ಟೊರೊಂಟೊ: ಭಾರತದ 74ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಕೆನಡಾದಲ್ಲಿರುವ ವಿಶ್ವಪ್ರಸಿದ್ಧ ನಯಾಗರ ಜಲಪಾತವೂ ಸಾಥ್ ನೀಡಿದೆ.
ಆಗಸ್ಟ್ 15ರಂದು ಈ ನಯಾಗರ ಜಲಪಾತದಿಂದ ಧುಮ್ಮಿಕ್ಕುವ ಜಲಧಾರೆಗಳು ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕಂಗೊಳಿಸಿದವು.
ಕೆನಡಾದಲ್ಲಿರುವ ಭಾರತೀಯ ರಾಯಭಾರ ಕಛೇರಿಯಲ್ಲಿ ಕೆನಡಾಕ್ಕೆ ಭಾರತದ ರಾಯಭಾರಿಯಾಗಿರುವ ಅಪೂರ್ವ ಶ್ರೀವಾಸ್ತವ ಅವರು ಧ್ವಜಾರೋಹಣ ನಡೆಸುವ ಸಂದರ್ಭದಲ್ಲೇ ನಯಾಗರ ಜಲಪಾತಕ್ಕೆ ಭಾರತದ ತ್ರಿವರ್ಣ ಧ್ವಜದ ರಂಗಿನ ಬೆಳಕಿನ ಮೆರುಗನ್ನು ನೀಡಲಾಯಿತು.
ನಯಾಗರ ಜಲಪಾತದ ವಿಶೇಷ ವಿದ್ಯುತ್ ದೀಪಾಲಂಕಾರ ಮಂಡಳಿಯ ಸಹಕಾರದಿಂದ ಇದು ಸಾಧ್ಯವಾಯಿತು ಎಂದು ಇದನ್ನು ಆಯೋಜನೆ ಮಾಡಿದ್ದ ಇಂಡೋ-ಕೆನಡಾ ಆರ್ಟ್ಸ್ ಕೌನ್ಸಿಲ್ ಮಾಹಿತಿ ನೀಡಿದೆ.
ಪ್ರತೀ ವರ್ಷ ಲಕ್ಷಾಂತರ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಮತ್ತು ವಿಶ್ವದಲ್ಲೇ ಎರಡನೇ ಅತೀದೊಡ್ಡ ಜಲಪಾತವಾಗಿರುವ ನಯಾಗರದಿಂದ ನಿಮಿಷಕ್ಕೆ 6ಮಿಲಿಯನ್ ಕ್ಯೂಬಿಕ್ ಅಡಿ ನೀರು ಧುಮ್ಮಿಕ್ಕುತ್ತಿರುತ್ತದೆ.
ಕೋವಿಡ್ 19 ಸಂಬಂಧಿತ ನಿರ್ಬಂಧಗಳ ನಡುವೆಯೂ ಕೆನಡಾದ ವಿವಿಧೆಡೆಗಳಲ್ಲಿ ಭಾರತೀಯ ಸಮುದಾಯದವರು ಈ ಬಾರಿಯ ಸ್ವಾತಂತ್ರ್ಯ ಸಂಭ್ರಮವನ್ನು ಸಡಗರದಿಂದಲೇ ಆಚರಿಸಿರುವ ವರದಿಗಳು ಲಭ್ಯವಾಗಿದೆ.