Advertisement
ನನ್ನ ತಂದೆ ಶ್ರೀಮಂತರಾಗಿರಲಿಲ್ಲ. ನಾನು ವಿದ್ಯಾವಂತ ಕುಟುಂಬದಿಂದಲೂ ಬಂದವನಲ್ಲ. ಮೊದಲಿನಿಂದಲೂ ನಾನು ಓದು ಬರಹದ ವಿಷಯದಲ್ಲಿ ಬಹಳ ಹಿಂದಿದ್ದೆ. ಸತ್ಯವೇನೆಂದರೆ ಪ್ರಾಥಮಿಕ ಶಾಲೆಯಲ್ಲಿ ಮೂರು ಬಾರಿ, ಪ್ರೌಢಶಾಲೆಯಲ್ಲೂ ಮೂರು ಬಾರಿ ನಾನು ಫೇಲ್ ಆಗಿದ್ದೇನೆ. ದೊಡ್ಡವನಾದ ಮೇಲೆ ಹಾರ್ವರ್ಡ್ ವಿಶ್ವವಿದ್ಯಾಲಯ ಸೇರಿಕೊಳ್ಳಬೇಕೆಂಬ ಅದಮ್ಯ ಕನಸು ನನ್ನಲ್ಲಿ ಚಿಗುರೊಡೆಯಿತು. ಪದವಿ ಸೇರುವ ವಯಸ್ಸಿಗೆ ಬಂದಾಗ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಆದರೆ ನನ್ನ ಅರ್ಜಿ ತಿರಸ್ಕೃತವಾಯಿತು. ಅದೂ ಒಂದೆರಡು ಬಾರಿಯಲ್ಲ ಬರೋಬ್ಬರಿ 10 ಬಾರಿ! ಕಡೇಪಕ್ಷ ನನ್ನ ಜೊತೆ ದೂರವಾಣಿಯಲ್ಲಿ ಮಾತನಾಡುವುದಕ್ಕೆ ಅಥವಾ ಸಂದರ್ಶನ ಮಾಡಲೂ ಹಾರ್ವರ್ಡ್ ಸಿದ್ಧವಿರಲಿಲ್ಲ. ಆ ಸಮಯದಲ್ಲಿ ನಾನು ಬಹಳ ಬೇಸತ್ತಿದ್ದೆ, ಬಳಲಿ ಬೆಂಡಾಗಿದ್ದೆ. ಹಿಡಿದ ಯಾವ ಕೆಲಸವೂ ಕೈಗೂಡುತ್ತಿರಲಿಲ್ಲ. ಆದರೆ ಜೀವನದಲ್ಲಿ ನನಗಾಗಿ ಬೃಹತ್ ಆದದ್ದು ಏನೋ ಕಾದಿದೆ ಎಂದು ಆ ಕಡುಕಷ್ಟದ ಸಮಯದಲ್ಲೂ ನನಗೆ ಅನ್ನಿಸುತ್ತಿತ್ತು. ನನಗೆ ಅವಕಾಶಗಳು ಸಿಗುತ್ತಿಲ್ಲ ಎಂದರೆ, ನಾನು ಕಷ್ಟ ಪಟ್ಟು ಕೆಲಸ ಮಾಡುತ್ತಿಲ್ಲ ಎಂದು ಅರ್ಥವಾಗತೊಡಗಿತು. ನಾನು ಜೀವನದಲ್ಲಿ ಕಲಿತ ಅತಿದೊಡ್ಡ ಪಾಠವಿದು.
