Advertisement

ವಾಹ್‌ ಕ್ಯಾಪ್ಟನ್‌! ವಿರಾಟ್‌ ಕೊಹ್ಲಿ ಯಶಸ್ಸಿನ ಹಿಂದೆ ಅಪಾರ ಪರಿಶ್ರಮ

12:33 AM Dec 05, 2019 | sudhir |

ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ವಿಶ್ವದ ನಂಬರ್‌ 1 ಬ್ಯಾಟ್ಸ್‌ಮನ್‌ ಎಂಬ ಗರಿಮೆಗೆ ಮತ್ತೂಮ್ಮೆ ಪಾತ್ರರಾಗಿದ್ದಾರೆ. ಮೊದಲನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ಪಾಕಿಸ್ತಾನದ ವಿರುದ್ಧದ ನಡೆದ ಟೆಸ್ಟ್‌ನಲ್ಲಿ ಹೆಚ್ಚು ಅವಕಾಶ ಸಿಗದೇ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

Advertisement

ಇತ್ತೀಚೆಗಷ್ಟೇ ಬಾಂಗ್ಲಾದೇಶದ ವಿರುದ್ಧದ ಗುಲಾಬಿ ಚೆಂಡು ಪಂದ್ಯಾವಳಿಯಲ್ಲಿ ಕೊಹ್ಲಿ ಶತಕ ಬಾರಿಸಿದಾಗ ಮತ್ತು ಅದಕ್ಕೂ ಹಿಂದೆ ದಕ್ಷಿಣ ಆಫ್ರಿಕಾದ ವಿರುದ್ಧದ ಪಂದ್ಯದಲ್ಲಿ ಅವರು ಔಟಾಗದೇ 254 ರನ್‌ ಗಳಿಸಿದಾಗಲೇ ಅವರು ನಂಬರ್‌ ಒನ್‌ ಸ್ಥಾನಕ್ಕೆ ತೀರಾ ಸನಿಹವಾಗಿದ್ದರು. ಕೆಲ ಸಮಯದಿಂದಲೂ ನಂಬರ್‌ 1 ಸ್ಥಾನದ ವಿಷಯದಲ್ಲಿ ಸ್ಟೀವ್‌ ಸ್ಮಿತ್‌ ಮತ್ತು ಕೊಹ್ಲಿ ನಡುವೆ ತೀವ್ರ ಸ್ಪರ್ಧೆ ಇದ್ದೇ ಇದೆ. ಇಬ್ಬರೂ ತಮ್ಮದೇ ರೀತಿಯಲ್ಲಿ ಅದ್ಭುತ ಆಟಗಾರರು. ಅತ್ತ ಸ್ಟೀವ್‌ ಸ್ಮಿತ್‌ ಕೂಡ ಅಗಾಧ ಪ್ರತಿಭೆಯುಳ್ಳ ಕ್ರಿಕೆಟಿಗ.

