Advertisement

ರೈತ ಸಂಘದ ಹೆಸರಲ್ಲಿ ನೌಕರರ ಮೇಲೆ ದೌರ್ಜನ್ಯ

09:47 AM Oct 23, 2019 | Suhan S |

ಹಿರೇಕೆರೂರ: ರೈತ ಸಂಘದ ಹೆಸರಿನಲ್ಲಿ ಸರ್ಕಾರಿ,ಅರೆ ಸರ್ಕಾರಿ ನೌಕರರ ಮತ್ತು ಸಿಬ್ಬಂದಿಗಳ ಮೇಲಾಗುತ್ತಿರುವ ದೌರ್ಜನ್ಯ ತಡೆಯಬೇಕು ಮತ್ತು ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ತಾಲೂಕಿನಲ್ಲಿ ರೈತ ಸಂಘದ ಹೆಸರಿನಲ್ಲಿ ಪ್ರತಿಭಟನೆ ಕರೆದು ಮುಷ್ಕರ ಮಾಡುತ್ತಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಅದು ಅವರ ಹಕ್ಕು. ಅದನ್ನ ಪ್ರತಿಪಾದಿಸಿಕೊಳ್ಳಬಹುದು. ಆದರೆ, ಅಧಿಕಾರಿಗಳನ್ನು ಕರೆದು ಸಾರ್ವಜನಿಕರ ಎದುರು ಅಸಭ್ಯವಾಗಿ ಅಶ್ಲೀಲವಾಗಿ ನಿಂದಿಸುವುದನ್ನು ನೌಕರರ ಸಂಘ ಖಂಡಿಸುತ್ತದೆ. ಅಕ್ಟೋಬರ 21ರಂದು ನಡೆದ ರೈತರ ಮುಷ್ಕರದಲ್ಲಿ ಹಿರೇಕೆರೂರು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳನ್ನು ರೈತ ಸಂಘದ ರಾಮಣ್ಣ ಕೆಂಚಳ್ಳೇರ ಅವಾಚ್ಯ ಹಾಗೂ ಅಶ್ಲೀಲ ಪದಗಳಿಂದ ನಿಂದಿಸಿರುವುದು ಖಂಡಾನಾರ್ಹ.

ಇಂಥ ವಾತಾವರಣದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮುಕ್ತ ಮನಸ್ಸಿನಿಂದ ಕಾರ್ಯ ನಿರ್ವಹಿಸುವುದು ಕಷ್ಟ ಸಾಧ್ಯ. ಭಯದ ವಾತಾವರಣ ಸೃಷ್ಟಿ ಮಾಡುತ್ತಿರುವುದನ್ನು ತಡೆದು ನೌಕರರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಮುಷ್ಕರದ ಹೆಸರಿನಲ್ಲಿ ಕಚೇರಿಗಳಿಗೆ ಬೀಗ ಹಾಕಿ ನೌಕರರನ್ನು ಕೂಡಿ ಹಾಕಿ ಸಾರ್ವಜನಿಕ ಕೆಲಸಗಳಿಗೆ ಅಡ್ಡಿಪಡಿಸಲಾಗುತ್ತಿದೆ.

ಇದರಿಂದ ನೌಕರರಿಗೆ ಮಾನಸಿಕ ಕಿರಿಕಿರಿ ಹಾಗೂ ಕಾರ್ಯದಕ್ಷತೆ ಕುಂದುವಂತೆ ಮಾಡುತ್ತಿರುವುದು ಕಂಡು ಬಂದಿದೆ. ಈ ರೀತಿಯ ಮುಷ್ಕರ ನಡೆಸಿ ಸಿಬ್ಬಂದಿಗಳ ಮೇಲೆ ಒತ್ತಡ ಹೇರುತ್ತಿದ್ದು, ಇದರಿಂದ ತಾಲೂಕಿನಾದ್ಯಂತ ನೌಕರ ವರ್ಗದವರು ತಾಲೂಕಿನಲ್ಲಿ ಕೆಲಸ ನಿರ್ವಹಿಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ನೌಕರರನ್ನು ಸಾಮೂಹಿಕವಾಗಿ ವರ್ಗಾವಣೆಯನ್ನಾದರು ಮಾಡಿ ಎನ್ನುವ ತೀರ್ಮಾನಕ್ಕೆ ಬರುವಂತಾಗಿದೆ.

ಮುಷ್ಕರದ ಹೆಸರಿನಲ್ಲಿ ನೌಕರರ ತೇಜೋವಧೆ ಮಾಡಿ ಅಸಭ್ಯವಾಗಿ ಮಾತನಾಡಿದ ಹಾಗೂ ನೌಕರರನ್ನು ನಿಂದಿಸಿದ ರಾಮಣ್ಣ ಕೆಂಚಳ್ಳೇರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನೌಕರರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಕ್ರಮ ಕೈಗೊಳ್ಳದಿದ್ದಲ್ಲಿ ತಾಲೂಕಿನಾದ್ಯಂತ ಆಡಳಿತ ಯಂತ್ರ ಸ್ತಬ್ದಗೊಳಿಸಿ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಎಚ್ಚರಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಪದಾಧಿ ಕಾರಿಗಳು ಎಲ್ಲ ಇಲಾಖೆಗಳು ಸರ್ಕಾರಿ ನೌಕರರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next