Advertisement

UV Fusion: ಹೆಣ್ಣಿಗೇಕೆ ಈ ಶಿಕ್ಷೆ?

02:55 PM Aug 31, 2024 | Team Udayavani |

ರಕ್ಷಾ ಬಂಧನ ಬರುವ ಹೊತ್ತಿಗೆ ತನ್ನ ಅಣ್ಣನಿಗೆ ಕೈ ನೀಡಿ ರಾಕಿ ಕಟ್ಟಿಸುವ ಅನ್ನುವಷ್ಟರಲ್ಲಿ ಆಕೆಯ ಕೈಯನ್ನೇ ಕತ್ತರಿಸಿದರಲ್ಲ. ಆತ ಯಾರಲ್ಲಿ ನ್ಯಾಯ ಕೇಳಬೇಕು? ಮಗಳು ಮನೆಗೆ ತಡವಾಗಿ ಬಂದರೆ ಸಾಕು ಕಳವಳಗೊಳ್ಳುವಂತಹ ತಾಯಿಗೆ, ತನ್ನ ಮಗಳು ವ್ಯಾಘ್ರರ ಕೈವಶಕ್ಕೆ ಬಲಿಯಾದಳು ಎಂದರೆ ಆಕೆ ಹೇಗೆ ಅರಗಿಸಿಕೊಳ್ಳುವಳು? ತನ್ನ ಮಗಳಿಗಾಗಿ ವರ್ಷ ಪೂರ್ತಿ ಜೀವ ತೆತ್ತ ತಂದೆಯ ಗತಿಯಾದರು ಏನು?

Advertisement

ಹೌದು, ಇದು ಅವೆಷ್ಟು ಕುಟುಂಬಗಳ ಕಣ್ಣೀರು.

ಮನದಲ್ಲಿ ಸಾವಿರ ಚಿಂತೆ ಹೊತ್ತು, ಮನೆಯಲ್ಲಿ ಅವೆಷ್ಟು ಕಷ್ಟವಿದ್ದರೂ, ಹೃದಯದಲ್ಲಿ ಹೇಳಲಾಗದ ನೋವಿದ್ದರೂ, ಅದರಲ್ಲಿ ಪ್ರೀತಿ ತುಂಬಿ ಜೀವನದಲ್ಲಿ ಒಂದು ಗುರಿಯನಿಟ್ಟು, ನಗುಮುಖದಿಂದಲೇ ಆ ಗುರಿಯತ್ತ ಹೆಜ್ಜೆ ಇಡುವುದು ಒಂದು ಹೆಣ್ಣಿನ ಸಾಮಾನ್ಯ ಸ್ವಭಾವ. ಇಂತಹ ಹೆಣ್ಣು ಪ್ರಾರಂಭದಿಂದಲೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರತಿನಿತ್ಯ ಹೋರಾಟ ಮಾಡುತ್ತಲೇ ಬಂದಿದ್ದಾಳೆ.

ಅಭಿವೃದ್ಧಿಶೀಲ ದೇಶದಲ್ಲಿ ಏಕೆ ಈ ರೀತಿ ಹೆಣ್ಣಿನ ಮೇಲೆ ದೌರ್ಜನ್ಯ. ಹೆಣ್ಣನ್ನು ಪೂಜನೀಯ  ಭಾವದಿಂದ ನೋಡಬೇಕೆನ್ನುವ ದೇಶದಲ್ಲಿ ಹೀಗೇಕೆ ಸರಣಿ ಅತ್ಯಾಚಾರಗಳು? ಭಾರತ, ಕರ್ನಾಟಕದಲ್ಲಿ ಈ ರೀತಿ ಒಂದೇ ವಾರದಲ್ಲಿ ಸರಣಿ ಅತ್ಯಾಚಾರಗಳು ನಡೆಯುತ್ತಿದೆ ಎಂದರೆ ಈ ಸಮಾಜದಲ್ಲಿ ಹೆಣ್ಣಿಗೆ ಎಲ್ಲಿದೆ ಸುರಕ್ಷೆ. ಈಗ ಎಲ್ಲಿದೆ ಬೀಗುವ ಪ್ರಭುತ್ವಗಳು.