Related Articles
Advertisement
ಬಿಡಲಿಲ್ಲ ಪಟ್ಟು!: ಇದಕ್ಕಾಗಿ ನಾನು ಕುಟುಂಬವರ್ಗ ಮತ್ತು ಗೆಳೆಯರ ಬಳಿ 2000 ಡಾಲರ್‌ನಷ್ಟು ಹಣ ಕೇಳಿ ಪಡೆದೆ. ಆಗ ಮತ್ತು ಈಗಲೂ ನಾವು ಮಾಡುವ ಕೆಲಸವಿಷ್ಟೆ: ಗ್ರಾಹಕರನ್ನು, ಉದ್ಯಮಿಗಳ ಹತ್ತಿರ ಕರೆದೊಯ್ಯುವುದು. (ಉದ್ಯಮಿಗಳೆಂದರೆ ಚಿಕ್ಕ ವರ್ತಕರು). ಆದರೆ ಮೊದ ಮೊದಲು ಕಂಪನಿಯ ಆದಾಯ ಹೇಗಿತ್ತೆಂದರೆ, ಅದರಿಂದ ನಮ್ಮ ಕಟ್ಟಡದ ಬಾಡಿಗೆಯನ್ನೂ ಕಟ್ಟಲಾಗುತ್ತಿರಲಿಲ್ಲ! ವೇಗದ ಅಂತರ್ಜಾಲ ಸಿಕ್ಕರೆ ನಮ್ಮ ಉದ್ಯಮ ಬೆಳೆಯುತ್ತದೆ ಎಂದು ಗೊತ್ತಿತ್ತು. ಆದರೆ ಎಷ್ಟು ಪ್ರಯತ್ನಪಟ್ಟರೂ ನಮಗೆ ಚೀನಾದ ದೂರಸಂಪರ್ಕ ಇಲಾಖೆಯ ಬೆಂಬಲ ಸಿಗಲಿಲ್ಲ. ಕೈಯಲ್ಲಿದ್ದ ಅಲ್ಪಸ್ವಲ್ಪ ಹಣವೂ ಕರಗತೊಡಗಿತ್ತು. ಬ್ಯಾಂಕುಗಳು ನಮ್ಮ ಕಂಪೆನಿಗೆ ಸಾಲ ನೀಡಲು ನಿರಾಕರಿಸತೊಡಗಿದವು. ಆದರೆ ನಾನು ಧೃತಿಗೆಡಲಿಲ್ಲ. ಸುಮಾರು ಮೂರ್ನಾಲ್ಕು ವರ್ಷ ಹೇಗೋ ಅಲಿಬಾಬಾವನ್ನು ಒದ್ದಾಡುತ್ತಾ ಉಳಿಸಿದೆ. ಅದು 1999. ನನ್ನ ಕೆಲವು ಸ್ನೇಹಿತರು ಮತ್ತು ಹೂಡಿಕೆದಾರರನ್ನು ನಮ್ಮ ಚಿಕ್ಕ ಅಪಾರ್ಟಮೆಂಟ್‌ಗೆ ಆಹ್ವಾನಿಸಿದೆ. ಅವರು ಒಟ್ಟು 18 ಮಂದಿಯಿದ್ದರು. ಅವರಿಗೆಲ್ಲ ಹೇಗೆ ‘ಅಂತರ್ಜಾಲವೇ ಜಗತ್ತಿನ ಭವಿಷ್ಯ’ ಎನ್ನುವುದನ್ನು ಅರ್ಥಮಾಡಿಸಲು ಪ್ರಯತ್ನಿಸಿದೆ. ಜಾಗತಿಕವಾಗಿ ಅಮೆರಿಕನ್ನರು ಹಾರ್ಡ್‌ವೇರ್‌ನಲ್ಲಿ ಪ್ರಬಲರಾಗಿರಬಹುದು. ಆದರೆ ಮಾಹಿತಿ ತಂತ್ರಜ್ಞಾನದಲ್ಲಿ ಚೀನಿಯರೇ ಮುಂದಿದ್ದಾರೆ. ನಮ್ಮ ಈ ಗುಣವನ್ನು ಬಳಸಿಕೊಂಡು ಅಮೆರಿಕನ್ ಉದ್ಯಮಗಳ ಸಮಕ್ಕೆ ನಾವು ಬೆಳೆದುನಿಲ್ಲಬಹುದು ಎಂದು ಅವರಿಗೆ ಸುಮಾರು ಮೂರು ಗಂಟೆಯವರೆಗೆ ವಿವರಿಸಿ ಹೇಳಿದೆ. ಆದರೆ ಇದೆಲ್ಲದರೊಟ್ಟಿಗೆ ಅಂದು ಅಲ್ಲಿ ನೆರೆದಿದ್ದವರಿಗೆಲ್ಲ ಒಂದು ಮಾತನ್ನಂತೂ ಸ್ಪಷ್ಟವಾಗಿ ಹೇಳಿಬಿಟ್ಟೆ: ‘ನೋಡಿ ನೀವು ಈ ಕಂಪನಿಯ ಭಾಗವಾದರೆ ಕಷ್ಟಪಟ್ಟು ದುಡಿಯಲೇಬೇಕು. ಬೆಳಗ್ಗೆ 10 ಗಂಟೆಗೆ ಬಂದು 5 ಗಂಟೆಗೆ ಮನೆಗೆ ಹೋಗಿಬಿಡುತ್ತೇನೆ ಎಂದರೆ ನಡೆಯುವುದಿಲ್ಲ. ಪರಿಶ್ರಮ ಹಾಕುವುದಿಲ್ಲ, 5 ಗಂಟೆಗೇ ನಾನು ಮನೆಗೆ ಹೋಗುತ್ತೇನೆ ಎಂದರೆ ನಾವು ಯಾವುದಾದರೂ ಕಾರ್ಪೊರೇಟ್ ಕೆಲಸಕ್ಕೆ ಸೇರಿಕೊಳ್ಳುವುದು ಒಳಿತು.’ಕೊನೆಗೂ ಅವರೆಲ್ಲ ನನ್ನ ಮಾತಿಗೆ ಸಹಮತಿಸುತ್ತಾ ತಮ್ಮ ಕೈಲಾದಷ್ಟು ಹಣ ಹೂಡಿಕೆ ಮಾಡಲು ಮುಂದೆ ಬಂದರು. ನಿಮಗೆ ಗೊತ್ತಿರಲಿ, ನಾನು ಜೀವನದಲ್ಲಿ ಎಂದಿಗೂ ಕೋಡ್ ಬರೆದವನಲ್ಲ. ಸಾಫ್ಟ್ವೇರ್‌ನ ಒಳಹೂರಣವೂ ನನಗೆ ತಿಳಿದಿಲ್ಲ. ಆದರೆ ಅದನ್ನು ಬಲ್ಲವರು, ನನ್ನ ಐಡಿಯಾಗಳಿಗೆ ರೂಪಕೊಡುವವರು ಇದ್ದಾರೆ, ಅವರನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದಂತೂ ಗೊತ್ತಿತ್ತು!
