Advertisement

ವಿದ್ಯಾರ್ಥಿ ಮೇಲೆ ದೌರ್ಜನ್ಯ: ಕ್ರಮಕ್ಕೆ ಆಗ್ರಹ

11:54 AM Nov 09, 2019 | Team Udayavani |

ಇಳಕಲ್ಲ: ನಗರದ ಪೊಲೀಸ್‌ ಠಾಣೆ ಮುಖ್ಯ ಪೇದೆ ಎನ್‌.ಡಿ. ಪವಾರ ಎಂಬವರು ಎಬಿವಿಪಿ ಅನಿಲ ಗುರುಬಸಣ್ಣವರ ಅವರ ಮೇಲೆ ಅನವಶ್ಯಕ ಪ್ರಕರಣ ದಾಖಲಿಸಿ ವಿದ್ಯಾರ್ಥಿಯನ್ನು ಬಂಧಿಸಿ ಪರೀಕ್ಷಾ ಸಮಯದಲ್ಲಿ ತೊಂದರೆ ನೀಡಿದ್ದಾರೆ. ಈ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಬಿವಿಪಿ ತಾಲೂಕು ಘಟಕದಿಂದ ನಗರ ಠಾಣೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

Advertisement

ನಗರ ಘಟಕದ ಕಾರ್ಯದರ್ಶಿ ನೀಲಪ್ಪ ಕುರಿ ಮಾತನಾಡಿ, ವಿದ್ಯಾರ್ಥಿ ಅನೀಲ ಸ್ವಂತ ಊರು ಶಿವಪೇಟ ಹಾಲಿವಸ್ತಿ ಕಮತಗಿ. ಸದ್ಯ ಗುಳೇದಗುಡ್ಡದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈ ಎರಡು ಊರು ಇಳಕಲ್ಲ ಠಾಣೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಿದ್ದರೂ ಅನವಶ್ಯಕವಾಗಿ ವಿದ್ಯಾರ್ಥಿ ಮೇಲೆ ಇಳಕಲ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅ.30ರಂದು ಗುಳೇದಗುಡ್ಡದ ವಸ್ತ್ರದ ಕಾಲೇಜಿನ ಆವರಣದಲ್ಲಿ ಸಂಬಂಧಪಟ್ಟವರಿಗೆ ತಿಳಿಸದೇ ಬಂಧಿಸಿದ್ದು ಮೊದಲ ಆರೋಪ. ಅ.31ರಂದು ಕೋರ್ಟ್‌ಗೆ ಕರೆದುಕೊಂಡು ಹೋಗುತ್ತೇನೆ ಎಂದು 10.40ಕ್ಕೆ ಕರೆದುಕೊಂಡು ಹೋಗಿ 3 ಗಂಟೆಯಾದರೂ ಕೋರ್ಟ್‌ಗೆ ಹಾಜರುಪಡಿಸಲಿಲ್ಲ. ಇದರಿಂದಾಗಿ ವಿದ್ಯಾರ್ಥಿ ಪರೀಕ್ಷೆಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.

ನ.5ರಂದು ಇನ್ನೊಬ್ಬ ಎಬಿವಿಪಿ ಕಾರ್ಯಕರ್ತನನ್ನು ಠಾಣೆಗೆ ಕರೆತಂದು ಅವನ ಮೇಲೆಯೂ ಹಲ್ಲೆ ಮಾಡಿ, ನಿಂದಿಸಿ ಮೂರು ಗಂಟೆಗಳ ಕಾಲ ಗೊಂದಲವನ್ನುಂಟು ಮಾಡಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ ಅವರು, ಎನ್‌.ಡಿ. ಪವಾರ ಮತ್ತು ಗುಡುದಾರಿ ಪೊಲೀಸರನ್ನು ಅಮಾನತುಗೊಳಿಸಿ ತನಿಖೆ ಕೈಗೊಳ್ಳಲು ಆದೇಶಿಸಬೇಕು. ಅನ್ಯಾಯವಾದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ನಂತರ ಪೊಲೀಸ್‌ ಅಧಿಕಾರಿ ಅಯ್ಯನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next