Advertisement

ರಾಜ್ಯಕ್ಕೆ ವೈರಾಣು ಜ್ವರ ಕಾಟ; ಡೆಂಗ್ಯೂ, ಚಿಕುನ್‌ಗುನ್ಯಾ ಹಾವಳಿ ಹೆಚ್ಚಳ

01:33 AM Dec 12, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಹವಾಮಾನ ವೈಪರೀತ್ಯದಿಂದ ವೈರಲ್‌ ಜ್ವರ, ಡೆಂಗ್ಯೂ, ಚಿಕುನ್‌ ಗುನ್ಯಾ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡಿವೆ. ಒಂದೇ ತಿಂಗಳಲ್ಲಿ 930 ಡೆಂಗ್ಯೂ, 171 ಚಿಕುನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿರುವುದು ಆತಂಕ ಹುಟ್ಟಿಸಿದೆ.

Advertisement

ಈ ನಡುವೆ ಎರಡು ದಿನಗಳಿಂದ ಸುರಿಯು ತ್ತಿರುವ ಮಳೆ ಮತ್ತಷ್ಟು ಭೀತಿ ಸೃಷ್ಟಿಸಿದೆ. ಚಳಿ ಹಾಗೂ ಮಳೆಯ ವಾತಾವರಣದಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವೈರಲ್‌ ಜ್ವರದ ಹಾವಳಿಗೆ ಜನ ತತ್ತರಿಸಿದ್ದಾರೆ. ಜ್ವರದ ಜತೆಗೆ ಅತಿಯಾದ ಕೆಮ್ಮು, ಶೀತ, ಗಂಟಲು, ತಲೆನೋವು, ಮೈ-ಕೈ ನೋವು ಮುಂತಾದ ಅನಾರೋಗ್ಯ ಲಕ್ಷಣಗಳಿಂದ ವೈದ್ಯರ ಮೊರೆ ಹೋಗುವವರ ಸಂಖ್ಯೆ ಏರಿಕೆಯಾಗಿದೆ. ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆಯು ಸಲಹೆ ನೀಡಿದೆ.

ರಾಜ್ಯದಲ್ಲಿ 8,494 ಡೆಂಗ್ಯೂ
ವಿವಿಧ ಜಿಲ್ಲೆಗಳಲ್ಲಿ ಒಂದು ತಿಂಗಳಲ್ಲೇ 930 ಡೆಂಗ್ಯೂ, 171 ಚಿಕುನ್‌ಗುನ್ಯಾ ಪ್ರಕರಣ ವರದಿಯಾಗಿದೆ. ಈವರೆಗೆ 8,494 ಡೆಂಗ್ಯೂ, 2,030 ಚಿಕುನ್‌ಗುನ್ಯಾ, 453ಕ್ಕೂ ಅಧಿಕ ಎಚ್‌1 ಎನ್‌1, 194ಕ್ಕೂ ಹೆಚ್ಚಿನ ಮಲೇರಿಯಾ, 221 ಮಿದುಳು ಜ್ವರ, 10 ಜಪಾನೀಸ್‌ ಎನ್‌ಸೆಫ‌ ಲೈಟಿಸ್‌, 16ಕ್ಕೂ ಅಧಿಕ ಕಾಲರಾ ಪ್ರಕರಣಗಳು ದಾಖಲಾಗಿವೆ.

ಚಳಿಯಿಂದ ವೈರಸ್‌ ಸಾಯುವುದಿಲ್ಲ
ಒಂದು ವಾರದಿಂದ ಅತಿಯಾದ ಜ್ವರ, ಶೀತ, ಕೆಮ್ಮು, ಮೈ-ಕೈ ನೋವಿನ ಲಕ್ಷಣಗಳಿಂದ ಮಕ್ಕಳು ಬಳಲುತ್ತಿರುವ ಪ್ರಮಾಣ ಏರಿಕೆಯಾಗುತ್ತಿದೆ. ಮಳೆ, ಚಳಿ, ಸದಾ ಮೋಡದ ಕಾಲದಲ್ಲಿ ಹೊಸ ವೈರಸ್‌ಗಳು ಉತ್ಪತ್ತಿಯಾಗುತ್ತವೆ. ಕೋವಿಡ್‌ ವೇಳೆ ಜನ ಸಾಮಾನ್ಯರು ಅತಿಯಾದ ಮುನ್ನೆಚ್ಚರಿಕೆ ವಹಿಸುತ್ತಿದ್ದರು. ಹೀಗಾಗಿ ಕಳೆದ 2 ವರ್ಷಗಳಿಂದ ವೈರಲ್‌ ಜ್ವರ ಕಡಿಮೆಯಿತ್ತು. ಇಂತಹ ಹವಾಮಾನದಲ್ಲಿ ಅಷ್ಟು ಸುಲಭವಾಗಿ ವೈರಸ್‌ಗಳು ಸಾಯವುದಿಲ್ಲ. ಸದ್ಯ ವೈರಲ್‌ ಜ್ವರಕ್ಕೆ ಕಾರಣವಾಗಿರುವ ವೈರಸ್‌ಗಳು ಬೇಗ ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತಿವೆ. ಇದು ರೋಗನಿರೋಧಕ ಶಕ್ತಿ ಕುಂದುವಂತೆ ಮಾಡಿ ನಿಶ್ಶಕ್ತಿ ಹೆಚ್ಚುತ್ತದೆ.

