Advertisement

ಸದನ ಸಮಿತಿ ನಿಯಮ ಉಲ್ಲಂಘನೆ: ಆಲ್ಕೋಡ್‌

03:13 PM Jun 09, 2022 | Team Udayavani |

ಲಿಂಗಸುಗೂರು: ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಹಿತ ಕಾಯುವಂತೆ 1989-90ರಲ್ಲಿ ವಿಧಾನ ಪರಿಷತ್‌ ಸದನ ಸಮಿತಿ ಜಾರಿಗೊಳಿಸಿದ ನಿಯಮಗಳನ್ನು ಹಟ್ಟಿ ಚಿನ್ನದ ಗಣಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಆಲ್ಕೋಡ್‌ ಆರೋಪಿಸಿದ್ದಾರೆ.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಟ್ಟಿಚಿನ್ನದಗಣಿಯಲ್ಲಿ 274 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿರುವುದು ಸಂತಸದ ಸಂಗತಿ. ಆದರೆ, ಹಟ್ಟಿ ಚಿನ್ನದ ಗಣಿಗಾಗಿ ಜಮೀನು ಕಳೆದುಕೊಂಡು ತೊಂದರೆ ಎದುರಿಸುತ್ತಿರುವವರು ಲಿಂಗಸುಗೂರು ತಾಲೂಕಿನ ಜನ. ಹುದ್ದೆಗಳಲ್ಲಿ ನೇಮಕಾತಿಯಲ್ಲಿ ಅಕ್ಕಪಕ್ಕದ ಜಿಲ್ಲೆಯವರಿಗೆ ಆದ್ಯತೆ ನೀಡುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ನೇಮಕಾತಿಯಲ್ಲಿ ಮೊದಲು ಈ ತಾಲೂಕಿನ ನಿರುದ್ಯೋಗ ಯುವಕರಿಗೆ ಆದ್ಯತೆ ನೀಡಬೇಕು. ಎರಡನೇ ಆದ್ಯತೆ ಜಿಲ್ಲೆಯ ಎಲ್ಲ ತಾಲೂಕಿನವರಿಗೆ ನೀಡಬೇಕು ಎಂದರು.

ಹಟ್ಟಿಚಿನ್ನದಗಣಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಕಾರ್ಮಿಕರಿಗೆ ಗೌರವಯುತ ಬದುಕು ಸಾಗಿಸಲು ಅಗತ್ಯ ಸೌಲಭ್ಯ ಒದಗಿಸಬೇಕು. 1989-90ನೇ ಸಾಲಿನಲ್ಲಿ ವಿಧಾನ ಪರಿಷತ್‌ ಸದನ ಸಮಿತಿಯಲ್ಲಿ ನಿಯಮಗಳನ್ನು ಜಾರಿಗೆ ತರಲಾಗಿದೆ. ಆದರೆ, ಹಟ್ಟಿಚಿನ್ನದಗಣಿ ಅಧಿಕಾರಿಗಳನ್ನು ಹಾಗೂ ಈವರೆಗೂ ಅಧಿಕಾರ ನಡೆಸಿರುವ ಅಧ್ಯಕ್ಷರು ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಕಾರ್ಮಿಕ ಕಾಯ್ದೆ ಪ್ರಕಾರ ಗಣಿಯಲ್ಲಿನ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ಹಾಗೂ ಸಕಲ ಸೌಲಭ್ಯ ನೀಡಬೇಕು ಎಂದರು.

ಈ ನೇಮಕಾತಿ ಅಧಿಸೂಚನೆ ರದ್ದುಪಡಿಸಿ ತಾಲೂಕು ಹಾಗೂ ಜಿಲ್ಲೆಯವರಿಗೆ ಆದ್ಯತೆ ನೀಡಬೇಕು. ಗಣಿ ಎಂಡಿ ಅವರು ತಿಂಗಳಲ್ಲಿ ನಾಲ್ಕು ಭಾರಿ ಹಟ್ಟಿ ಚಿನ್ನದ ಗಣಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next