Advertisement

ಮಾಹಿತಿ ಹಕ್ಕಿನ ಉಲ್ಲಂಘನೆ: ತನಿಖೆಗೆ ನಿರ್ಣಯ

12:13 AM Aug 04, 2019 | Team Udayavani |

ಕಡಬ: ಕುಟ್ರಾಪ್ಪಾಡಿ ಗ್ರಾಮ ಪಂಚಾಯತ್‌ನ ಗ್ರಾಮಸಭೆ ಹೊಸಮಠದ ಕುಟ್ರಾಪ್ಪಾಡಿ ಸ.ಹಿ.ಪ್ರಾ. ಶಾಲೆಯ ಸಭಾಂಗಣದಲ್ಲಿ ಪಂಚಾಯತ್‌ ಅಧ್ಯಕ್ಷೆ ವಿದ್ಯಾ ಕೆ. ಗೋಗಟೆ ಅವರ ಅಧ್ಯಕ್ಷತೆಯಲ್ಲಿ ಜರಗಿತು.

Advertisement

ಗ್ರಾಮಸ್ಥ ಕ್ಸೇವಿಯರ್‌ ಬೇಬಿ ಅವರು ವಿಷಯ ಪ್ರಸ್ತಾವಿಸಿ ಗ್ರಾ.ಪಂ.ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೇಳಲಾಗಿತ್ತು. ಅದರಲ್ಲಿ ಲಭಿಸಿದ ಮಾಹಿತಿಯಂತೆ 2016ರಿಂದ ಈವರೆಗೆ ಕಾರ್ಮಿಕ ನಿಧಿ ಪಡೆದ ವಿಚಾರದಲ್ಲಿ ಎರಡೆರಡು ಬಾರಿ ಬಿಲ್ ಮಾಡಲಾಗಿದೆ. ಈ ವಿಚಾರದಲ್ಲಿ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ನನ್ನಲ್ಲಿ ದಾಖಲೆ ಇದೆ ಎಂದು ಹೇಳಿದರು.

ಅದಕ್ಕೆ ಉತ್ತರಿಸಿದ ಪಿಡಿಒ ವಿಲ್ಫ್ರೆಡ್‌ ಲಾರೆನ್ಸ್‌ ರೋಡ್ರಿಗಸ್‌, ನೀಡಿದ ಮಾಹಿತಿಯಲ್ಲಿ ಲೋಪದೋಷಗಳಿದ್ದಲ್ಲಿ ಸರಿಪಡಿಸಿಕೊಳ್ಳುವ ಎಂದು ಹೇಳಿದರು. ಸತ್ಯಾಸತ್ಯತೆ ಹೊರಬರಲು ಸೂಕ್ತ ತನಿಖೆಯಾಗಬೇಕು ಎಂದು ಕ್ಸೇವಿಯರ್‌ ಬೇಬಿ ಒತ್ತಾಯಿಸಿದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

ಕಾಮಗಾರಿಗೆ ನಕಲಿ ಸಹಿ!

ಕೇರ್ಪುಡೆ ರಸ್ತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡ ನಿಧಿಯಲ್ಲಿ ಅನುದಾನವಿಟ್ಟು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಅಲ್ಲಿ ಯಾವುದೇ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮನೆಗಳು ಇಲ್ಲದಿದ್ದರೂ ನಕಲಿ ಸಹಿ ಮಾಡಿ ಕಾಮಗಾರಿ ನಡೆಸಲಾಗಿದೆ. ಆದರೆ ಪಂಚಾಯತ್‌ ವ್ಯಾಪ್ತಿಯ ಇನ್ನೊಂದು ಕಡೆ ಇದೇ ರೀತಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದಾಗ ಅದಕ್ಕೆ ಹಣ ಸಂದಾಯ ಮಾಡಿಲ್ಲ. ಈ ಇಬ್ಬಗೆಯ ನೀತಿಯ ವಿರುದ್ಧ ತನಿಖೆಯಾಗಬೇಕು ಎಂದು ಅಗ್ರಹಿಸಲಾಯಿತು. ಅದರಂತೆ ತನಿಖೆಗೆ ನಿರ್ಣಯಿಸಲಾಯಿತು.

