ಕೋಲ್ಕತ್ತಾ: ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆ ಮೇಲೆ ಹತ್ತಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಮನವೊಲಿಸಿ ಕೆಳಗಿಸಿರುವ ಘಟನೆ ಸೋಮವಾರ (ಜ. 22ರಂದು) ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.
ಕೋಲ್ಕತ್ತಾದ ಪಾರ್ಕ್ ಸರ್ಕಸ್‌ನಲ್ಲಿರುವ ಬೃಹತ್ ಕಬ್ಬಿಣದ ಸೇತುವೆಯೊಂದಕ್ಕೆ ವ್ಯಕ್ತಿ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ವ್ಯಕ್ತಿ ಸೇತುವೆ ಮೇಲೆ ಹತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ವ್ಯಕ್ತಿಯ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಯಾವ ಮಾತನ್ನು ಕೇಳದ ವ್ಯಕ್ತಿ, ಕೊನೆಗೆ ಪೊಲೀಸರು ಕೊಟ್ಟ ಒಂದು ಭರವಸೆಯ ಮೇಲೆಗೆ ಬ್ರಿಡ್ಜ್ ನಿಂದ ಕೆಳಗೆ ಇಳಿದಿದ್ದಾರೆ.
ಕೋಲ್ಕತ್ತಾದ ಪ್ರಸಿದ್ಧ ಹೊಟೇಲ್ ನಿಂದ ಬಿರಿಯಾನಿ ತೆಗೆದು ಕೊಡುತ್ತೇವೆ ಎನ್ನುವ ಆಫರ್ ವೊಂದನ್ನು ಪೊಲೀಸರು ನೀಡಿದ್ದಾರೆ. ಈ ಮಾತನ್ನು ಕೇಳಿ ವ್ಯಕ್ತಿ ಬ್ರಿಡ್ಜ್ ನಿಂದ ಕೆಳಗೆ ಇಳಿದಿದ್ದಾರೆ.
ಖಿನ್ನೆತೆಯಲ್ಲಿದ್ದ ವ್ಯಕ್ತಿ: ಟೈಲ್ಸ್ ವ್ಯವಹಾರದಲ್ಲಿದ್ದ ವ್ಯಕ್ತಿ ಅಪಾರ ನಷ್ಟಕ್ಕೆ ಸಿಲುಕಿ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾನೆ. ಈ ಕಾರಣದಿಂದ ಆತನ ಹೆಂಡತಿ ವಿಚ್ಛೇದನ ನೀಡಿದ್ದು, ಕಿರಿಯ ಮಗಳು ಕೂಡ ಆತನ ಜೊತೆ ಬಿಟ್ಟು ಹೋಗಿದ್ದಾಳೆ. ಈ ಕಾರಣದಿಂದ ವ್ಯಕ್ತಿ ಖಿನ್ನತೆಗೆ ಒಳಗಾಗಿದ್ದ. ಸೋಮವಾರ ತನ್ನ ಹಿರಿಯ ಮಗಳೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಬ್ರಿಡ್ಜ್ ಬಳಿ ಬೈಕ್ ನಿಲ್ಲಿಸಿ, ಮಗಳ ಬಳಿ ಮೊಬೈಲ್ ಕೆಳಗೆ ಬಿದ್ದಿದೆ ಎಂದೇಳಿ, ಸೇತುವೆ ಮೇಲೆ ಹತ್ತಿದ್ದಾರೆ ಎಂದು ವರದಿ ತಿಳಿಸಿದೆ.