Advertisement

Violence against women: ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ಸಮಾಜಕ್ಕೆ ಕಪ್ಪುಚುಕ್ಕೆ

01:57 AM Aug 20, 2024 | Team Udayavani |

ರಾಜ್ಯ ಮತ್ತು ದೇಶದಲ್ಲಿ ಮಹಿಳೆಯರ ಸುರಕ್ಷೆಯನ್ನು ಖಾತರಿಪಡಿಸುವ ಹಲವಾರು ಕಾನೂನುಗಳು, ಕಾರ್ಯಕ್ರಮಗಳು ಇದ್ದರೂ ಸ್ತ್ರೀಯರ ಮೇಲಿನ ದೌರ್ಜನ್ಯ ಎಲ್ಲೆ ಮೀರಿ ನಡೆಯುತ್ತಿರುವುದು ನಮ್ಮ ನಾಗರಿಕ ಸಮಾಜಕ್ಕೊಂದು ಕಪ್ಪುಚುಕ್ಕೆಯೇ ಸರಿ. ಕೆಲವು ದೌರ್ಜನ್ಯ ಪ್ರಕರಣಗಳಂತೂ “ಮನುಷ್ಯನೊಬ್ಬ ಹೀಗೂ ವರ್ತಿಸುತ್ತಾನೆಯೇ’ ಎಂದು ನಮ್ಮನ್ನು ನಾವು ಪ್ರಶ್ನಿಸುವಂತಿದೆ. ಜತೆಗೆ ಕಾನೂನು, ಕಾರ್ಯಕ್ರಮಗಳಿಂದ ಮಾತ್ರ ಇದನ್ನು ತಡೆಯುವುದು ಅಸಾಧ್ಯ, ಸ್ತ್ರೀ ಘನತೆಯನ್ನು ಗೌರವಿಸುವ ಪ್ರಜ್ಞೆಯನ್ನು ಶಿಕ್ಷಣದ ಮೂಲಕ ಸಮಾಜದಲ್ಲಿ ಮೂಡಿಸುವ ಕೆಲಸ ವ್ಯಾಪಕವಾಗಿ ಆಗಬೇಕಿದೆ ಎಂಬ ತಿಳಿವಳಿಕೆಯನ್ನು ಹೊಂದಿ ಆ ನಿಟ್ಟಿನಲ್ಲಿ ಮುಂದಡಿ ಇರಿಸಬೇಕಾಗಿದೆ.

Advertisement

ಕೆಲವು ಅಂಕಿ-ಅಂಶಗಳನ್ನು ಗಮನಿಸುವುದಾದರೆ 2020-21ರಿಂದ ಈ ವರ್ಷದ ಜುಲೈವರೆಗೆ ಅಂದರೆ ಕಳೆದ 5 ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿಯೇ ಸುಮಾರು 10 ಸಾವಿರಕ್ಕೂ ಹೆಚ್ಚು ಸ್ತ್ರೀ ದೌರ್ಜನ್ಯ ಸಂಬಂಧಿ ದೂರುಗಳು ರಾಜ್ಯ ಮಹಿಳಾ ಆಯೋಗದ ಕದತಟ್ಟಿವೆ. ಇವುಗಳಲ್ಲಿ ಕೌಟುಂಬಿಕ ದೌರ್ಜನ್ಯ. ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಕೆಲಸ ಮಾಡುವ ಸ್ಥಳದಲ್ಲಿ ಕಿರುಕುಳ- ಹೀಗೆ ನಾನಾ ವಿಧ. ರಕ್ಷಣೆ ಕೋರಿ ಹಾಗೂ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳು ಅತೀ ಹೆಚ್ಚು ಸಂಖ್ಯೆಯಲ್ಲಿವೆ ಎಂಬುದಾಗಿ ಅಂಕಿಅಂಶಗಳು ಹೇಳುತ್ತಿವೆ. ಪಶ್ಚಿಮ ಬಂಗಾಲದಲ್ಲಿ ಇತ್ತೀಚೆಗೆ ನಡೆದ ತರಬೇತಿ ನಿರತ ವೈದ್ಯೆಯ ಮೇಲಿನ ನಿಕೃಷ್ಟ ಕೃತ್ಯ ದೇಶದಲ್ಲಿ ಹೋರಾಟದ ಕಿಚ್ಚನ್ನೇ ಹೊತ್ತಿಸಿದೆ. ದಿನಂಪ್ರತಿ ದಿನಪತ್ರಿಕೆ ತೆರೆದರೆ ಯಾವುದಾದರೂ ಒಂದು ಸ್ವರೂಪದ ಮಹಿಳಾ ದೌರ್ಜನ್ಯ ಪ್ರಕರಣದ ವರದಿ ಓದಿ ತಲೆತಗ್ಗಿಸುವಂತೆ ಮಾಡುತ್ತದೆ.

