ನವದೆಹಲಿ : ನಾಯಿಗಳು ಅಂದ್ರೆ ಹಾಗೆ, ಅವುಗಳಿಗೆ ಒಂಚೂರು ಧೈರ್ಯ ಜಾಸ್ತಿ. ಯಾರಾದರು ಅಪರಿಚಿತರು ಮನೆಗೆ ಬಂದರೆ ಸಾಕು ಸಿಗಿದು ಬಿಡುವಷ್ಟು ಬೊಗಳುತ್ತವೆ. ಇನ್ನು ಕಾಡು ಪ್ರಾಣಿಗಳು ಮನೆ ಬಳಿ ಸುಳಿದರೆ ಕೇಳಬೇಕೆ, ಅವುಗಳನ್ನು ಬೆನ್ನಟ್ಟಿಯೇ ಹೋಗುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಕ್ಯಾಲಿಫೋರ್ನಿಯಾದಲ್ಲಿ ನಡೆದ ಒಂದು ಘಟನೆ.
ಕ್ಯಾಲಿಫೋರ್ನಿಯಾದ ಒಂದು ಮನೆಗೆ ಏಕಾಏಕಿ ಕರಡಿಯು ಎಂಟ್ರಿ ಕೊಟ್ಟಿದೆ. ಮನೆಯ ಮುಂದೆ ಇದ್ದ ನೀರಿನ ತೊಟ್ಟಿಯಲ್ಲಿ ನೀರು ಕುಡಿದು ನಂತರ ಮನೆಯೊಳಗೆ ಪ್ರವೇಶ ಮಾಡಿದೆ. ಇನ್ನು ಮನೆಯ ಬಾಗಿಲುಗಳು ತೆರೆದಿದ್ದ ಕಾರಣ ಆ ಕರಡಿಯು ಅಡುಗೆ ಮನಗೂ ಹೋಗಿದೆ. ಅಷ್ಟರಲ್ಲಿ ಮನೆಯಲ್ಲೇ ಸಾಕಿದ್ದ ಎರಡು ನಾಯಿ ಮರಿಗಳು ಜೋರಾಗಿ ಕೂಗಿಕೊಂಡು ಬಂದಿವೆ.
ನಾಯಿ ಮರಿಗಳು ಬೊಗಳುತ್ತ ಬಂದ ತಕ್ಷಣ ಕರಡಿಯು ಅಲ್ಲಿಂದ ಕಾಲ್ಕಿತ್ತಿದೆ. ಕರಡಿಯನ್ನೇ ಓಡಿಸಿಕೊಂಡು ಆ ಎರಡು ಚಿಕ್ಕ ನಾಯಿ ಮರಿಗಳು ಓಡಿದೆ. ಈ ಎಲ್ಲಾ ದೃಶ್ಯಗಳು ಮನೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಮನೆಯ ಮಾಲೀಕರಾದ ಡೀಡೀ ಮುಲ್ಲರ್, ಮನೆಯೊಳಗಡೆ ಒಳ್ಳೆಯ ಗಾಳಿ ಬರಲಿ ಮತ್ತು ನಾವು ಸಾಕಿದ ನಾಯಿಗಳ ಓಡಾಟಕ್ಕೆ ಅನುಕೂಲವಾಗಲಿ ಎಂದು ಮನೆಯ ಬಾಗಿಲುಗಳನ್ನು ತೆರೆದಿದ್ದೆವು. ಈ ವೇಳೆ ಕರಡಿಯು ಮನೆಗೆ ಪ್ರವೇಶ ಮಾಡಿದೆ ಎಂದಿದ್ದಾರೆ.
ಈ ವಿಡಿಯೋವನ್ನು ಡೀಡೀ ಮುಲ್ಲರ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಿದ್ದು, ಸಾಕಷ್ಟು ಲೈಕ್ ಮತ್ತು ಕಮೆಂಟ್ ಹರಿದು ಬರುತ್ತಿವೆ.