Advertisement
“ಢಣ್’ ಎಂಬ ಗಂಟೆಯ ಸದ್ದು ಎಂಬುದು ನಿಯಮಪಾಲನೆಗಿರುವ ಸೂಚನೆ. ತುಂಟ ಹುಡುಗನೊಬ್ಬ ಅದನ್ನು ಬೇಗನೆ ಬಾರಿಸಿಬಿಟ್ಟರೆ ತರಗತಿ ಕೆಲವು ನಿಮಿಷಗಳಿಗಿಂತ ಮೊದಲೇ ಮೊಟಕುಗೊಳ್ಳಬಹುದು ಅಥವಾ ಗಂಟೆಯ ಸದ್ದು ಮೊಳಗಿದ ಬಳಿಕವೂ ಗುರು ತನ್ನ ತರಗತಿಯನ್ನು ಮುಂದುವರಿಸಬಹುದು. ನಿಯಮವೆಂಬುದು ಇದ್ದರೆ, ಅದರ ಜೊತೆಗೆ ಉಲ್ಲಂಘನೆಯೂ ಇದ್ದೇ ಇರುತ್ತದೆ.
ಉಲ್ಲಂಘಿ ಸಬಾರದೆಂದಾದರೆ ಆ ನಿಯಮ “ಒಳಗೆ’ ಹುಟ್ಟಿಕೊಳ್ಳಬೇಕು. ಮೊಳಗಬೇಕಾಗಿರುವುದು ಹೊರಗಿನ ಗಂಟೆಯಲ್ಲ, ಒಳಗಿನದ್ದು. ಹಾಗಾಗಿಯೇ, ಆ ಗುರುಮಠದಲ್ಲಿ ಗಂಟೆ ಬಾರಿಸುವ ಪದ್ಧತಿಯನ್ನು ನಿಧಾನವಾಗಿ ನಿಲ್ಲಿಸಿರುವುದು ಮತ್ತು ಅದು “ಒಳಗೆಯೇ’ ಮೊಳಗುವಂತೆ ಪ್ರೇರಣೆ ನೀಡಿರುವುದು. “ನಿಯಮ-ನಿಬಂಧನೆಗಳ ಕಟ್ಟಡದೊಳಕ್ಕೆ ಮನುಷ್ಯ ಬಂಧಿಯಾಗಿದ್ದಾನೆ’ ಎನ್ನುತ್ತಿದ್ದರು ಓಶೋ.
ಇವತ್ತು ಕಾರ್ಪೊರೇಟ್ ಆಫೀಸಿನೊಳಗೂ ಎಷ್ಟೊಂದು ನಿಯಮಗಳು! ಹೇಗೆ ಮಾತನಾಡಬೇಕು, ಮಾತನಾಡುವಾಗ ಹೇಗೆ ಭುಜ ಕುಣಿಸಬೇಕು, ಮುಖಚರ್ಯೆ ಹೇಗಿರಬೇಕು, ಎಷ್ಟು ನಗಬೇಕು, ಹೇಗೆ ಶೇಕ್ ಹ್ಯಾಂಡ್ ಮಾಡಬೇಕು, ತಿಂಡಿಯನ್ನು ಹೇಗೆ ತಿನ್ನಬೇಕು, ತಿಂದ ಮೇಲೆ ಚಮಚಾವನ್ನು ಹೇಗೆ ಇಡಬೇಕು…ಹೀಗೆ ಹಲವಾರು. ರಸ್ತೆಗೆ ಇಳಿದರೆ ಒಂದಿಷ್ಟು ಟ್ರಾಫಿಕ್ ರೂಲ್ಸ್. ಮನೆಯಲ್ಲಿಯೂ ಗಟ್ಟಿಯಾಗಿ ಮಾತನಾಡುವಂತಿಲ್ಲ, ಪಕ್ಕದ ಮನೆಗೆ ಕೇಳೀತು !
Related Articles
Advertisement
ಅವನ ಕುರಿತು ಯಾವ ನೆಗೆಟಿವ್ ವಿಚಾರ ಹೇಳಿದರೂ “ಇಲ್ಲ’ ಎಂಬುದೇ ಉತ್ತರವಾಗಿರುತ್ತಿತ್ತು. ಊರಿನಿಂದ ದೂರವಿರುವ ಮನೆಯಲ್ಲಿ ಒಂಟಿಯಾಗಿ, ಎಲ್ಲರಿಗೂ ಪ್ರಿಯನಾಗಿ “ಸ್ಮಾರ್ಟ್’ ಎನ್ನುತ್ತಾರಲ್ಲ, ಹಾಗೆ ಬದುಕುತ್ತಿದ್ದ. ಅವನಲ್ಲಿ ಯಾರಾದರೂ, “ಇವೆಲ್ಲ ಹೇಗೆ ಸಾಧ್ಯವಾಯಿತು’ ಎಂದು ಕೇಳಿದರೆ, ನಕ್ಕು ಮೇಲೆ ನೋಡುತ್ತ, “ಎಲ್ಲ ಅವನ ದಯೆ’ ಎನ್ನುತ್ತಿದ್ದ.