ಬದಲಾಯಿತು ಬದುಕು: ಅಲಿಬಾಬಾ ಕಂಪನಿಯನ್ನು ಬೆಳೆಸಲು ನಾವು ಮುಂದಾದಾಗ ಮತ್ತು ಈಗಲೂ ಒಂದು ಸಿದ್ಧಾಂತವನ್ನು ಮಾತ್ರ ಚಾಚೂತಪ್ಪದೇ ಪಾಲಿಸುತ್ತ ಬಂದಿದ್ದೇವೆ. ನಮಗೆ ಗ್ರಾಹಕನ ಹಿತಾಸಕ್ತಿಯೇ ಮೊದಲ ಆದ್ಯತೆ, ನಂತರದ ಸ್ಥಾನ ವರ್ತಕರದ್ದು, ಕೊನೆಯ ಸ್ಥಾನ ಹೂಡಿಕೆದಾರರದ್ದು! ಈ ಕಾರಣಕ್ಕಾಗಿಯೇ ಇಂದು ನಮ್ಮ ಉದ್ಯಮಗಳೆಲ್ಲ ಗ್ರಾಹಕ ಸ್ನೇಹಿಯೆನೆಸಿಕೊಂಡಿವೆ. ಗ್ರಾಹಕರು ಮತ್ತು ವರ್ತಕರು ಇದನ್ನು ಬೆಳೆಸುತ್ತಿದ್ದಾರೆಯೇ ಹೊರತು ನಾವಂತೂ ಖಂಡಿತ ಅಲ್ಲ! ಈಗ 2 ದಶಕದ ನಂತರ ಅಲಿಬಾಬಾ ಸೇರಿದಂತೆ ಹತ್ತಾರು ಕಂಪನಿಗಳನ್ನು ನಾನು, ನನ್ನ ಗೆಳೆಯರು ಕಟ್ಟಿನಿಲ್ಲಿಸಿದ್ದೇವೆ. ದಿನಕ್ಕೆ ಏನಿಲ್ಲವೆಂದರೂ 10 ಕೋಟಿ ಗ್ರಾಹಕರು ನಮ್ಮ ತಾಣಕ್ಕೆ ಭೇಟಿಕೊಟ್ಟು ಖರೀದಿ ಮಾಡುತ್ತಿದ್ದಾರೆ. 2004ರಲ್ಲಿ ನಾನು ‘ಅಲಿಪೇ’ ಎಂಬ ಆನ್‌ಲೈನ್ ಪೇಮೆಂಟ್ ಕಂಪನಿಯನ್ನು ಸ್ಥಾಪಿಸಲು ಮುಂದಾದಾಗ ನನ್ನ ಐಡಿಯಾ ಕೇಳಿದ ಬಹುತೇಕರು ‘ಇಂಥ ಮೂರ್ಖ ಐಡಿಯಾವನ್ನು ಇದುವರೆಗೂ ಕೇಳಿರಲೇ ಇಲ್ಲ’ ಎಂದು ಮೂದಲಿಸಿದ್ದರು. ಆಲಿಬಾಬಾದಿಂದ ಗಳಿಸಿದ ಹಣವನ್ನೆಲ್ಲ ಅಲಿಪೇನಲ್ಲಿ ಕಳೆದುಕೊಳ್ಳುತ್ತೇನೆ ಎಂದೂ ಎಚ್ಚರಿಸಿದ್ದರು. ಇಂದು 8 ಕೋಟಿ ಗ್ರಾಹಕರು ಅಲಿಪೇ ಬಳಸುತ್ತಿದ್ದಾರೆ! ಈಗ ಇದನ್ನೆಲ್ಲ ನೋಡಿ ಜನ ಆಶ್ಚರ್ಯದಿಂದ ಕೇಳುತ್ತಾರೆ. “ಜಾಕ್ ಇದೆಲ್ಲ ಹೇಗೆ ಸಾಧ್ಯವಾಯಿತು? ನಿನಗೇ ಏಕೆ ಇಷ್ಟೊಂದು ಅವಕಾಶಗಳು ಎದುರಾಗುತ್ತವೆ? ನಿನ್ನಂಥ ಅದೃಷ್ಟ ಬೇರೆಯವರಿಗೇಕೆ ಎದುರಾಗುತ್ತಿಲ್ಲ?”.