Advertisement

ಅನುದಾನ ತಾರತಮ್ಯ

ಕುಟ್ರಾಪ್ಪಾಡಿ ಮತ್ತು ಬಲ್ಯ ಗ್ರಾಮಗಳಿಗೆ ಸಮಾನ ರೀತಿಯಲ್ಲಿ ಅನುದಾನ ಹಂಚಿಕೆಯಾಗುತ್ತಿಲ್ಲ. ಬಲ್ಯ ಗ್ರಾಮದ ಪರಿಶಿಷ್ಟ ಜಾತಿ ಕುಟುಂಬಗಳಿಗೆ ನೀರಿನ ಟ್ಯಾಂಕ್‌ ವಿತರಣೆ ಮಾಡುವಾಗ ತಾರತಮ್ಯ ಮಾಡಲಾಗಿದೆ. ಕುಟ್ರಾಪ್ಪಾಡಿ ಗ್ರಾಮದ ಫಲಾನುಭವಿಗಳಿಗೆ ದೊಡ್ಡ ಸಿಂಟೆಕ್ಸ್‌ ಟ್ಯಾಂಕ್‌ ನೀಡಿದರೆ, ಬಲ್ಯ ಗ್ರಾಮದ ಫಲಾನುಭವಿಗಳಿಗೆ ಸಣ್ಣ ಡ್ರಮ್‌ ನೀಡಲಾಗಿದೆ ಎಂದು ಗ್ರಾಮಸ್ಥ ಧನಂಜಯ ಕೊಡಂಗೆ ಆರೋಪಿಸಿದರು. ಅದಕ್ಕೆ ಉತ್ತರಿಸಿದ ಅಧ್ಯಕ್ಷರು, ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿಲ್ಲ. ಬಲ್ಯ ಗ್ರಾಮಕ್ಕೂ ಸಮಾನ ಅನುದಾನ ಒದಗಿಸಲಾಗಿದೆ. ಆದರೆ ಅಲ್ಲಿನ ದಲಿತ ಕಾಲನಿಗೆ ಸಂಪರ್ಕ ಮಾಡುವ ರಸ್ತೆಗೆ ಅತೀ ಅಗತ್ಯವಾಗಿ ಮೋರಿ ಅಳವಡಿಸಲು ಇದ್ದುದರಿಂದ ಸ್ವಲ್ಪ ಅನುದಾನವನ್ನು ಅದಕ್ಕೆ ಬಳಕೆ ಮಾಡಲಾಗಿದೆ. ಉಳಿದ ಹಣದಲ್ಲಿ ಡ್ರಮ್‌ ವಿತರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಸಾಕ್ಷಿ ಇದ್ದರೂ ಕ್ರಮವಿಲ್ಲ

ದಲಿತ ಮುಖಂಡರಾದ ಸುಗುಣಾ ದೇವಯ್ಯ ಮಾತನಾಡಿ, ಇಲ್ಲಿನ ಶಿಕ್ಷಕ ತೀರ್ಥೇಶ್‌ ಅವರ ಮೇಲೆ ನಮ್ಮ ಅಂಗಡಿಗೆ ಬೆಂಕಿ ಇಟ್ಟ ಪ್ರಕರಣ ಸಹಿತ 6 ಆರೋಪಗಳು ಇವೆ. ಸಾಕ್ಷಿ ಸಮೇತ ದೂರು ನೀಡಲಾಗಿದೆ. ಅವರಿಗೆ ಏನು ಶಿಕ್ಷೆ ನೀಡಲಾಗಿದೆ ಎಂದರು. ಅದಕ್ಕೆ ಉತ್ತರಿಸಿದ ಚರ್ಚಾ ನಿಯಂತ್ರಣಾಧಿಕಾರಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್‌ ಅವರು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಈ ಕುರಿತು ಕ್ರಮ ಕೈಗೊಂಡಿದ್ದಾರೆ ಎಂದರು.

ಹಲವು ಬೇಡಿಕೆಗಳು

ಡಿಸಿ ಮನ್ನಾ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಅದನ್ನು ತೆರವು ಮಾಡಬೇಕು. ಬಲ್ಯ-ನೆಲ್ಯಾಡಿ ರಸ್ತೆ ಬದಿಯ ಚರಂಡಿಯಲ್ಲಿ ವಿದ್ಯುತ್‌ ಕಂಬಗಳಿವೆ. ಅವುಗಳನ್ನು ತೆರವು ಮಾಡಬೇಕು. ಬಲ್ಯ ಪಟ್ಟೆ ಶಾಲೆಗೆ ಶಿಕ್ಷಕರ ನೇಮಕಾತಿಯಾಗಬೇಕು. ಶಾಲೆಗೆ ಸಂಪರ್ಕಿಸುವ ರಸ್ತೆಗೆ ಕುಬಲಾಡಿಯಲ್ಲಿ ಸೇತುವೆ ನಿರ್ಮಾಣವಾಗಬೇಕು. ವಿದ್ಯುತ್‌ ಲೈನ್‌ ಮೇಲೆ ಇರುವ ಅಪಾಯಕಾರಿ ಮರಗಳನ್ನು ತೆರವು ಮಾಡಬೇಕು. ಆಧಾರ್‌ ತಿದ್ದುಪಡಿಗೆ ಸೂಕ್ತ ವ್ಯವಸ್ಥೆಯಾಗಬೇಕು ಮೊದಲಾದ ಬೇಡಿಕೆಗಳನ್ನು ಸಭೆಯ ಮುಂದಿಡಲಾಯಿತು.

