ಅಹ್ಮದಾಬಾದ್ : ಭಾರತದ ವಿರುದ್ಧ 6 ವಿಕೆಟ್ ಗಳ ಅಮೋಘ ಜಯ ಸಾಧಿಸಿ 6 ನೇ ಬಾರಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯ ಸಂಭ್ರಮಾಚರಣೆ ವೇಳೆ ಪ್ರಮುಖ ಆಟಗಾರರೊಬ್ಬರು ಟ್ರೊಫಿಯ ಮೇಲೆ ಕಾಲಿಟ್ಟು ಕುಳಿತಿರುವ ಫೋಟೋ ಸದ್ಯ ವೈರಲ್ ಆಗುತ್ತಿದೆ. ಈ ವರ್ತನೆಯ ಕುರಿತು ಸಾಮಾಜಿಕ ತಾಣಗಳಲ್ಲಿ ಖಂಡನೆಯೂ ವ್ಯಕ್ತವಾಗುತ್ತಿದೆ.
ಯಾವುದೇ ಅಧಿಕೃತ ಹ್ಯಾಂಡಲ್ ಫೋಟೋವನ್ನು ಪೋಸ್ಟ್ ಮಾಡಿಲ್ಲ. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ. ಕಾಲಿಟ್ಟು ಕುಳಿತ ಆಟಗಾರ ಮಿಚೆಲ್ ಮಾರ್ಷ್ ಅಥವಾ ಆಸ್ಟ್ರೇಲಿಯನ್ ಕ್ರಿಕೆಟ್ ಮಂಡಳಿಯಿಂದ ಅಧಿಕೃತ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ.
ಫೋಟೋದಲ್ಲಿ ಸೋಫಾದ ಮೇಲೆ ಕುಳಿತಿರುವ ಮಾರ್ಷ್ ಅವರು ತನ್ನ ಕಾಲುಗಳನ್ನು ಚಾಚಿ ವಿಶ್ವಕಪ್ ಟ್ರೋಫಿ ಮೇಲಿಟ್ಟಿರುವುದು ಕಂಡುಬಂದಿದೆ. ಈ ಫೋಟೋ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಬಲವಾದ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದ್ದು, ಆಸ್ಟ್ರೇಲಿಯ ಕ್ರಿಕೆಟ್‌ನ ಅತಿದೊಡ್ಡ ಟ್ರೋಫಿಯನ್ನು ಗೆದ್ದಿರಬಹುದು, ಆದರೆ ಗೌರವವನ್ನು ಅಲ್ಲ ಎಂದು ಹಲವರು ಹೇಳಿದ್ದಾರೆ.
ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಭಾರತದ ಒಬ್ಬ ಬಳಕೆದಾರರು 1983 ರ ವಿಶ್ವಕಪ್‌ನ ವಿಜಯದ ಕ್ಷಣವನ್ನು ಪೋಸ್ಟ್ ಮಾಡಿ, ಕಪಿಲ್ ದೇವ್ ಅವರು ಟ್ರೋಫಿಯನ್ನು ತಲೆಯ ಮೇಲೆ ಇಟ್ಟುಕೊಂಡಿದ್ದಾರೆ. “ನಮ್ಮ ಸಂಸ್ಕೃತಿ ಮತ್ತು ಅವರ ನಡುವಿನ ವ್ಯತ್ಯಾಸ” ಎಂದು ಬರೆದಿದ್ದಾರೆ.
“ಆಸೀಸ್‌ಗೆ ಇದು ವಿಷಯವಲ್ಲ, ಅವರು ನಮ್ಮಂತೆ ವಿಷಯಗಳನ್ನು ನೋಡುವುದಿಲ್ಲ. ಮುಂದುವರಿಯಿರಿ, ಚಿಂತಿಸಬೇಕಾದ ಉತ್ತಮ ವಿಷಯಗಳಿವೆ. ಈ ರೀತಿಯ ಮನಸ್ಥಿತಿಯನ್ನು ಸೋಲಿಸುವ ಬಲವಾದ ಅಗತ್ಯವಿದೆ” ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.