Advertisement

Bengaluru: ಒಂಟಿ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ ಕಳ್ಳತನ

11:51 AM Aug 31, 2024 | Team Udayavani |

ಬೆಂಗಳೂರು: ಜಾತ್ರೆ, ಸಂತೆ, ಮಾರ್ಕೆಟ್‌ ಹಾಗೂ ಬಸ್‌ಗಳಲ್ಲಿ ಸಂಚರಿಸುವ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ ಚಿನ್ನಾಭರಣಗಳನ್ನು ದೋಚುತ್ತಿದ್ದ ಶುಂಠಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯನ್ನು ಕೆ. ಆರ್‌.ಪುರ ಠಾಣೆ ಪೊಲೀ ಸರು ಬಂಧಿಸಿದ್ದು, 40 ಲಕ್ಷ ರೂ. ಮೌಲ್ಯದ 536 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

Advertisement

ಹಾಸನ ಅರಸೀಕೆರೆ ಮೂಲದ ಶಾರದಾ (28) ಬಂಧಿತ ಆರೋಪಿ.

ಆಕೆಯ ಬಂಧನದಿಂದ ಚಿಕ್ಕಪೇಟೆ, ತುಮಕೂರಿನ ಗುಬ್ಬಿ ಪೊಲೀಸ್‌ ಠಾಣೆಯ ತಲಾ 1, ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ 7 ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿ ಹಾಸನದಿಂದ ನಗರಕ್ಕೆ ಬರುತ್ತಿದ್ದಳು. ಹೆಚ್ಚು ಜನಸಂದಣಿ ಇರುವ ಕಡೆ ತೆರಳಿ ಬ್ಯಾಗ್‌ನಲ್ಲಿ ಮೌಲ್ಯಯುತ ವಸ್ತುಗಳನ್ನು ಇಟ್ಟಿರುವ ಮಹಿಳೆಯನ್ನೇ ಟಾರ್ಗೆಟ್‌ ಮಾಡುತ್ತಿದ್ದಳು. ನಂತರ ಅವರ ಬಳಿ ನಕಲಿ ಹಣ ಎಸೆಯುತಿದ್ದಳು. ಹಣ ಕೆಳಗೆ ಬಿದ್ದಿದೆ ನೋಡಿ ಎಂದು ಅವರ ಗಮನ ಬೇರೆಡೆ ಸೆಳೆಯುತ್ತಿದ್ದಳು. ಆ ವೇಳೆ ಮಹಿಳೆಯರ ಗಮನ ಬೇರೆಡೆ ಹೋಗುತ್ತಿದ್ದಂತೆ ಬ್ಯಾಗ್‌ನಲ್ಲಿದ್ದ ಹಣ, ಚಿನ್ನ ಕದಿಯುತ್ತಿದ್ದಳು.

ಸುಳಿವು ಕೊಟ್ಟ ಸಿಸಿ ಕ್ಯಾಮೆರಾ: ಆ.15ರಂದು ಕೆ. ಆರ್‌.ಪುರದ ನಿವಾಸಿ ಮಹಿಳೆಯೊಬ್ಬರು ಬಟ್ಟೆ ಅಂಗಡಿಯಲ್ಲಿ ಬಟ್ಟೆ ಖರೀದಿಸಲು ಹೋಗಿದ್ದರು. ಆ ವೇಳೆ ಆರೋಪಿತೆಯು ಅವರ ಪರ್ಸ್‌ನಿಂದ ಸುಮಾರು 6 ಸಾವಿರ ರೂ. ಲಪಟಾಯಿಸಿ ಪರಾರಿಯಾಗಿದ್ದಳು.

ಕಳುವಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕೆ.ಆರ್‌ಪುರ ಠಾಣೆ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೊಪಿತೆಯ ಮುಖಚಹರೆ ಪತ್ತೆಯಾಗಿತ್ತು. ಇದಾದ 24 ಗಂಟೆಯೊಳಗೆ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕದ್ದ ಚಿನ್ನವನ್ನು ಜ್ಯುವೆಲ್ಲರಿ ಶಾಪ್‌ನಲ್ಲಿ ಅಡವಿಟ್ಟಿರುವುದು ಹಾಗೂ ಸ್ನೇಹಿತನಿಗೆ ಕೊಟ್ಟಿರುವ ಬಗ್ಗೆ ವಿಚಾರಣೆ ವೇಳೆ ಆರೋಪಿ ಮಹಿಳೆ ಮಾಹಿತಿ ನೀಡಿದ್ದಳು.

Advertisement

ಈ ಮಾಹಿತಿ ಆಧರಿಸಿ ಅರಸೀಕೆರೆಯಲ್ಲಿರುವ ಆರೋಪಿತೆಯ ಸ್ನೇಹಿತನಿಂದ 18 ಗ್ರಾಂ ಚಿನ್ನ, ಅಲ್ಲಿನ ಜ್ಯೂವೆಲ್ಲರಿ ಶಾಪ್‌ನಿಂದ 29 ಗ್ರಾಂ ಚಿನ್ನಾಭರಣ, ಮತ್ತೂಂದು ಜ್ಯೂವೆಲರಿ ಶಾಪ್‌ನಿಂದ 135 ಗ್ರಾಂ ಚಿನ್ನಾಭರಣ, ಕೋ ಅಪರೇಟಿವ್‌ ಬ್ಯಾಂಕ್‌ ವೊಂದರಲ್ಲಿ ಅಡವಿಟ್ಟಿದ್ದ 315 ಗ್ರಾಂ ಚಿನ್ನಾಭರಣ, ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿಟ್ಟಿದ್ದ 39 ಗ್ರಾಂ ಚಿನ್ನಾಭರಣ ಸೇರಿದಂತೆ ಒಟ್ಟು 40 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next