ಈ ಕಾರಣದಿಂದಾಗಿಯೇ ಇವರಿಬ್ಬರ ನಡುವಿನ ಪರೋಕ್ಷ ಪೈಪೋಟಿಯು ಕ್ರಿಕೆಟ್‌ ಪ್ರಿಯರಿಗೆ ಸದಾ ಕುತೂಹಲದ ವಿಷಯ. ವಿಶೇಷವೆಂದರೆ, ಈಗಾಗಲೇ ಏಕದಿನ ಶ್ರೇಯಾಂಕದಲ್ಲೂ ಕೊಹ್ಲಿಯೇ ವಿಶ್ವದ ನಂಬರ್‌ 1 ಆಟಗಾರ. ಟಿ 20ಯಲ್ಲೂ ಅವರು ಈ ಸಾಧನೆ ಮಾಡಿದರೆ ಅಚ್ಚರಿಯೇನೂ ಪಡಬೇಕಿಲ್ಲ.ವಿರಾಟ್‌ ಕೊಹ್ಲಿ ವಿಶೇಷತೆಯೆಂದರೆ, ಅವರ ಕನ್ಸಿಸ್ಟೆನ್ಸಿ. ವರ್ಷಗಳಿಂದ ಅವರು ತಮ್ಮ ಫಾರ್ಮ್ ಕಳೆದುಕೊಂಡಿಲ್ಲ. ಇದರ ಹಿಂದೆ ಅಪಾರ ಪರಿಶ್ರಮ, ಶ್ರದ್ಧೆ, ಪ್ರತಿಭೆಯ ಸಮ್ಮಿಲನವಿದೆ. ವೈಯಕ್ತಿಕ ರನ್‌ ಗಳಿಕೆಯಷ್ಟೇ ಅಲ್ಲದೇ, ನಾಯಕನಾಗಿಯೂ ತಂಡವನ್ನು ಮುನ್ನಡೆಸುವ ಬೃಹತ್‌ ಜವಾಬ್ದಾರಿಯನ್ನು ವರ್ಷಗಳಿಂದ ಅಷ್ಟೇ ಅನಾಯಾಸವಾಗಿ ನಿಭಾಯಿಸುತ್ತಾ ಬಂದಿದ್ದಾರೆ. ಕ್ರಿಕೆಟ್‌ ಜಗತ್ತಿನ ಇತಿಹಾಸವನ್ನು ತೆರೆದು ನೋಡಿದಾಗ, ನಾಯಕರಾಗಿದ್ದೂ ಉತ್ತಮ ಫಾರ್ಮ್ ಕಾಯ್ದುಕೊಂಡವರ ಸಂಖ್ಯೆ ಬೆರಳೆಣಿಕೆಯಷ್ಟಿದೆ.

ಈ ವಿಷಯದಲ್ಲಿ ಅಜರುದ್ದೀನ್‌, ಗಂಗೂಲಿ, ಧೋನಿ, ಪಾಂಟಿಂಗ್‌, ಸ್ಟೀವ್‌ ವಾ(ಸ್ಟೀವ್‌ ಸ್ಮಿತ್‌ ಕೂಡ)ರಂಥವರ ಹೆಸರು ಎದುರಾಗುತ್ತದೆ. ಇನ್ನೊಂದೆಡೆ ಅತ್ಯಂತ ಪ್ರತಿಭಾನ್ವಿತ ಆಟಗಾರರೂ ನಾಯಕತ್ವದ ಭಾರ ತಡೆಯದೇ ಒದ್ದಾಡಿದ್ದನ್ನು ನಾವು ನೋಡಿದ್ದೇವೆ. ಕ್ರಿಕೆಟ್‌ ದೇವರು ಎನಿಸಿಕೊಂಡ ಸಚಿನ್‌ ತೆಂಡೂಲ್ಕರ್‌ ಇದಕ್ಕೆ ಉದಾಹರಣೆ.ಆದರೆ ವಿರಾಟ್‌ ಕೊಹ್ಲಿ ನಾಯಕತ್ವದ ಸವಾಲನ್ನು ಆಸ್ವಾದಿಸುತ್ತಾರೆ ಎನ್ನುವುದು ಸುಸ್ಪಷ್ಟ. ಎಂದಿನಂತೆಯೇ ಬ್ಯಾಟ್ಸ್‌ಮನ್‌ ಆಗಿ ಅವರ ದಾಖಲೆ ಕಣ್ಣು ಕೋರೈಸುವಂತಿದೆ. ಐಸಿಸಿಯ ಕ್ರಿಕೆಟರ್‌ ಆಫ್ ದಿ ಇಯರ್‌, ಟೆಸ್ಟ್‌ ಕ್ರಿಕೆಟರ್‌ ಆಫ್ ದಿ ಇಯರ್‌ ಮತ್ತು ಓಡಿಐ ಕ್ರಿಕೆಟರ್‌ ಆಫ್ ದಿ ಇಯರ್‌ನಂಥ ಮೂರು ಉನ್ನತ ಪ್ರಶಸ್ತಿಗಳನ್ನು ಒಂದೇ ವರ್ಷದಲ್ಲಿ ಗೆದ್ದ ದಾಖಲೆ ಅವರ ಹೆಸರಿಗಿದೆ.