ಮಳೆ ನೀರು ಸರಾಗವಾಗಿ ಹರಿದು ಹೋಗದೆ ಜನವಸತಿ, ಶಾಲೆ ಆವರಣ, ಬಯಲು ಪ್ರದೇಶ, ಆಟದ ಮೈದಾನ, ಹೊಲ ಗದ್ದೆಗಳು, ರಸ್ತೆಗಳು ಜಲಾವೃತವಾಗಿವೆ. ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಲುಷಿತ ನೀರಿನಿಂದ, ಸೊಳ್ಳೆಗಳಿಂದ ರೋಗಗಳು ಹರಡುತ್ತಿವೆ. ಶುದ್ಧ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಇದರಿಂದ ಚಿಕುನ್‌ಗುನ್ಯಾ, ಡೆಂಗ್ಯೂ, ಕಾಲರಾ ಹೆಚ್ಚುವ ಸಾಧ್ಯತೆಗಳಿವೆ ಎನ್ನುತ್ತಾರೆ ತಜ್ಞರು.

Advertisement

ಏನೆಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ?
-ರೋಗಗಳ ಪತ್ತೆ ಕಾರ್ಯ ಹಾಗೂ ಚಿಕಿತ್ಸೆಗೆ ಕ್ರಮ ವಹಿಸಲು ಸೂಚನೆ.
-ಮನೆ ಸುತ್ತಮುತ್ತ ಸೊಳ್ಳೆಗಳು ಉತ್ಪತ್ತಿಯಾಗದಂತೆ ನಿಯಂತ್ರಿಸುವುದು.
-ಸಮರ್ಪಕ ಕುಡಿಯುವ ನೀರಿನ ಸರಬರಾಜು ಮತ್ತು ನಿರ್ವಹಣೆ.
-ನಿರುಪಯುಕ್ತ ಹಾಗೂ ಘನ ತ್ಯಾಜ್ಯಗಳ ಶೀಘ್ರ ವಿಲೇವಾರಿ.
-ಜ್ವರದ ಲಕ್ಷಣ ಇರುವವರು ಆಗಾಗ ಸ್ಟೀಮ್‌ ತೆಗೆದುಕೊಳ್ಳಿ.
– ನೀರಿನಂಶ ಇರುವ ಆಹಾರ ಪದಾರ್ಥ ಹೆಚ್ಚು ಸೇವಿಸಿ.
-ವಿಟಮಿನ್‌ ಸಿ ಹಾಗೂ ಎ ಇರುವ ಪದಾರ್ಥ ಸೇವಿಸಿ.
-ಮನೆಯಲ್ಲಿ ಒಬ್ಬರಿಗೆ ಜ್ವರದ ಲಕ್ಷಣ ಕಾಣಿಸಿಕೊಂಡರೆ ಮಾಸ್ಕ್ ಧರಿಸಿ
-ಮತ್ತೊಬ್ಬರ ಜತೆ ಅಂತರ ಕಾಯ್ದುಕೊಳ್ಳಿ.
-ಜ್ವರ ಬಂದಾಗ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.
-ಮಕ್ಕಳಿಗೆ ಕೆಮ್ಮು, ನೆಗಡಿ ಲಕ್ಷಣಗಳು ಇದ್ದಾಗ ಶಾಲೆಗೆ ಕಳಿಸಬೇಡಿ.
-ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ಉಡುಪು ಧರಿಸಿ.
-ಆದಷ್ಟು ಹೊರಗಿನ ಎಣ್ಣೆಯುಕ್ತ ಪದಾರ್ಥ ಸೇವಿಸಬೇಡಿ.