ಕೆಲವು ವಾರಗಳ ಹಿಂದೆ ಉತ್ತರ ಭಾರತದಲ್ಲಿ ಅಶ್ಲೀಲ ಲೈಂಗಿಕ ವೀಡಿಯೋಗಳನ್ನು ವೀಕ್ಷಿಸುವ ಚಟವಿದ್ದ ಬಾಲಕನೊಬ್ಬ ತನ್ನ ಸಹೋದರಿಯ ಮೇಲೆಯೇ ಅತ್ಯಾಚಾರ ಎಸಗಿದ ಪ್ರಕರಣ ವರದಿಯಾಗಿತ್ತು. ಕಾನೂನು, ಯೋಜನೆಗಳ ಮೂಲಕ ಸ್ತ್ರೀದೌರ್ಜನ್ಯವನ್ನು ತಡೆಯಲು ಪ್ರಯತ್ನಿಸುವುದರ ಜತೆಗೆ ಬಾಲ್ಯದಿಂದಲೇ ಈ ವಿಷಯವಾಗಿ ಶಿಕ್ಷಣ ಒದಗಿಸುವುದು, ಸ್ತ್ರೀ ಘನತೆ ಯನ್ನು ಗೌರವಿಸುವ ಮೌಲ್ಯವನ್ನು ಕಲಿಸಿಕೊಡುವುದು ಅಗತ್ಯವಾಗಿ ಆಗಬೇಕು ಎಂಬುದಕ್ಕೆ ಈ ಪ್ರಕರಣ ಪುಷ್ಟಿ ಒದಗಿಸುತ್ತದೆ. ನಾಗರಿಕ ನಡವಳಿಕೆ ಯಾವುದು, ಅನಾಗರಿಕ ವರ್ತನೆ ಯಾವುದು ಎಂಬ ಎಚ್ಚರವನ್ನು ಮಕ್ಕಳಿಗೆ ಬಾಲ್ಯದಿಂದಲೇ ತಿಳಿಸುವ ಕೆಲಸವಾಗಬೇಕಾಗಿದೆ.

ವಿಚಿತ್ರ ಮತ್ತು ವಿಪರ್ಯಾಸದ ವಿಷಯ ಎಂದರೆ ಮಹಿಳಾ ಆಯೋಗದ ಅಂಕಿಅಂಶಗಳು ಒದಗಿಸುವ ವಿವರಗಳ ಪ್ರಕಾರ ವಿದ್ಯಾವಂತರು ಮತ್ತು ಉದ್ಯೋ ಗಸ್ಥರು ಹೆಚ್ಚಿರುವ ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಇತರ ನಗರ ಪ್ರದೇಶ ಗಳಲ್ಲಿಯೇ ದೌರ್ಜನ್ಯ ಪ್ರಕರಣಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ನಡೆಯುತ್ತಿವೆ. ಸ್ತ್ರೀಯ ಘನತೆಯನ್ನು ಗೌರವಿಸುವ ಮೌಲ್ಯವನ್ನು ಎಳೆಯ ವಯಸ್ಸಿನಿಂದಲೇ ಮಕ್ಕಳಲ್ಲಿ ಬೆಳೆಸುವುದರ ಅಗತ್ಯವನ್ನು ಇದು ಸಾರಿಹೇಳುತ್ತದೆ.

ಸ್ತ್ರೀಯರು ಕೂಡ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರಕ್ಕೆ ಮುಂದಾಗುವುದು ಸಲ್ಲದು, ಅದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎನ್ನುವುದನ್ನು ಮರೆಯಕೂಡದು. ಒಂದೆರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಇದಕ್ಕೆ ಪೂರಕವಾಗಿದೆ. ಈ ಪ್ರಕರಣದಲ್ಲಿ ನಡುರಾತ್ರಿ ಪಾರ್ಟಿ ಮುಗಿಸಿ ಬಂದ ಯುವತಿ ಅಪರಿಚಿತ ಬೈಕ್‌ ಚಾಲಕನ ಬಳಿ ಡ್ರಾಪ್‌ ಕೇಳಿ ದೌರ್ಜನ್ಯಕ್ಕೆ ಒಳಗಾಗಿದ್ದಳು. ಇಂತಹ ಅಪಾಯಕ್ಕೆ ಆಹ್ವಾನ ನೀಡುವ ವರ್ತನೆಯಿಂದ ಸ್ತ್ರೀಯರು ದೂರವಿರುವುದು ಯೋಗ್ಯ.

Advertisement

ಕಾನೂನು, ಯೋಗ್ಯವಾದ ಮೌಲ್ಯಗಳನ್ನು ಬೆಳೆಸುವುದು ಮತ್ತು ಸ್ತ್ರೀಯರ ಘನತೆಯುಕ್ತ ನಡವಳಿಕೆಯ ಮೂಲಕ ನಾಗರಿಕ ಸಮಾಜಕ್ಕೆ ಕಪ್ಪುಚುಕ್ಕೆ ಆಗಿರುವ ಮಹಿಳಾ ದೌರ್ಜನ್ಯ ಕೊನೆಗೊಳ್ಳಲಿ.

Advertisement

Udayavani is now on Telegram. Click here to join our channel and stay updated with the latest news.

Next