ನವದೆಹಲಿ: ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್‌ನ ಎರಡನೇ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಭಾರತ ಎರಡನ್ನು ಗೆದ್ದಂತಾಗಿದೆ.
ಈ ಪಂದ್ಯದ ಮೂಲಕ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನೂತನ ಮೈಲುಗಲ್ಲೊಂದನ್ನು ಸ್ಥಾಪಿಸಿದ್ದಾರೆ. ಅಂತರಾಷ್ಟ್ರೀಯ ಪಂದ್ಯಗಳ ಪೈಕಿ ಅತಿ ವೇಗವಾಗಿ 25,000 ರನ್‌ಗಳ ಗುರಿ ತಲುಪಿದ ಮೊದಲಿಗ ಎಂಬ ವಿಶ್ವ ದಾಖಲೆಗೆ ಪಾತ್ರವಾಗಿದ್ಧಾರೆ. ಅಲ್ಲದೇ ಒಟ್ಟಾರೆಯಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25,000 ರನ್ ಬಾರಿಸಿದ ವಿಶ್ವದ 6ನೇ ಬ್ಯಾಟ್ಸ್‌ಮ್ಯಾನ್ ಎಂಬ ದಾಖಲೆ ಬರೆದಿದ್ದಾರೆ.
ಈ ಮೊದಲು ವಿರಾಟ್ ಈ ದಾಖಲೆಯಿಂದ ಕೇವಲ 52 ರನ್ ಹಿಂದಿದ್ದರು. ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ನಲ್ಲಿ ಒಟ್ಟು 64 ರನ್ ಬಾರಿಸುವ ಮೂಲಕ ಅವರು ಈ ಗುರಿ ತಲುಪಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 44 ರನ್ ಬಾರಿಸಿದ್ದ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 20 ರನ್ ಮಾಡಿ ಟಾಮ್ ಮುರ್ಫಿಗೆ ವಿಕೆಟ್ ಒಪ್ಪಿಸಿದ್ದರು.
ದೆಹಲಿಯಲ್ಲಿ ನಡೆದ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿ ಅವರ 491ನೇ ಅಂತರಾಷ್ಟ್ರೀಯ ಪಂದ್ಯವಾಗಿದ್ದು, ತಮ್ಮ 549 ನೇ ಇನ್ನಿಂಗ್ಸ್‌ನಲ್ಲಿ 25,000 ರನ್ ಗೆರೆಯನ್ನು ತಲುಪಿದ್ದಾರೆ. ಅವರು ಈ ಮೂಲಕ ಸಚಿನ್ ತೆಂಡುಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಸಚಿನ್ 577 ಇನ್ನಿಂಗ್ಸ್‌ಗಳಲ್ಲಿ 25,000 ರನ್ ಬಾರಿಸಿದ್ದರು. ಅಲ್ಲದೆ ಸಚಿನ್ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25,000 ರನ್ ಬಾರಿಸಿದ ಕೇವಲ ಎರಡನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ಧಾರೆ.