ಯಾದಗಿರಿ: ಶ್ರೀರಾಮ ಸೇನೆ ರಾಜ್ಯ ಘಟಕದ ವತಿಯಿಂದ ಡಿ. 12ರಂದು ಪ್ರಥಮ ಬಾರಿಗೆ ಬೃಹತ್ ವಿರಾಟ್ ಹಿಂದು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸೇನೆ ರಾಜ್ಯ ಗೌರವಾಧ್ಯಕ್ಷ ಆಂದೋಲದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅದ್ಧೂರಿಯಾಗಿ ಈ ವಿರಾಟ್ ಸಮಾವೇಶ ನಡೆಸಲಾಗುತ್ತಿದ್ದು, ಈಗಾಗಲೇ ಪೊಲೀಸ್ ಇಲಾಖೆಯಿಂದ ಪರವಾನಗಿ ಪಡೆದು ಯಶಸ್ವಿ ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಡಿ. 12ರಂದು ಮಧ್ಯಾಹ್ನ 3:00 ಗಂಟೆಗೆ ನಗರದ ಮೈಲಾಪುರ ಅಗಸಿಯಿಂದ ಬೃಹತ್ ಶೋಭಾ ಯಾತ್ರೆ ನಡೆಯಲಿದ್ದು, ಈ ಶೋಭಾಯಾತ್ರೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ. ಸಂಜೆ 5ಕ್ಕೆ ಬೃಹತ್ ವಿರಾಟ್ ಹಿಂದು ಸಮಾವೇಶ ನಡೆಯಲಿದ್ದು, ಸೇನೆಯ ಸಂಸ್ಥಾಪಕ ರಾಷ್ಟ್ರೀಯ
ಅಧ್ಯಕ್ಷ ಪ್ರಮೋದ ಮುತಾಲಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ತೆಲಂಗಾಣಂನ ಭಾಗ್ಯ ನಗರದ ಶಾಸಕ ರಾಜಸಿಂಗ್ ರಾಠೂರ್ ಸೇರಿದಂತೆ ರಾಜ್ಯದ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದು, ಈ ಸಮಾವೇಶಕ್ಕೆ ಸುಮಾರು 10 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಹಿಂದುತ್ವಕ್ಕಾಗಿ ಶಿವಸೇನೆಯೊಂದಿಗೆ ಒಡಂಬಡಿಯಾಗಿದ್ದು, ಹಿಂದುತ್ವ ರಕ್ಷಣೆಗೆ ಶಿವಸೇನೆ ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದ್ದು, ಬರುವ ದಿನಗಳಲ್ಲಿ ನಾನು ರಾಜಕೀಯ ಪ್ರವೇಶ ಮಾಡುವೆ. ಯಾವ ಪಕ್ಷದಿಂದ ಸ್ಪರ್ಧಿಸುವ ಕುರಿತು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸಲಾಗುವುದು ಎಂದು ಸ್ಟಷ್ಪಪಡಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಭಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಸೇನೆಯ ಹೈ.ಕ ಅಧ್ಯಕ್ಷ ವಿಜಯ ಪಾಟೀಲ್, ಜಿಲ್ಲಾಧ್ಯಕ್ಷ ಶಶಾಂಕ ನಾಯಕ, ಪದಾಧಿಕಾರಿಗಳಾದ ಅಂಬರೀಶ ತಡಿಬಿಡಿ, ಮಲ್ಲಿಕಾರ್ಜುನ ಮುಂಡರಗಿ ಇದ್ದರು.