ಹುಮನಾಬಾದ: ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ಮೇಲಿನ ಯುವಕರ ಕಾಳಜಿ ಇತರೆ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ತಹಶೀಲ್ದಾರ್ ನಾಗಯ್ಯಸ್ವಾಮಿ ಹಿರೇಮಠ ಹೇಳಿದರು.
ಪಟ್ಟಣದಲ್ಲಿ ವಿರಶೈವ ಲಿಂಗಾಯತ ಸಂಘಟನೆ ಯುವಕರು ಎರಡು ದಿನಗಳಿಂದ ಸಂಚರಿಸಿ ಸಂಗ್ರಹಿಸಿರುವ 28 ಸಾವಿರ ರೂ. ನಗದು, ಅಕ್ಕಿ, ಧಾನ್ಯ, ಬಟ್ಟೆ, ಬಿಸ್ಕತ್, ಶುದ್ಧ ಕುಡಿವ ನೀರನ್ನು ಸಂತ್ರಸ್ತರಿಗೆ ತಲುಪಿಸುವ ವಾಹನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ತೊಂದರೆಗೆ ಸಿಲುಕಿದ ಎಲ್ಲರೂ ನಮ್ಮವರೆಂಬ ಭಾವನೆಯಿಂದ ನೆರವು ನೀಡುವುದಕ್ಕೆ ಮುಂದಾಗಿರುವ ವೀರಶೈವ ಲಿಂಗಾಯತ ಸಂಘಟನೆ ಪದಾಧಿಕಾರಿಗಳ ಕಾರ್ಯ ಪ್ರಶಂಸನೀಯ ಎಂದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಡಾ| ಗೋವಿಂದ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗಿ ಪಾಲಕರಿಗೆ ಭಾರವಾಗಿ ವ್ಯರ್ಥ ಕಾಲಹರಣ ಮಾಡುತ್ತಿರುವ ಇಂದಿನ ದಿನಗಳಲ್ಲಿ ಮಾನವೀಯತೆ ತುಂಬಿದ ಇಂಥ ಯುವಕರು ಇರುವುದು ಆರೋಗ್ಯಕರ ಬೆಳವಣಿಗೆ ಎಂದರು. ನೊಂದವರಿಗಾಗಿ ನೋವು ಅನುಭವಿಸುತ್ತಿರುವ ಯುವಕರ ನೆರವಿಗೆ ಸದಾಸಿದ್ಧವಿರುವುದಾಗಿ ತಿಳಿಸಿದರು.
ಪುರಸಭೆ ಸದಸ್ಯ ಕಾಳಪ್ಪ ಗೌಡ್ರು ಮಾತನಾಡಿ, ತಂಡದ ಸದಸ್ಯರು ಕೈಗೊಳ್ಳುವ ಇಂಥ ಯಾವುದೇ ಕಾರ್ಯಕ್ಕೆ ತನು-ಮನ-ಧನದಿಂದ ನೆರವು ನೀಡಲು ಯಾವತ್ತೂ ಸಿದ್ಧವಿರುವುದಾಗಿ ಅಭಯ ನೀಡಿದರು. ವೀರಶೈವ ಲಿಂಗಾಯತ ಸಂಘಟನೆ ಜಿಲ್ಲಾ ಅಧ್ಯಕ್ಷ ಸುನೀಲ ಪತ್ರಿ, ತಾಲೂಕು ಘಟಕ ಅಧ್ಯಕ್ಷ ಮಲ್ಲು ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ಖ್ಯಾಮ್, ಜಿಲ್ಲಾ ಸಹ ಕಾರ್ಯದರ್ಶಿ ಸೀವಕುಮಾರ ಜುನ್ನಾ ಮಾತನಾಡಿದರು.
ಶಿವಶಂಕರ ಸ್ವಾಮಿ, ಸೋಮು ಭಮಶಟ್ಟಿ, ಪವನ ತೆಲಂಗ್, ವಿರೇಶಕುಮಾರ ಮಠಪತಿ, ಪ್ರಶಾಂತ, ಸತೀಶ ಜಟಗೊಂಡ, ಸಾಗರ್ ಬಿರಾದಾರ, ಶಂಕರ ಬಿರಾದಾರ, ನಾಗು ಮಠಪತಿ, ಸಂತೋಷ, ಪ್ರಶಾಂತಕುಮಾರ ಯಳಸಂಗಿ, ಶಶಿ ಪಾಟೀಲ, ಸಿದ್ದು ಧನ್ನುರ, ವೀರೇಶ ಜಲಸಂಗಿ, ವೀರೇಶರೆಡ್ಡಿ, ಅಶೋಕ, ಸಂಗಮೇಶ ಪಾಟೀಲ ಇದ್ದರು.