಎಂದು ವರದಿಯಾಗಿದೆ.
ಚಿನ್ನಸ್ವಾಮಿ ಅಂಗಳದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸಿಎಸ್ ಕೆ 226 ರನ್ ಮಾಡಿದ್ದರೆ, ಬೆಂಗಳೂರು ತಂಡವು 218 ರನ್ ಮಾತ್ರ ಗಳಿಸಿತು.