Advertisement
ದೇವರು ಸ್ನಾನ ಮಾಡುವ ಜಳಕದ ಗುಂಡಿ ಈ ಬಾರಿ ಸಂಪೂರ್ಣವಾಗಿ ಮರಳಿನಿಂದ ಆವೃತವಾಗಿದೆ. ಕುಮಾರಧಾರಾ ನದಿಯಲ್ಲಿ ಮರಳು ತೆಗೆಯದೇ ಇದ್ದ ಪರಿಣಾಮ, ಕಳೆದ ಮಳೆಗಾಲದಲ್ಲಿ ನೆರೆ ಬಂದ ಹಿನ್ನೆಲೆಯಲ್ಲಿ ಮಳೆ ನೀರು ಇಡೀ ವೀರಮಂಗಲ ಪ್ರದೇಶದಲ್ಲಿದ್ದ ತೋಟ, ಮನೆಗಳನ್ನು ಮುಳುಗಿಸಿತ್ತು. ನೆರೆ ಪರಿಣಾಮ ದೇವರ ಜಳಕದ ಗುಂಡಿ ಮುಚ್ಚಿದೆ. ಎ. 18ರಂದು ಇಲ್ಲಿ ಮಹಾಲಿಂಗೇಶ್ವರ ದೇವರ ಅವಭೃಥ ಸ್ನಾನ ನಡೆಯಲಿದೆ. ಅದಕ್ಕೂ ಮುನ್ನ ಮರಳು ತೆರವುಗೊಳಿಸುವ ಕಾರ್ಯ ನಡೆಯಬೇಕಿದೆ.
ಇಲ್ಲಿ ದೇವರ ಅವಭೃಥ ಸ್ನಾನದ ಬಳಿಕ ಭಕ್ತರು ಮಾಡಿದ ಸ್ನಾನ ಪವಿತ್ರ ತೀರ್ಥಸ್ನಾನವಾಗುತ್ತದೆ. ಇದು ಫಲಪ್ರದಾಯಕ, ಪಾಪನಾಶಕ ಎನ್ನುವುದು ನಂಬಿಕೆ. ಮಹಾಲಿಂಗೇಶ್ವರ ದೇವರ ಜಳಕಕ್ಕೆ ವಿಶೇಷ ಪ್ರಾಧಾನ್ಯ ಇದೆ. ಅವಭೃಥಕ್ಕೆಂದೇ ಪುತ್ತೂರಿನಿಂದ ವೀರಮಂಗಲಕ್ಕೆ ಬರುವ ದೇವರು ನದಿ ತಟದ ಕಟ್ಟೆಯಲ್ಲಿ ಪೂಜೆ ಪಡೆದು ಅಲ್ಲಿಂದ ಜಳಕ ಸೇವೆಗೆ ಬರುತ್ತಾರೆ. ಅನಂತರ ಪೂಜೆ ಮುಗಿಸಿ ಪುತ್ತೂರಿಗೆ ನಿರ್ಗಮನ. ದೇವರ ಸ್ನಾನವಾದ ಬಳಿಕ ಪುಣ್ಯಸ್ನಾನ ಮಾಡಲು ಸಾವಿರಾರು ಭಕ್ತರು ಕಾಯುತ್ತಿರುತ್ತಾರೆ. ಪ್ರಸಿದ್ಧ ಕ್ಷೇತ್ರ ವೀರಮಂಗಲ
ತಾಲೂಕು ಕೇಂದ್ರ ಪುತ್ತೂರಿನಿಂದ 15 ಕಿ.ಮೀ. ದೂರದಲ್ಲಿರುವ ವೀರಮಂಗಲ ಕ್ಷೇತ್ರ ಶ್ರೀ ಮಹಾಲಿಂಗೇಶ್ವರ ದೇವರಿಂದಾಗಿ ಲೋಕಮಾನ್ಯವಾಗಿದೆ. ಪ್ರತೀ ವರ್ಷ ಜಾತ್ರೆಯ ಕೊನೆಯಲ್ಲಿ ಎ. 18ರ ಸಂಜೆ ದೇಗುಲದಿಂದ ದೇವರು ಅವಭೃಥ ಸ್ನಾನಕ್ಕೆ ಸವಾರಿ ಹೊರಡುತ್ತಾರೆ. ಕಟ್ಟೆಪೂಜೆ ಸ್ವೀಕರಿಸುತ್ತಾ ಮರುದಿನ ಮುಂಜಾನೆ 6 ಗಂಟೆಯ ಹೊತ್ತಿಗೆ ವೀರಮಂಗಲ ನದಿ ತಟ ತಲುಪುತ್ತಾರೆ.
Related Articles
Advertisement
ಮರಳು ಶೀಘ್ರ ತೆರವಾಗಲಿಎಪ್ರಿಲ್ ವೇಳೆಗೆ ಇಲ್ಲಿ ನದಿಯಲ್ಲಿ ನೀರಿ ಪ್ರಮಾಣದ ಸಾಕಷ್ಟು ಕಡಿಮೆ ಇರುತ್ತದೆ. ಕೆಲ ಕಡೆ ಹೊಂಡಗಳಲ್ಲಿ ಮಾತ್ರ ನೀರಿರುತ್ತದೆ. ದೇವರ ಜಳಕದ ಗುಂಡಿಯಲ್ಲೂ ತಾತ್ಕಾಲಿಕವಾಗಿ ನೀರು ಸಂಗ್ರಹಿಸಲಾಗುತ್ತದೆ. ಈ ಬಾರಿ ಜಳಕದ ಗುಂಡಿಯಲ್ಲಿ ಮರಳು ತುಂಬಿರುವುದರಿಂದ ನೀರು ನಿಲ್ಲಲು ಜಾಗವಿಲ್ಲದಂತಾಗಿದೆ. ಶೀಘ್ರದಲ್ಲಿ ಜಳಕದ ಗುಂಡಿಯಲ್ಲಿ ಸೇರಿರುವ ಮರಳು ತೆಗೆದರೆ ನೀರು ಸಂಗ್ರಹಕ್ಕೆ ಅವಕಾಶವಾಗಲಿದೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಮರಳು ತೆರವು ಕಾರ್ಯ ಬೇಗನೆ ನಡೆಯಬೇಕಿದೆ. ಕಲ್ಲುಗಳನ್ನೂ ತೆರವುಗೊಳಿಸಿ
ವೀರಮಂಗಲ ದೇವರ ಜಳಕದ ಗುಂಡಿ ಮರಳಿನಿಂದ ಆವೃತವಾಗಿದೆ. ಜತೆಗೆ ಜಳಕದ ಗುಂಡಿಯ ಬಳಿ ತೆರಳುವ ದಾರಿಯಲ್ಲಿ ಪ್ರತೀ ಬಾರಿ ಮರಳು ಇರುತ್ತಿತ್ತು. ಆದರೆ ಈ ಬಾರಿ ನೆರೆ ಬಂದ ಪರಿಣಾಮ ಮರಳು ಕೊಚ್ಚಿ ಹೋಗಿ ಕಲ್ಲು ರಾಶಿ ಬಿದ್ದಿದೆ. ಇದನ್ನೂ ತೆರವುಗೊಳಿಸಬೇಕಿದೆ.
– ರವೀಂದ್ರ ಕೈಲಾಜೆ
ಸ್ಥಳೀಯರು ವೀರಮಂಗಲ ಪ್ರವೀಣ್ ಚೆನ್ನಾವರ