ಟಿ20, ಏಕದಿನ ಮತ್ತು ಟೆಸ್ಟ್‌- ಈ ಮೂರು ಆವೃತ್ತಿಯಲ್ಲೂ ಕೊಹ್ಲಿಯ ಪ್ರತಿಭೆ, ಉತ್ತಮ ಎವರೇಜ್‌ ಪ್ರತಿಸ್ಪರ್ಧಿಗಳನ್ನು ಎಷ್ಟೋ ದೂರ ನಿಲ್ಲುವಂತೆ ಮಾಡಿದೆ.ಪ್ರಪಂಚದ ಘಟಾನುಘಟಿ ಕ್ರಿಕೆಟರ್‌ಗಳೆಲ್ಲ ಕೊಹ್ಲಿಯ ಆಟದ ಬಗ್ಗೆ ಮಾತನಾಡುವಾಗ, ಅವರ ಫಿಟೆ°ಸ್‌ ಮತ್ತು ಕ್ರಿಕೆಟ್‌ನೆಡೆಗಿನ ಅವರ ಶ್ರದ್ಧೆಯನ್ನು ತಪ್ಪದೇ ಹೊಗಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಆಕ್ರಾಮಕ ಗುಣ ಮತ್ತು ಫಿಟೆ°ಸ್‌ ಹೆಚ್ಚುವಲ್ಲಿ ಕೊಹ್ಲಿ(ಹಾಗೂ ಧೋನಿ)ಯ ಯೋಗದಾನ ಬಹಳಷ್ಟಿದೆ.

Advertisement

“ಕೋಟ್ಯಂತರ ಅಭಿಮಾನಿಗಳನ್ನು, ಅನೇಕಾನೇಕ ಪ್ರತಿಭಾನ್ವಿತ ಕ್ರಿಕೆಟಿಗರನ್ನು ಹೊಂದಿರುವ ಭಾರತೀಯ ಕ್ರಿಕೆಟ್‌ ಅನ್ನು ಮುನ್ನಡೆಸುವ ದೊಡ್ಡ ಅವಕಾಶ ನನಗೆ ಸಿಕ್ಕಿದೆ. ಈ ಅವಕಾಶವನ್ನು ನಾನೆಂದಿಗೂ ಹಗುರವಾಗಿ ನೋಡಲಾರೆ, ಕ್ರಿಕೆಟ್‌ನಲ್ಲಿ ಇದ್ದೇನೆ ಎಂದರೆ ಎಲ್ಲರಿಗಿಂತಲೂ ಫಿಟ್‌ ಆಗಿರಲೇಬೇಕಾದದ್ದು ನನ್ನ ಜವಾಬ್ದಾರಿ’ ಎಂಬ ಮಿಸ್ಟರ್‌ ಕನ್ಸಿಸ್ಟೆಂಟ್‌ ವಿರಾಟ್‌ ಕೊಹ್ಲಿ ತಮ್ಮ ವಿರಾಟ್‌ ಪ್ರತಿಭೆಯನ್ನು ಹೀಗೆಯೇ ಅನಾವರಣಗೊಳಿಸುತ್ತಿರಲಿ, ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಅವರ ನೇತೃತ್ವದಲ್ಲಿ ಭಾರತ ತಂಡ ವಿಶ್ವಚಾಂಪಿಯನ್‌ಯಾಗಲಿ ಎಂಬ ಹಾರೈಕೆ ಭಾರತೀಯ ಕ್ರಿಕೆಟ್‌ ಪ್ರೇಮಿಗಳದ್ದು.

Advertisement

Udayavani is now on Telegram. Click here to join our channel and stay updated with the latest news.

Next