ಜ್ವರ ಅಥವಾ ಯಾವುದೇ  ಸೋಂಕು ಲಕ್ಷಣ ಕಂಡುಬಂದರೂ ಸಮೀಪದ ಆರೋಗ್ಯ ಕೇಂದ್ರ ಅಥವಾ ವೈದ್ಯರ ಮೂಲಕ ತಪಾಸಣೆ ಮಾಡಿಕೊಳ್ಳಬೇಕು. ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳುತ್ತಿದೆ.
-ಡಾ| ನಾಗಭೂಷಣ ಉಡುಪ,
ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ

ಸದ್ಯ ಶೀತ ಗಾಳಿಯ ಜತೆ ಮಳೆ ಬರುವ ಕಾರಣ ಕೆಲವರಲ್ಲಿ ಜ್ವರದ ಲಕ್ಷಣ ಕಂಡುಬರುತ್ತಿದೆ. ಆದಷ್ಟು ಬಿಸಿ ಆಹಾರ, ನೀರು ಸೇವಿಸಿ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ, ಜ್ವರ ಸಹಿತ ಯಾವುದೇ ಕಾಯಿಲೆಗೆ ತುತ್ತಾದರೆ ವೈದ್ಯರನ್ನು ಭೇಟಿಯಾಗಿ.
– ಡಾ| ಕಿಶೋರ್‌ ಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ, ದಕ್ಷಿಣ ಕನ್ನಡ

ಜ್ವರದ ಜತೆಗೆ ಕಣ್ಣು ಕೆಂಪಾಗುವುದು, ಸುಸ್ತು, ಮೈ-ಕೈ ನೋವಿನಿಂದ ಬಳಲುತ್ತಿರುವ ರೋಗ ಲಕ್ಷಣಗಳು ಮಕ್ಕಳಲ್ಲಿ ಕಂಡುಬರುತ್ತಿವೆ. ಆದಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.
-ಡಾ| ಎನ್‌. ನಿಜಗುಣ,
ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ.

ಕೆಲವು ದಿನಗಳಿಂದ ವೈರಲ್‌ ಜ್ವರಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಿದೆ. ಜನ ಸಾಮಾ ನ್ಯರು ಆತಂಕ ಪಡುವ ಅಗತ್ಯವಿಲ್ಲ. ವಾತಾ ವರಣ ಸಹಜ ಸ್ಥಿತಿಗೆ ಬಂದ ಅನಂತರ ಜ್ವರದ ಪ್ರಮಾಣ ನಿಯಂತ್ರಣಕ್ಕೆ ಬರುವ ಸಾಧ್ಯತೆಗಳಿವೆ.
-ಡಾ| ಕೆ.ಸಿ. ಗುರುದೇವ್‌,
ರಾಮಯ್ಯ ಸ್ಮಾರಕ ಆಸ್ಪತ್ರೆ ಅಧ್ಯಕ್ಷ

ಇನ್ನೂ ಎರಡು ದಿನ ಮಳೆ
ಮ್ಯಾಂಡಸ್‌ ನಿಂದಾಗಿ ರವಿವಾರವೂ ಬೆಂಗ ಳೂರು ಸೇರಿದಂತೆ ರಾಜ್ಯದ ಕೆಲವೆಡೆಗಳಲ್ಲಿ ಮಳೆಯಾಗಿದೆ. ವಿಪರೀತ ಚಳಿಯೂಇದೆ. ಮ್ಯಾಂಡಸ್‌ ಚಂಡಮಾರುತ ದುರ್ಬಲ ಗೊಳ್ಳುತ್ತಿದ್ದರೂ ಇನ್ನೂ ಎರಡು ದಿನಗಳ ಕಾಲ ಇದರ ಪ್ರಭಾವ ಕರಾವಳಿ ಭಾಗಕ್ಕೆ ಇರುವ ಸಾಧ್ಯತೆ ಇದೆ. ಮೇಲ್ಮೈ ಸುಳಿಗಾಳಿ ಇರುವ ಪರಿಣಾಮ ಕರಾವಳಿ ಭಾಗದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ವೇಗವಾದ ಗಾಳಿ ಬೀಸುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಎರಡು ದಿನ
ಎಲ್ಲೋ ಅಲರ್ಟ್‌
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಡಿ. 12 ಮತ್ತು 13ರಂದು ಕರಾವಳಿ ಭಾಗದಲ್ಲಿ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಈ ವೇಳೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

- ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next