ಇವರೆಲ್ಲ “ಜಾಕ್ ನನಗೆ ಅವಕಾಶಗಳು ಸಿಗುತ್ತಿಲ್ಲ, ಜಾಬ್ ಸಿಗುತ್ತಿಲ್ಲ, ಕೆಲಸ ಖುಷಿ ಕೊಡುತ್ತಿಲ್ಲ’ ಎಂದು ಗೋಳಾಡುತ್ತಲೇ ಇರುತ್ತಾರೆ. ಅವಕಾಶಗಳು ಎದುರಾಗದಿದ್ದರೆ ಅದನ್ನು ನಾವೇ ಸೃಷ್ಟಿಸಿಕೊಳ್ಳಬೇಕಲ್ಲವೇ? ನಾನು ಬಹಳಷ್ಟು ಯುವಕರನ್ನು ನೋಡುತ್ತೇನೆ. ಅವರ ಬಳಿ ಫೆಂಟಾಸ್ಟಿಕ್ ಎನ್ನುವಂಥ ಐಡಿಯಾಗಳಿರುತ್ತವೆ. ಆದರೆ ಅವರು ಆ ಐಡಿಯಾವನ್ನು ಮೂಲೆಗೆ ತಳ್ಳಿ, ಮತ್ತದೇ ಬೋರಿಂಗ್ ಕೆಲಸಕ್ಕೆ ಹಿಂದಿರುಗುತ್ತಾರೆ. ನಿಮಗೆ ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿದ್ದರೆ ಮುನ್ನುಗ್ಗುವುದನ್ನು ನಿಲ್ಲಿಸಬೇಡಿ. ಎಡವಿ ಬಿದ್ದರೇನಂತೆ? ಮೈಕೊಡವಿಕೊಂಡು ಏಳಲು ಸಾಧ್ಯವಿಲ್ಲವೇನು? ತಂದೆ -ತಾಯಿಯ ಒತ್ತಡಕ್ಕೋ, ಸ್ನೇಹಿತರ ಮೂದಲಿಕೆಗೋ, ಎದುರಾಗುವ ಕಷ್ಟಗಳಿಗೋ ತಲೆಬಾಗುತ್ತೀರಿ ಎಂದಾದರೆ ಜೀವನ ಪರ್ಯಂತ ಅದೇ ಸ್ಥಿತಿಯಲ್ಲೇ ಬದುಕುತ್ತೀರಿ!
ನನ್ನ ಜೀವನಾನುಭವದ ಆಧಾರದಲ್ಲಿ ಈ ಮಾತು ಹೇಳುತ್ತಿದ್ದೇನೆ: ‘ಎಂದಿಗೂ ಕೈ ಚೆಲ್ಲಬೇಡಿ. ಇಂದು ನೀವು ಕಷ್ಟವೆದುರಿಸುತ್ತಿರಬಹುದು. ನಾಳೆ ನಿಮಗೆ ಇನ್ನಷ್ಟು ಕಷ್ಟ ಎದುರಾಗಬಹುದು. ಆದರೆ ನಾಡಿದ್ದು ನಿಮ್ಮ ಜೀವನದಲ್ಲಿ ಗಾಢಾಂದಕಾರವನ್ನು ಹಿಮ್ಮೆಟ್ಟಿಸುತ್ತಾ ಬರುತ್ತದೆ ಸೂರ್ಯೋದಯ!.ಆದರೆ ಅಲ್ಲಿಯವರೆಗೂ ನೀವು ಗಟ್ಟಿಯಾಗಿ ನಿಲ್ಲಬೇಕಷ್ಟೆ!”
– ಜಾಕ್ ಮಾ, ಚೀನದ ಉದ್ಯಮಿ, ಅಲಿಬಾಬಾ ಸಮೂಹದ ಸ್ಥಾಪಕ