ಸ್ವಾತಂತ್ರ್ಯ ಸಿಕ್ಕಿ 78 ವರ್ಷ ಆದರೂ ಇಲ್ಲಿಯವರೆಗೆ 88.7% ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ(NಇRಆ).ಹಾಗಾದರೆ ಇಲ್ಲಿ ಸ್ವಾತಂತ್ರ್ಯ ಯಾರಿಗೆ ? ಎಂಬ ಪ್ರಶ್ನೆ ಕಾಡುತ್ತದೆ. ಒಂದು ಹೆಣ್ಣು ಹೊಸಲು ತುಳಿದರೆ ಸಾಕು ಅದನ್ನೇ ತಪ್ಪು ಎನ್ನುವ ಸಮಾಜ, ಆಕೆಯ ಏಳಿಗೆಯನ್ನು ಸಹಿಸಲಾರರು. ಆಕೆ ವಿದ್ಯಾವಂತಳಾಗಿ ಪ್ರಶ್ನೆ ಕೇಳುವ ಸಾಮರ್ಥ್ಯ ಪಡೆದರೆ ಸಾಕು ಹೆಣ್ಣು  ಮಿತಿಮೀರಬಾರದೆಂದು ಸಮರ್ಥನೆಗಳನ್ನು ನೀಡುತ್ತಾರೆ. ಕೆಲವೊಮ್ಮೆ ಕೊಲ್ಲಲು ಹೇಸುವುದಿಲ್ಲ.

Advertisement

ತನಗೆ ಇಷ್ಟವಿಲ್ಲದ ಪ್ರೀತಿಯನ್ನು ತಿರಸ್ಕರಿಸಿದರೆ ಸಾಕು ಆಕೆಯ ಮೇಲೆ ಆ್ಯಸಿಡ್‌ ಎರಚುತ್ತಾರೆ, ಇಲ್ಲವೇ ಆಕೆಯ ಬದುಕಲ್ಲಿ ಖುಷಿ ಇಲ್ಲದಂತೆ ಮಾಡುತ್ತಾರೆ. ಹೆಣ್ಣಿಗೇಕೆ ಈ ಶಿಕ್ಷೆ? ಪ್ರೀತಿ ಎಂದರೆ, ಗೌರವ. ಅದುವೇ ಹೆಣ್ಣಿಗೆ ನೀಡದ ಗಂಡು ಆಕೆಯ ಬದುಕಿಗೆ ಯಾಕೆ ಮುಳ್ಳಾಗುತ್ತಾನೆ. ಆಕೆಗೂ ತೀರ್ಮಾನ ತೆಗೆದುಕೊಳ್ಳುವ ಹಕ್ಕಿಲ್ಲವೇ? ಆಕೆ ಯಾರನ್ನು ಪ್ರಶ್ನಿಸಲಿ ಯಾರನ್ನು ದೂರಲಿ?, ಕೇವಲ ಜೈಲುವಾಸ, ದಂಡ, ಕಾನೂನು ಕಠಿನವಿಲ್ಲವೆಂಬ ತಾತ್ಸಾರವೇ? ಎಲ್ಲಿ ಗಂಡು ತನ್ನ ದರ್ಪವೇ ಮೇಲುಗೈ ಸಾಧಿಸಬೇಕೆಂದು ಭಾವಿಸುತ್ತಾನೋ, ಎಲ್ಲಿ ಹೆಣ್ಣು ಗಂಡಿನ ಗುಲಾಮಳಾಗಿಯೇ ಜೀವಮಾನವಿಡಿ ಇರಬೇಕೆಂದು ಅಂದುಕೊಳ್ಳುತ್ತಾರೋ ಅಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ನಿರಂತರವಾಗಿರುತ್ತದೆ.

ಯಾವುದೇ ಒಂದು ದೌರ್ಜನ್ಯ ಪ್ರಕರಣ ನಡೆದರೂ ಹೆಣ್ಣಿನದ್ದೇ ತಪ್ಪಿರಬಹುದು ಎಂದು ಭಾವಿಸುವ ಸಮಾಜ ಗಂಡಿನ ತಪ್ಪನ್ನು ಮರೆಗೆ ಸರಿಸುತ್ತದೆ. ಇಂತಹ ಭಾವಿಸುವಿಕೆಯೇ ಗಂಡಿಗೆ ಇನ್ನಷ್ಟು ಪ್ರೇರಣೆಯಗುತ್ತದೆ.ಹೆಣ್ಣು ಭೋಗದ ವಸ್ತುವಲ್ಲ. ಆಕೆಗೂ ಒಂದು ಸುಂದರವಾದ ಬದುಕಿದೆ. ಆಕೆಗೂ ಈ ಸಮಾಜದಲ್ಲಿ ಸ್ವಾತಂತ್ರ್ಯವಿದೆ. ಕ್ರೂರ ಮೃಗಗಳ ಕೈಗೆ ಸಿಲುಕಿದ ಅವೆಷ್ಟು ಹೆಣ್ಣು ಮಕ್ಕಳ ಹೆತ್ತವರ ಕಣ್ಣೀರು ಇನ್ನು ಈ ಸಮಾಜದಲ್ಲಿ ಧ್ವನಿಗೂಡುತ್ತಲೇ ಇವೆ.

- ನಿಕ್ಷಿತಾ

ಮರಿಕೆ

Advertisement

Udayavani is now on Telegram. Click here to join our channel and stay updated with the latest news.