ಕಲಬುರಗಿ: ಗ್ರಾಮ ಪಂಚಾಯಿತಿ ನೌಕರರ ವೇತನ ಪಾವತಿಯಲ್ಲಿ ಸರ್ಕಾರ ಆದೇಶ ಉಲ್ಲಂಘನೆ ಮಾಡುತ್ತಿದ್ದು, ಸಮಸ್ಯೆ ಪರಿಹರಿಸಿ ಕನಿಷ್ಠ ವೇತನ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸೋಮವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿ ಕಾರಿಗಳ ಕಚೇರಿ ಎದುರು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1ರಿಂದ ಪಿಡಿಒ ಹುದ್ದೆಗೆ, ಗ್ರೇಡ್-2 ಮತ್ತು ಲೆಕ್ಕ ಸಹಾಯಕ ಹುದ್ದೆಯಿಂದ ಗ್ರೇಡ್-1 ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಬೇಕು. ಖಾಲಿ ಆಗುವ ಗ್ರೇಡ್-2 ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಿಲ್ ಕಲೆಕ್ಟರ್, ಕ್ಲರ್ಕ್ ಕಂ ಕಂಪ್ಯೂಟರ್ ಆಪರೇಟರ್‌ಗಳಿಗೆ ಬಡ್ತಿ ಕೊಡಬೇಕು. ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಕ್ಲರ್ಕ್ ಕಂ ಕಂಪ್ಯೂಟರ್ ಆಪರೇಟರುಗಳಿಗೆ ತೊಂದರೆ ಕೊಟ್ಟು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ತೆಗೆದು ಹಾಕುತ್ತಿರುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸರ್ಕಾರದ ಆದೇಶ ಉಲ್ಲಂಘಿಸಿ ಕೆಲಸದಿಂದ ತೆಗೆದವರನ್ನು ಕೂಡಲೇ ಕೆಲಸದಲ್ಲಿ ಮುಂದುವರಿಸಬೇಕು. ಕಿರುಕುಳ ನೀಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನೌಕರರಿಗೆ ನಿವೃತ್ತಿ ವೇತನ, ಗಳಿಕೆ ರಜೆ,ವಾರಕ್ಕೊಂದು ವೇತನ ಸಹಿತ ರಜೆ, ವೈದ್ಯಕೀಯ ವೆಚ್ಚ ಸರ್ಕಾರಿ ನೌಕರರಿಗೆ ನೀಡುವಂತೆ ಎಲ್ಲ ಗ್ರಾಪಂ ನೌಕರರಿಗೂ ಕಲ್ಪಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನೌಕರರ ವೇತನ ಬಾಕಿ, ಇಎಫ್‌ಎಂಎಸ್‌ನಲ್ಲಿ ಸೇರದೆ ಇರುವವರ ಮತ್ತು ಮಾರ್ಚ್ 2018ರ ಆದೇಶದ ನಂತರ ಬಾಕಿ ಉಳಿದ ವೇತನ ಕರವಸೂಲಿಯಾದ ಹಣದಲ್ಲಿ ಶೇ.40ರಷ್ಟು ವೇತನ ಪಾವತಿಸಬೇಕು. ಸರ್ಕಾರದ ಆದೇಶದಂತೆ 14ನೇ ಹಣಕಾಸು ಯೋಜನೆ ನಿಧಿಯಲ್ಲಿ ಶೇ.10ರಷ್ಟು ವೇತನ ನೀಡಬೇಕು. ಗ್ರಾಮ ಪಂಚಾಯಿತಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರುಗಳಿಗೆ ಅನ್ಯ ಇಲಾಖೆ ಕೆಲಸಗಳು ನಿರ್ವಹಿಸುವಂತೆ ಇರುವ ಆದೇಶಗಳನ್ನು ಹಿಂಪಡೆಯಬೇಕು ಹಾಗೂ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಿಇಒಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾ.ಪಂ ನೌಕರರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ರಾಜ್ಯ ಸಹ ಕಾರ್ಯದರ್ಶಿ ಶಿವಾನಂದ ಕವಲಗಾ, ಸಂದೇಶ ಕಟ್ಟಿಮನಿ, ಶಿವಲಿಂಗಪ್ಪ ರೇವಣಸಿದ್ದಪ್ಪ, ಪಂಡಿತ್ ಹೊಳಕುಂದಾ, ಮಲ್ಲಿಕಾರ್ಜುನ ಹಣಮಂತ, ಸತೀಶಕುಮಾರ, ಮಲ್ಲಣ್ಣ ಹೊನಗುಂಟ ಹಾಗೂ ನೂರಾರು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.