ಹೊಸದಿಲ್ಲಿ: ಪೂರ್ವ ಲಡಾಖ್ ನಲ್ಲಿ ಭಾರತ – ಚೀನಾ ಸಂಘರ್ಷ ಮುಂದುವರಿದಿದ್ದು, ಸೋಮವಾರ ರಾತ್ರಿ ಓರ್ವ ಕರ್ನಲ್ ಸೇರಿದಂತೆ ಮೂವರು ಭಾರತೀಯ ಯೋಧರನ್ನು ಚೀನಾ ಸೈನಿಕರು ಹತ್ಯೆಗೈದಿರುವ ಘಟನೆ ನಡೆದಿದೆ.
ಪೂರ್ವ ಲಾಡಾಖ್ ನಲ್ಲಿ ಭಾರತದ ಗಡಿಗೆ ಅತಿಕ್ರಮಣ ಮಾಡಿರುವ ಚೀನಾ ಸೈನಿಕರು ಮತ್ತು ಭಾರತೀಯ ಯೋಧರ ನಡುವೆ ಸಂಘರ್ಷವಾಗಿದೆ. ಕಳೆದ ರಾತ್ರಿ ಅತಿಕ್ರಮಣ ಮಾಡಿದ ಚೀನಾ ಸೈನಿಕರನ್ನು ತಡೆಯಲು ಮುಂದಾದ ಭಾರತೀಯ ಸೈನಿಕರ ನಡುವೆ ತಳ್ಳಾಟಗಳು ನಡೆದಿತ್ತು ಎನ್ನಲಾಗಿದೆ. ನಂತರ ಗುಂಡಿನ ದಾಳಿ ನಡೆದಿದ್ದು, ಮೂವರು ಭಾರತೀಯರು ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಉಭಯ ದೇಶಗಳ ಉನ್ನತ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ಗಡಿಯಲ್ಲಿ ಭಾರತ ಚೀನಾ ಸೈನಿಕರ ಸಂಘರ್ಷ ನಡೆಯುತ್ತದೆ. ಆದರೆ ಗುಂಡಿನ ದಾಳಿಗಳು ನಡೆದಿರಲಿಲ್ಲ. ಆದರೆ ಸೋಮವಾರ ರಾತ್ರಿ ಚೀನಿ ಸೈನಿಕರು ದಿಢೀರ್ ಗುಂಡಿನ ದಾಳಿ ನಡೆಸಿದ್ದಾರೆ.
ಲಡಾಖ್ನ ಪ್ಯಾಂಗೋಂಗ್ ಟ್ಸೋ ಸರೋವರದ ಬಳಿ ಇರುವ ಗಡಿಭಾಗದಲ್ಲಿ ಕಳೆದ ಕೆಲ ವಾರಗಳಿಂದ ಚೀನಾ ಸೈನಿಕರು ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಭಾರತೀಯ ಸೈನಿಕರೂ ಪ್ರತಿರೋಧ ತೋರುತ್ತಿದ್ದಾರೆ. ಸರೋವರದ ಬಳಿಯ ಗಡಿಭಾಗದ ಒಂದು ಆಯಕಟ್ಟಿನ ಜಾಗದಲ್ಲಿ ಭಾರತ ರಸ್ತೆ ನಿರ್ಮಿಸುತ್ತಿದೆ. ಹಾಗೆಯೇ, ಗಾಲ್ವನ್ ಕಣಿವೆಯಲ್ಲಿ ಡರ್ಬುಕ್-ಶಯೋಕ್-ದೌಲತ್ ಬೇಗ್ ಓಲ್ಡೀ ರಸ್ತೆಯನ್ನು ಸಂಪರ್ಕಿಸುವ ಮತ್ತೊಂದು ರಸ್ತೆಯನ್ನೂ ನಿರ್ಮಿಸಲಾಗುತ್ತಿದೆ. ಈ ರಸ್ತೆ ನಿರ್ಮಾಣ ಕಾರ್ಯಕ್ಕೆ ಚೀನೀಯರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ.
ಲಡಾಖ್ ಭಾಗದಲ್ಲಿ ಚೀನಾ ತನ್ನ ತುಕಡಿಯನ್ನು ನಿಯೋಜಿಸಿದ್ದು, ಮದ್ದುಗುಂಡುಗಳನ್ನು ಗಡಿ ಭಾಗಕ್ಕೆ ಸರಬರಾಜು ಮಾಡುತ್ತಿದೆ. ಭಾರತವೂ ಎಲ್ಲಾ ರಕ್ಷಣಾ ಸಿದ್ದತೆ ಮಾಡಿಕೊಂಡಿದ್ದು, ಉಭಯ ದೇಶಗಳ ನಡುವೆ ಯುದ್ದದ ಕಾರ್ಮೋಡವೂ ಕವಿದಿದೆ.