ಅವನು ವೃದ್ಧನಾದ. ಅವನ ಕುಟಿಗೆ ಜನ ಬಂದು ಹೋಗತೊಡಗಿದರು. ಎಲ್ಲರಿಗೂ ಅವನ ಬಗ್ಗೆ ಗುರುಭಾವ ಮೂಡುತ್ತಿತ್ತು. “”ನೀವು ಹೇಗೆ ಇಷ್ಟೊಂದು ಪರಿಶುದ್ಧ ಬಾಳ್ವೆಯನ್ನು ನಡೆಸಿದಿರಿ?” ಎಂದು ಅವನನ್ನು ಕೇಳುವವರೇ ಎಲ್ಲರೂ. ಅವನು ಸುಮ್ಮನೆ ನಕ್ಕು ಬಿಡುತ್ತಿದ್ದ. ಇನ್ನೇನು ಸಾಯುವ ಕ್ಷಣ ಸಮೀಪಿಸಿತು ಎನ್ನುವಾಗ ಆ ಸಜ್ಜನ ತನಗೆ ಪ್ರಿಯವಾದವನೊಬ್ಬನನ್ನು ಕರೆದು ಅವನ ಕಿವಿಯಲ್ಲಿ ಸಂಕಟದಿಂದ ಹೇಳಿಕೊಂಡ, “”ನಾನು ಪರಿಶುದ್ಧವಾಗಿದ್ದದ್ದು ನಿಜವೇ. ಆದರೆ, ಬದುಕಿನ ನಿಜವಾದ ಆನಂದವನ್ನು ಕಳೆದುಕೊಂಡೆ. ನನ್ನ ಮೇಲೆ ನಾನೇ ನಿಯಮಗಳನ್ನು ಹೇರಿಕೊಂಡೆ. ಆ ನಿಯಮಗಳನ್ನು ಪಾಲಿಸುವುದರಲ್ಲಿಯೇ ನನ್ನ ಬದುಕು ಮುಗಿದುಹೋಯಿತು” ಪ್ರೀತಿ ಶೆಣೈ ಎಂಬ ಪ್ರಸಿದ್ಧ ಇಂಗ್ಲಿಷ್ ಲೇಖಕಿಯ ಕಾದಂಬರಿಯೊಂದರ ಹೆಸರು : ದ ರೂಲ್ ಬ್ರೇಕರ್ಸ್! ಇದು ಸ್ವಾಭಿಮಾನದ ಬದುಕಿಗಾಗಿ ಒಬ್ಟಾಕೆ “ನಿಯಮ’ವನ್ನು ಮುರಿಯುವ ಕಥನ.
ಇಂದಿನ ಶಾಲೆಗಳಲ್ಲಿ ವಿದ್ಯೆಗಿಂತ ಹೆಚ್ಚಾಗಿ ಶಿಸ್ತುಪಾಲನೆಯನ್ನು ಮಕ್ಕಳಿಗೆ ಕಲಿಸುತ್ತಾರೆ. ಟೈ ಕಟ್ಟುವುದು ಕೊಂಚ ಸರಿಯಾಗದಿದ್ದರೂ ಅದು ಅಸಭ್ಯತೆ! ಈ ಶಿಸ್ತು ಅಂತರಂಗದೊಂದಿಗೆ ನುಸಂಧಾನಗೊಳ್ಳದಿದ್ದರೆ ಭವಿಷ್ಯದ ಬದುಕು ಯಾಂತ್ರಿಕವಾಗತೊಡಗುತ್ತದೆ. ಇದನ್ನು ಮುರಿಯುವುದು ಹೇಗೆ ಎಂಬ ಕಡೆಗೆ ಮನಸ್ಸು ಚಾಚಿಕೊಳ್ಳುತ್ತದೆ.
ಇವತ್ತು ಸಮಯಕ್ಕೆ ಸರಿಯಾಗಿ ಆರಂಭವಾಗಿ, ಸಮಯಕ್ಕೆ ಸರಿಯಾಗಿ ಮುಕ್ತಾಯಗೊಳ್ಳುವ ಕಾರ್ಯ ಕ್ರಮಗಳ ಬಗ್ಗೆ ಎಲ್ಲರಿಗೂ ಮೆಚ್ಚುಗೆಯೇ. ತಪ್ಪಲ್ಲ. ಆದರೆ, ಕಾರ್ಯಕ್ರಮದೊಳಗೆ ಏನಿದೆ ಎಂದು ಯಾರೂ ವಿಮರ್ಶೆ ಮಾಡುವುದಿಲ್ಲ. ಒಂದು ಒಳ್ಳೆಯ ಸಂಗೀತ ಗಾಯನವನ್ನು “ಠಣ್’ ಎಂದು ಆರಂಭಿಸಿ, “ಠಣ್’ ಎಂದು ಮುಗಿಸುವುದಕ್ಕಾಗುತ್ತದೆಯೆ? ನಿಯಮ ಎಂಬುದು ಬದುಕನ್ನು ರೂಪಿಸುವ ಉಪಕರಣ ಮಾತ್ರ. ಅದೇ ಬದುಕಲ್ಲ !
ಮೈತ್ರೇಯಿ