Advertisement

ದಿಲ್ಲಿ ಬೂದಿ ಮುಚ್ಚಿದ ಕೆಂಡ; ಹಿಂಸಾಚಾರ ಪೀಡಿತ ಪ್ರದೇಶಗಳು ಬಹುತೇಕ ಶಾಂತ

12:51 AM Feb 28, 2020 | Team Udayavani |

ಹೊಸದಿಲ್ಲಿ: ಅನಿರೀಕ್ಷಿತ ಹಿಂಸಾಚಾರಕ್ಕೆ ಸಾಕ್ಷಿಯಾದ ಈಶಾನ್ಯ ದಿಲ್ಲಿ ಬಹುತೇಕ ಸ್ತಬ್ಧವಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ವ್ಯಾಪಕ ಗಲಭೆಯನ್ನು ಕಂಡ ಜಫ‌ರಾಬಾದ್‌, ಮೌಜ್‌ಪುರ, ಚಾಂದ್‌ಬಾಘ…, ಗೋಕುಲ್‌ಪುರಿ ಮತ್ತು ಸುತ್ತಮುತ್ತಲ ಪ್ರದೇಶಗಳು ಶಾಂತವಾಗಿದ್ದರೂ ಜನರ ಆತಂಕ ದೂರವಾಗಿಲ್ಲ.

Advertisement

ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದು, ಸುಟ್ಟು ಕರಕಲಾಗಿರುವ ಮಳಿಗೆಗಳಿಂದ ಅಳಿದುಳಿದ ವಸ್ತು ಗಳನ್ನು ಹೆಕ್ಕುತ್ತಿರುವ ಬೆರಳೆಣಿಕೆಯ ಮಂದಿ ಕಾಣಸಿಗು ತ್ತಿದ್ದಾರೆ. ಎಲ್ಲೆಲ್ಲೂ ಪೊಲೀಸರ ಬಿಗಿಭದ್ರತೆಯಿದ್ದು, ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಬುಧವಾರ ಮಧ್ಯರಾತ್ರಿಯಿಂದ ಗುರುವಾರ ಬೆಳಗ್ಗೆ 8 ಗಂಟೆಯ ವರೆಗೆ ಅಗ್ನಿಶಾಮಕ ದಳಕ್ಕೆ 19 ಕರೆಗಳು ಬಂದಿವೆ ಎಂದು ದಿಲ್ಲಿ ಅಗ್ನಿಶಾಮಕ ನಿರ್ದೇಶಕ ಅತುಲ್‌ ಗರ್ಗ್‌ ತಿಳಿಸಿದ್ದಾರೆ.

ಸಾವಿನ ಸಂಖ್ಯೆ 38ಕ್ಕೆ ಏರಿಕೆ
ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ ಗುರುವಾರ 38ಕ್ಕೇರಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 48 ಎಫ್ಐಆರ್‌ ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಗಲಭೆಯ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಎಲ್ಲ ಪ್ರಕರಣ ಗಳನ್ನೂ ದಿಲ್ಲಿ ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿದೆ.

ಬಾಲಕಿ ನಾಪತ್ತೆ
ಖಜೂರಿ ಖಾಸ್‌ ಪ್ರದೇಶದಲ್ಲಿ ಪರೀಕ್ಷೆಗೆಂದು ತೆರಳಿದ್ದ 13ರ ಬಾಲಕಿ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದಾಳೆ. ಈ ಕುರಿತು ಎಫ್ಐಆರ್‌ ದಾಖ ಲಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.

ತಲಾ 10 ಲಕ್ಷ ರೂ. ಪರಿಹಾರ
ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹಿಂಸಾಚಾರ ದಲ್ಲಿ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಂಭೀರ ಗಾಯಗೊಂಡವರಿಗೆ ತಲಾ 2 ಲಕ್ಷ ರೂ., ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದಿದ್ದಾರೆ. ಗಲಭೆಯಲ್ಲಿ ಪಾಲ್ಗೊಂಡವರು ಆಪ್‌ಗೆ ಸೇರಿದವರಾಗಿದ್ದರೆ, ಅವರಿಗೆ ದುಪ್ಪಟ್ಟು ಶಿಕ್ಷೆ ನೀಡಿ ಎಂದೂ ಹೇಳಿದ್ದಾರೆ.