ಗ್ರಾಮಸ್ಥರಾದ ಕೊರಗಪ್ಪ ಗೌಡ, ರಾಜು, ಪೊಡಿಯ ಪೆರ್ಲದಕೆರೆ, ಎಲ್ಸಿ ಥಾಮಸ್‌, ಲಕ್ಷ್ಮೀಶ ಬಂಗೇರ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.

ಜಿ.ಪಂ. ಸದಸ್ಯರಾದ ಪಿ.ಪಿ.ವರ್ಗೀಸ್‌ ಹಾಗೂ ಸರ್ವೋತ್ತಮ ಗೌಡ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು. ತಾ. ಪಂ. ಸದಸ್ಯರಾದ ಕೆ.ಟಿ. ವಲ್ಸಮ್ಮ, ಗಣೇಶ್‌ ಕೈಕುರೆ, ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಆನಂದ ಪೂಜಾರಿ, ಸದಸ್ಯರಾದ ಶಿವಪ್ರಸಾದ್‌ ರೈ ಮೈಲೇರಿ, ಶಿವಪ್ರಸಾದ್‌ ಪುತ್ತಿಲ, ದೇವಯ್ಯ ಗೌಡ ಪನ್ಯಾಡಿ, ಮಹಮ್ಮದ್‌ ಆಲಿ, ಜಾನಕಿ ಸುಂದರ, ತನಿಯ ಸಂಪಡ್ಕ, ಯಶೋದಾ ಪೂವಳ, ಜಾನಕಿ ಕುಂಟೋಡಿ, ಶೋಭಾ ಅನಿಲ್, ಲಿಂಗಪ್ಪ ಗೌಡ, ಭಾರತಿ, ಗೀತಾ ರಾಮಣ್ಣ ಉಪಸ್ಥಿತರಿದ್ದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್‌ ಲಾರೆನ್ಸ್‌ ರೋಡ್ರಿಗಸ್‌ ಸ್ವಾಗತಿಸಿ, ವಂದಿಸಿದರು. ಸಿಬಂದಿ ಜಿತೇಶ್‌ ವರದಿ ಮಂಡಿಸಿದರು. ಅಂಗು ಕಳಾರ ಸಹಕರಿಸಿದರು.

ಆಯುಷ್ಮಾನ್‌ ಭಾರತ್‌ ಯೋಜನೆಯಲ್ಲಿ ಉಚಿತ ಚಿಕಿತ್ಸೆ ಎಲ್ಲೆಡೆ ಸಿಗುತ್ತಿಲ್ಲ. ಅದನ್ನು ಜಿಲ್ಲಾ ಕೇಂದ್ರಕ್ಕೆ ಸೀಮಿತಗೊಳಿಸಲಾಗಿದೆ. ಈ ಯೋಜನೆ ಎಲ್ಲ ಆಸ್ಪತ್ರೆಗಳಲ್ಲಿ ದೊರೆತರೆ ಮಾತ್ರ ಬಡವರಿಗೆ ಪ್ರಯೋಜವಾಗಬಹುದು ಎಂದು ರೈತ ಮುಖಂಡ ವಿಕ್ಟರ್‌ ಮಾರ್ಟಿಸ್‌ ಹೇಳಿದರು. ಕಡಬ ಭೂಮಾಪನಾ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಅಲ್ಲಿನ ಅಧಿಕಾರಿಗಳು ಬಡವರ ರಕ್ತ ಹೀರುತ್ತಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದರು.

ಆಯುಷ್ಮಾನ್‌ ಭಾರತ್‌ ಯೋಜನೆಯಲ್ಲಿ ಉಚಿತ ಚಿಕಿತ್ಸೆ ಎಲ್ಲೆಡೆ ಸಿಗುತ್ತಿಲ್ಲ. ಅದನ್ನು ಜಿಲ್ಲಾ ಕೇಂದ್ರಕ್ಕೆ ಸೀಮಿತಗೊಳಿಸಲಾಗಿದೆ. ಈ ಯೋಜನೆ ಎಲ್ಲ ಆಸ್ಪತ್ರೆಗಳಲ್ಲಿ ದೊರೆತರೆ ಮಾತ್ರ ಬಡವರಿಗೆ ಪ್ರಯೋಜವಾಗಬಹುದು ಎಂದು ರೈತ ಮುಖಂಡ ವಿಕ್ಟರ್‌ ಮಾರ್ಟಿಸ್‌ ಹೇಳಿದರು. ಕಡಬ ಭೂಮಾಪನಾ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಅಲ್ಲಿನ ಅಧಿಕಾರಿಗಳು ಬಡವರ ರಕ್ತ ಹೀರುತ್ತಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next