ಇಂಡಿ: ಕೃಷಿ ಪರಿಕರ ಮಾರಾಟಗಾರರು ನಿಯಮ ಉಲ್ಲಂಘಿಸಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದೆಂದು ಸಹಾಯಕ ಕೃಷಿ ನಿರ್ದೇಶಕ ಜಾಗೃತದಳದ ಎ.ಪಿ. ಬಿರಾದಾರ ಹೇಳಿದರು.
ಪಟ್ಟಣದ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ನಡೆದ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜಗಳನ್ನು ಮಾರಾಟ ಮಾಡತ್ತಿದ್ದು, ಕಡ್ಡಾಯವಾಗಿ ರಸಗೊಬ್ಬರ ಅಂಗಡಿ ಮುಂಗಟ್ಟುಗಳ ಮಾಲೀಕರು ಸಕಾಲದಲ್ಲಿ ನಿಗದಿತ ದರದಲ್ಲಿ ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಯಾವುದೇ ರೀತಿಯ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜಗಳನ್ನು ಗೋದಾಮುಗಳಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸುವುದು, ಬಿತ್ತನೆ ಬೀಜದ ಚಿಲ್ಲರೆ ಮಾರಾಟ ಮಾಡುವುದು ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೃಷಿ ಸಹಾಯಕ ನಿರ್ದೇಶಕ ಇನಾಮದಾರ ಮಾತನಾಡಿ, ರೈತರಿಗೆ ಕಡಾಯವಾಗಿ ಖರೀದಿಸಿದ ಕೃಷಿ ಸಾಮಗ್ರಿಗಳಿಗೆ ರಶೀದಿ ಹಾಗೂ ರೈತರ ಸಹಿ ಪಡೆಯಬೇಕು. ಸರಕಾರ ನಿಗದಿಪಡಿಸಿದ ದರದಲ್ಲೇ ಮಾರಾಟ ಮಾಡಬೇಕು. ಗೌಪ್ಯವಾಗಿ ರಸಗೊಬ್ಬರಗಳನ್ನು ಸಂಗ್ರಹಿಸಿ, ತಾತ್ಕಾಲಿಕ ಅಭಾವ ಅಷ್ಟಿಸಿ ಹೆಚ್ಚಿನ ದರದಗಳಲ್ಲಿ ರಸಗೊಬ್ಬರ ಮಾರಾಟ ಮಾಡದಿರಲು ಎಚ್ಚರಿಕೆ ನೀಡಿದರು.
ರೈತರಿಗೆ ಒತ್ತಾಯ ಪೂರ್ವಕವಾಗಿ ಒಂದೇ ಸಂಸ್ಥೆಯ ಬೀಜ ಮಾರಾಟ ಮಾಡದಿರಲು ರೈತರ ಆಯ್ಕೆಗೆ ಅನುಗುಣವಾಗಿ ಬಿತ್ತನೆ ಬೀಜ ಮಾರಾಟ ಮಾಡಲು ತಿಳಿಸಿದರು. ಅಂಗಡಿಕಾರರು ನಿಯಮಗಳನ್ನು ಅನುಸರಿಸದಿದ್ದಲ್ಲಿ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದರು.
ಯೂರಿಯಾ ಗೊಬ್ಬರಕ್ಕೆ ಸರಕಾರ ಪ್ರತಿ 45 ಕೆಜಿ ಚೀಲಕ್ಕೆ 800 ರೂ. ಮೊತ್ತದ ಸಹಾಯಧನ ಭರಿಸುತ್ತದೆ. ಡಿಎಪಿ ಗೊಬ್ಬರಕ್ಕೆ ಪ್ರತಿ 50 ಗ್ರಾಮ ಕೆಜಿ ಚೀಲಕ್ಕೆ 2,500 ರೂ. ಮತ್ತು 15:15:15 ಗೊಬ್ಬರ ಪ್ರತಿ 50 ಕೆಜಿ ಚೀಲಕ್ಕೆ 1,425 ರೂ. ಸಹಾಯಧನ ಭರಿಸುತ್ತದೆ ಎಂದರು.
ಕೃಷಿ ಅಧಿಕಾರಿ ಬಸವರಾಜ ಬಿರಾದಾರ ಮಾತನಾಡಿ, ರಸಗೊಬ್ಬರ ಕೇಂದ್ರ ಸರಕಾರವು 2020-21ನೇ ಸಾಲಿನಲ್ಲಿ 127 ಲಕ್ಷ ಕೋಟಿ ರೂ., 2021-22ನೇ ಸಾಲಿಗೆ 160 ಲಕ್ಷ ಕೋಟಿ ರೂ. ಹಾಗೂ ಪ್ರಸಕ್ತ ಸಾಲಿನಲ್ಲಿ 200 ಲಕ್ಷ ಕೋಟಿ ರೂ. ಸಹಾಯಧನ ಒದಗಿಸಿದೆ. ಇಂಡಿ ತಾಲೂಕಿನಲ್ಲಿ 125 ಕೃಷಿ ಪರಿಕರಗಳ ಮಾರಾಟಗಾರರು ಪರವಾನಗಿ ಪಡೆದಿದ್ದಾರೆ. ಅದರಲ್ಲಿ 100 ಖಾಸಗಿ ಮತ್ತು 25 ಸೊಸೈಟಿಗಳಿವೆ. ಒಟ್ಟು 1,40,000 ಹೆಕ್ಟೇರ್ ಕೃಷಿ ಮತ್ತು 10,000 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು ಇವೆ ಎಂದರು.
ಶಂಕರ ಪವಾರ, ಕೃಷಿ ಪರಿಕರ ಮಾರಾಟ ಸಂಘದ ಅಧ್ಯಕ್ಷ ಅಜೀತ ಧನಶೆಟ್ಟಿ ಮಾತನಾಡಿದರು. ಶಾಂತು ಧನಶೆಟ್ಟಿ, ಮಹಾವೀರ ಧನಶೆಟ್ಟಿ, ಸುರೇಶ ನಿಗಡಿ, ರಾಜಕುಮಾರ ಬಿರಾದಾರ, ಬಿ.ಎಸ್. ಪಾಟೀಲ, ಎ.ಸಿ. ಧನಶೆಟ್ಟಿ, ಸಂಗನಬಸು ಬೇವನೂರ, ಇಂಡಿ ಮತ್ತು ಚಡಚಣದ ಮಾರಾಟಗಾರರಿದ್ದರು.