ನವದೆಹಲಿ: ಭಾನುವಾರ (ಜೂನ್ 09) ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಆಹ್ವಾನ ಇಲ್ಲದ ಅತಿಥಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏನದು ನಿಗೂಢತೆ?
ಭಾರತೀಯ ಜನತಾ ಪಕ್ಷದ ಸಂಸದ ದುರ್ಗಾ ದಾಸ್ ಅವರು ಪ್ರಮಾಣವಚನ ಸ್ವೀಕರಿಸಿದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅಭಿನಂದಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರಪತಿ ಭವನದ ಕಿಟಕಿ ಗಾಜಿನಲ್ಲಿ ಚಿರತೆಯಂತಹ ಪ್ರಾಣಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.
ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದ್ದ ನೆಟ್ಟಿಗರು ಇದು ಚಿರತೆಯೋ? ಅಥವಾ ಶ್ವಾನವೋ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದು, ಇದರ ಜತೆಗೆ ರಾಷ್ಟ್ರಪತಿ ಭವನದ ಸುತ್ತಮುತ್ತ ಹಲವಾರು ಪ್ರಾಣಿಗಳು ಸಂಚರಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ ಎಂದು ವರದಿ ವಿವರಿಸಿದೆ.
ಇದೇನು ಎಡಿಟೆಡ್ ವಿಡಿಯೋನಾ? ಇದು ಯಾರೊಬ್ಬರ ಗಮನಕ್ಕೆ ಬರಲಿಲ್ಲವೇ? ಎಂದು ಟ್ವೀಟ್ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಇದು ಚಿರತೆಯೇ ಇರಬೇಕು…ಅದು ರಾಜಾರೋಷವಾಗಿ ನಡೆದುಕೊಂಡು ಹೋಗುತ್ತಿದೆ. ಜನರು ನಿಜಕ್ಕೂ ಅದೃಷ್ಟವಂತರು, ಯಾರಿಗೂ ತೊಂದರೆ ಕೊಡದೆ ಹೊರಟು ಹೋಗಿದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.