ಕಲಬುರಗಿ: ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಮುಖ್ಯಮಂತ್ರಿ ಬದಲಾವಣೆ ವಿಷಯವು ಯೋಗ್ಯ ಮತ್ತು ಅಯೋಗ್ಯತೆ ಮೇಲೆ ನಿರ್ಧಾರವಾಗಲಿ. ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪನವರು ಯೋಗ್ಯರಾಗಿದ್ದರೆ ಮುಂದುವರೆಸಲಿ. ಆ ಸ್ಥಾನಕ್ಕೆ ಅಯೋಗ್ಯರಾಗಿದ್ದರೆ ಅವರನ್ನು ತೆಗೆಯಲಿ ಎಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ವಿರಕ್ತ ಮಠದ ಸಿದ್ದಲಿಂಗ ಮಹಾಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ಮುಖ್ಯಮಂತ್ರಿ ಸ್ಥಾನ ನಿರ್ಧಾರ ಮಾಡುವುದು ಹೈಕಮಾಂಡ್. ನಾವು ಸ್ವಾಮಿಗಳು ಅಲ್ಲ. ನಾವು ಹೇಳಿದ ತಕ್ಷಣಕ್ಕೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ, ಮುಂದುವರೆಯುವುದಿಲ್ಲ ಎಂದೇನು ಇಲ್ಲ ಎಂದರು.
ಆ ಸ್ವಾಮಿಗಳು ಬೆಂಬಲ ಕೊಟ್ಟರು. ಈ ಸ್ವಾಮಿಗಳು ಬೆಂಬಲ ಕೊಟ್ಟರು ಎನ್ನುವುದು ಸುಮ್ಮನೆ. ಅದು ವ್ಯರ್ಥ ಕೂಡ. ಮೇಲಿರುವವರು ಯಾರ ಮಾತನ್ನೂ ಕೇಳುವುದಿಲ್ಲ. ಅವರದ್ದೇ ಸಿದ್ಧಾಂತ ಇರುತ್ತದೆ. ತೆಗೆಯಬೇಕೆಂದರೆ ತೆಗೆದು ಬಿಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ:ಅನೈತಿಕ ಸಂಬಂಧ: ತಿಳಿ ಹೇಳಿದರೂ ಸರಿ ಹೋಗದ ವ್ಯಕ್ತಿಯನ್ನು ಹಲ್ಲೆ ಮಾಡಿ ಕೊಲೆಗೈದ ಸಂಬಂಧಿಕರು!
ಮುಖ್ಯಮಂತ್ರಿಗಳ ಪರವಾಗಿ ಸ್ವಾಮೀಜಿಗಳು ಮಾತನಾಡುವ ಪದ್ಧತಿ ಈ ಹಿಂದೆ ಇರಲಿಲ್ಲ. ಕಲಬುರಗಿ ಜಿಲ್ಲೆಯವರೇ ಆಗಿದ್ದ ವೀರೇಂದ್ರ ಪಾಟೀಲ ಮತ್ತು ಧರಂಸಿಂಗ್ ಕೂಡ ಮುಖ್ಯಮಂತ್ರಿಗಳಾಗಿದ್ದರು. ಇವರ ಪರವಾಗಿ ಯಾವ ಸ್ವಾಮಿ ಕೂಡ ಮಾತನಾಡಿರಲಿಲ್ಲ. ಧರಂಸಿಂಗ್ ಮನೆ ಸ್ವಾಮಿಗಳ ಕೇಂದ್ರವಾಗಿತ್ತು. ಆದರೂ, ಯಾವ ಸ್ವಾಮಿ ಮಾತನಾಡಿರಲಿಲ್ಲ ಎಂದರು.
ಈಗ ಯಡಿಯೂರಪ್ಪ ವಿಷಯ ಎಂದಾಗ ಎಲ್ಲಾ ಮಠಾಧೀಶರು ಮಾತನಾಡಲು ಶುರು ಮಾಡುತ್ತಾರೆ. ಯಾಕೆ ಎಲ್ಲ ಮಠಗಳಿಗೆ 50 ಲಕ್ಷ ರೂ. ಬರೆದಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಎಂದೂ ಅವರು ಪ್ರಶ್ನಿಸಿದರು.
ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಸುವುದಕ್ಕಾಲಿ ಅಥವಾ ತೆಗೆಯಲು ಸ್ವಾಮಿಗಳು ಮಾತನಾಡುವುದೇ ಸರಿಯಲ್ಲ. ಇದನ್ನು ನಿರ್ಧಾರ ಮಾಡುವುದಕ್ಕೆ ರಾಜಕೀಯ ಇದೆ. ಅವರ ಪಕ್ಷದ ವರಿಷ್ಠರು ಇದ್ದಾರೆ. ಅವರೇ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಅಯೋಗ್ಯನಾಗಿದ್ದರೆ ತೆಗೆಯುತ್ತಾರೆ. ಯೋಗ್ಯತೆ ಇತ್ತು ಎಂದರೆ ಮುಂದುವರೆಸುತ್ತಾರೆ ಅಷ್ಟೇ. ಇದರ ಬಗ್ಗೆ ನಾವು ಮಠಾಧೀಶರು ತಲೆಕೆಡಿಸಿಕೊಳ್ಳಲ್ಲ ಎಂದು ಸ್ಪಷ್ಟವಾಗಿ ಹೇಳಿದರು.