Advertisement

ಆಪ್‌ ನಾಯಕನ ಮನೆಯಲ್ಲಿ ಪೆಟ್ರೋಲ್‌ ಬಾಂಬ್‌!
ಹಿಂಸಾಚಾರದ ಸಂದರ್ಭದಲ್ಲಿ ಆಪ್‌ನ ಕೌನ್ಸಿಲರ್‌ ತಾಹೀರ್‌ ಹುಸೇನ್‌ ಮಾಲಕತ್ವದ ಕಟ್ಟಡದ ಮೇಲಿಂದ ದುಷ್ಕರ್ಮಿಗಳು ಕಲ್ಲು ಮತ್ತು ಪೆಟ್ರೋಲ್‌ ಬಾಂಬ್‌ಗಳನ್ನು ಎಸೆಯುತ್ತಿದ್ದ ವೀಡಿಯೋ ಗುರುವಾರ ಬಹಿರಂಗವಾಗಿದೆ. ಜತೆಗೆ ಕಟ್ಟಡದಲ್ಲಿ ಆ್ಯಸಿಡ್‌ ಪ್ಯಾಕೆಟ್‌ಗಳು, ಕಲ್ಲುಗಳ ರಾಶಿಯೂ ಪತ್ತೆಯಾಗಿದೆ.
ಇದೇ ವೇಳೆ ಮೃತ ಗುಪ್ತಚರ ಇಲಾಖೆ ಸಿಬಂದಿ ಅಂಕಿತ್‌ ಶರ್ಮಾ ಕುಟುಂಬ ಸದಸ್ಯರೂ ಅಂಕಿತ್‌ ಸಾವಿಗೆ ತಾಹೀರ್‌ ಹುಸೇನ್‌ ಕಾರಣ ಎಂದು ಆರೋಪಿಸಿದ್ದಾರೆ. ತಾಹೀರ್‌ ಹುಸೇನ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಮುಗಿಯುವ ತನಕ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

4 ವಾರ ಕಾಲಾವಕಾಶ
ಪ್ರಚೋದಕ ಹೇಳಿಕೆ ನೀಡಿದ ಬಿಜೆಪಿಯ ಮೂವರು ನಾಯಕರ ವಿರುದ್ಧ ಎಫ್ಐಆರ್‌ ದಾಖಲಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಪಿಐಎಲ್‌ ವಿಚಾರಣೆ ನಡೆಸಿರುವ ದಿಲ್ಲಿ ಹೈಕೋರ್ಟ್‌, ನಿರ್ಧಾರ ಕೈಗೊಳ್ಳಲು ಕೇಂದ್ರ ಮತ್ತು ಪೊಲೀಸರಿಗೆ 4 ವಾರಗಳ ಅವಧಿ ನೀಡಿದೆ. ದಿಲ್ಲಿ ಹೈಕೋರ್ಟ್‌ ಬುಧವಾರವಷ್ಟೇ ಗಲಭೆ ನಿಯಂತ್ರಿಸಲು ವಿಫ‌ಲರಾದ ಪೊಲೀಸರ ವಿರುದ್ಧ ಕಿಡಿ ಕಾರಿತ್ತು ಮತ್ತು ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್‌ ದಾಖಲು ಕುರಿತು ಕ್ರಮ ಕೈಗೊಳ್ಳಿ ಎಂದಿತ್ತು.

ಕಾಂಗ್ರೆಸ್‌ ಮತ್ತು ಆಪ್‌ ಎರಡೂ ದಿಲ್ಲಿ ಹಿಂಸಾಚಾರದಲ್ಲಿ ರಾಜಕೀಯ ಮಾಡುತ್ತಿವೆ. ಕಳೆದ ಡಿಸೆಂಬರ್‌ನಲ್ಲೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು “ಕೊನೆಯ ವರೆಗೂ ಹೋರಾಡಿ’ ಎಂದು ಕರೆ ಕೊಡುವ ಮೂಲಕ 2 ತಿಂಗಳ ಹಿಂದೆಯೇ ಹಿಂಸೆಗೆ ಪ್ರಚೋದನೆ ನೀಡಿದ್ದರು.
-ಪ್ರಕಾಶ್‌ ಜಾಬ್ಡೇಕರ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next