ಗುರುಗ್ರಾಮ್: ಮನೆ ಕೆಲಸಕ್ಕೆಂದು ಬಾಲಕಿಯನ್ನು ಮನೆಯಲ್ಲಿ ಇರಿಸಿಕೊಂಡು ದೈಹಿಕವಾಗಿ ಹಲ್ಲೆಗೈದು, ದೌರ್ಜನ್ಯವೆಸಗಿರುವ ಘಟನೆ ಹರಿಯಾಣದಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ದಂಪತಿಯನ್ನು ಬಂಧಿಸಲಾಗಿದೆ.
ಗುರುಗ್ರಾಮದ ದಂಪತಿ ಕೆಲಸಗಾರರನ್ನು ನೇಮಿಸುವ ಖಾಸಗಿ ಸಂಸ್ಥೆಯೊಂದರಿಂದ ತನ್ನ ಮೂರುವರೆ ವರ್ಷದ ಮಗಳನ್ನು ನೋಡಿಕೊಳ್ಳಲು ಅಪ್ರಾಪ್ತೆ ಬಾಲಕಿಯನ್ನು ನೇಮಿಸಿಕೊಂಡಿದ್ದರು. ಜಾರ್ಖಂಡ್ ಮೂಲದ ಬಾಲಕಿಯನ್ನು ದಂಪತಿಗಳು ಪ್ರತಿನಿತ್ಯ ಹಲ್ಲೆ ಮಾಡಿ, ಆಕೆಯ ಮೇಲೆ ದೈಹಿಕವಾಗಿ ದೌರ್ಜನ್ಯ ನಡೆಸಿರುವ ಆರೋಪದ ಮೇಲೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
ವ್ಯಕ್ತಿಯೊಬ್ಬ ಪತ್ರಕರ್ತೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಪತ್ರಕರ್ತೆ ದೀಪಿಕಾ ನಾರಾಯಣ್ ಎನ್ ಜಿಒವೊಂದಕ್ಕೆ ಈ ಬಗ್ಗೆ ಮಾಹಿತಿ ಕೊಟ್ಟು, ಅವರ ಸಹಾಯದಿಂದ ಬಾಲಕಿಯನ್ನು ರಕ್ಷಿಸಿದ್ದಾರೆ. ಎನ್ ಜಿಒ ಕೊಟ್ಟ ದೂರಿನ ಮೇರೆಗೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೀಪಿಕಾ ನಾರಾಯಣ್ ಭಾರದ್ವಾಜ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ಈ 14 ವರ್ಷದ ಬಾಲಕಿಯನ್ನು ವಿದ್ಯಾವಂತ ದಂಪತಿಗಳು ಅಮಾನುಷವಾಗಿ ಥಳಿಸಿದ್ದಾರೆ. ದೇಹದ ಪ್ರತಿಯೊಂದು ಭಾಗಕ್ಕೂ ಹಿಂಸಿಸಿದ್ದಾರೆ. ಅವಳ ಮೈಯನ್ನು ಸುಟ್ಟಿದ್ದಾರೆ. ಬ್ಲೇಡ್ ನಿಂದ ಅವಳ ದೇಹದ ಭಾಗಕ್ಕೆ ಹಾನಿ ಮಾಡಿದ್ದಾರೆ. ಎಷ್ಟೋ ದಿನದಿಂದ ಅವಳಿಗೆ ಊಟವೂ ಹಾಕಿಲ್ಲ. ಅವಳು ಕಸದ ಬುಟ್ಟಿಯಲ್ಲಿ ಉಳಿದ ಊಟವನ್ನು ತಿನ್ನುತ್ತಿದ್ದಳು. ದೈಹಿಕವಾಗಿಯೂ ಆಕೆಯ ಮೇಲೆ ದೌರ್ಜನ್ಯವೆಸಗಿದ್ದಾರೆ. ಅವಳಿಗೆ ನಿದ್ದೆಯನ್ನೂ ಮಾಡಲು ಬಿಟ್ಟಿಲ್ಲ. ಅವಳ ಬದುಕನ್ನು ನರಕವಾಗಿಸಿದ್ದಾರೆ ಎಂದು ದೀಪಿಕಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಪೊಲೀಸರು ಘಟನೆ ಬಗ್ಗೆ ಪೋಕ್ಸೋ ಹಾಗೂ ಇತರ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡು ಮನೀಶ್ ಕೌರ್ ಮತ್ತು ಕಮಲ್ಜೀತ್ ಕೌರ್ ದಂಪತಿಯನ್ನು ಬಂಧಿಸಿದ್ದಾರೆ.
ಮಾನಸಿಕ, ದೈಹಿಕವಾಗಿ ಆಘಾತಕ್ಕೆ ಒಳಗಾಗಿರುವ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪ್ರಾಪ್ತರನ್ನು ಕೆಲಸಕ್ಕೆ ಇಟ್ಟುಕೊಂಡ ಕಂಪೆನಿಯ ಬಗ್ಗೆ ಹಾಗೂ ಕುರಿತ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.