ಬೆಂಗಳೂರು: ರಾಜ್ಯ ರಾಜಧಾನಿಯ ಶಾಲಾ-ಕಾಲೇಜುಗಳ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಸಂಚಾರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಒಂದೇ ದಿನದಲ್ಲಿ 1,896 ಕೇಸು ಹಾಕಿ, 9.48 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.
ಗುರುವಾರ ನಡೆಸಿದ ವಿಶೇಷ ಕಾರ್ಯಾ ಚರಣೆಯಲ್ಲಿ ಹೆಲ್ಮೆಟ್ ಧರಿಸದೇ ಸಂಚರಿಸಿದ 1,279 ಪ್ರಕರಣಗಳಲ್ಲಿ 6,39,500 ರೂ. ದಂಡ ಸಂಗ್ರಹಿಸಿದ್ದಾರೆ. ಟ್ರಿಪಲ್ ರೈಡಿಂಗ್‌ನಲ್ಲಿ ಸವಾರಿ ಮಾಡಿದ 85 ಕೇಸ್‌ಗಳಲ್ಲಿ 42,500 ರೂ. ದಂಡ ವಸೂಲು ಮಾಡಲಾಗಿದೆ. ಇನ್ನು ನೋ ಎಂಟ್ರಿ ಜಾಗದಲ್ಲಿ ವಾಹನ ಚಲಾಯಿಸಿದ 455 ಪ್ರಕರಣದ ಸಂಬಂಧ 2,27,500 ರೂ. ಹಾಗೂ ಫುಟ್‌ಪಾತ್‌ನಲ್ಲಿ ಸವಾರಿ ಮಾಡಿದ 77 ಕೇಸ್‌ನಲ್ಲಿ 38,500 ರೂ. ದಂಡ ಸಂಗ್ರಹಿಸಲಾಗಿದೆ.
ಮುಂದೆಯೂ ಇದೇ ಮಾದರಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ವಿಭಾಗದ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಕಾಏಕಿ ಕಾರ್ಯಾಚರಣೆ ಏಕೆ?: ಬೆಂಗಳೂರಿನ ಪ್ರತಿಷ್ಠಿತ ಶಾಲಾ ಕಾಲೇಜುಗಳ ಬಳಿ ಮಕ್ಕಳ ಪಾಲಕರು ಹಾಗೂ ಅಪ್ರಾಪ್ತ ವಿದ್ಯಾರ್ಥಿಗಳು ಅತಿ ವೇಗ, ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದು, ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳು ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು, ತಮ್ಮ ಠಾಣಾ ವ್ಯಾಪ್ತಿಯ ಶಾಲಾ, ಕಾಲೇಜುಗಳ ಸುತ್ತ-ಮುತ್ತ ಗುರುವಾರ ವಿಶೇಷ ಕಾರ್ಯಾಚರಣೆ ನಡೆಸಿದ್ದರು.
ಎಚ್ಚರಿಕೆ ನೀಡಿ ಕಳಿಸಿಕೊಟ್ಟ ಪೊಲೀಸರು: ವಿದ್ಯಾರ್ಥಿಗಳ ವಾಹನಗಳನ್ನು ತಡೆದು ಡಿಎಲ್ ತಪಾಸಣೆ ಮಾಡಿದ್ದರು. ನಗರದಲ್ಲಿ 150ಕ್ಕೂ ಹೆಚ್ಚು ಶಾಲೆಗಳ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಆ ವೇಳೆ ನೂರಾರು ವಿದ್ಯಾರ್ಥಿಗಳು ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಪಜೀತಿಗೆ ಸಿಲುಕಿದ ಪ್ರಸಂಗವೂ ನಡೆಯಿತು. ಕೆಲವು ಪ್ರಕರಣಗಳಲ್ಲಿ ಪಾಲಕರನ್ನು ಕರೆಸಿ ದಂಡ ವಿಧಿಸಿ ಮಕ್ಕಳ ಕೈಗೆ ವಾಹನ ನೀಡದಂತೆ ಎಚ್ಚರಿಕೆ ಕೊಟ್ಟು ಕಳುಹಿಸಿದರು. ಮತ್ತೆ ಇದೇ ರೀತಿಯ ತಪ್ಪು ಮಾಡಿದರೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದರು. ಡಿಎಲ್ ಇಲ್ಲದ ಹಾಗೂ 18 ವರ್ಷ ತುಂಬದ ವಿದ್ಯಾರ್ಥಿಗಳು ದ್ವಿಚಕ್ರ ವಾಹ ನಗಳನ್ನು ತಾರದಂತೆ ಸಂಚಾರ ನಿಯಮ ಪಾಲನೆಯ ಬಗ್ಗೆ ಶಾಲಾ-ಕಾಲೇಜುಗಳಿಂದ ಸುತ್ತೋಲೆ ಹೊರಡಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ.
ವಾಹನ ಮಾಲೀಕರ ವಿರುದ್ಧ ಕ್ರಮ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಾಲನೆ ಮಾಡಿದರೆ ಆ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬಹುದಾಗಿದೆ. ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವ ದ್ವಿಚಕ್ರ ವಾಹನ ಸವಾರರಿಗೆ ಸಾವಿರ ರೂ. ದಂಡ ವಿಧಿಸಬಹುದಾಗಿದೆ. ಜತೆಗೆ ಆರೋಪ ಸಾಬೀತಾದರೆ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಗಳೂ ಇವೆ.