ಕಾಸರಗೋಡು, ಎ. 13: ಕುಂಬಳೆ ಕೊಯಿಪ್ಪಾಡಿಯ ಬಿಎಂಎಸ್ ಕಾರ್ಯಕರ್ತ ವಿನು ಅವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ಲೋಕಲ್ ಕಮಿಟಿ ಸದಸ್ಯ ಹಾಗೂ ಕುಂಬಳೆ ಗ್ರಾಮ ಪಂಚಾಯತ್ ಸದಸ್ಯನಾಗಿದ್ದ ಎಸ್. ಕೊಗ್ಗು (45), ಸಿಪಿಎಂ ಕಾರ್ಯಕರ್ತರಾದ ಶಾಂತಿಪಳ್ಳದ ಬಾಲನ್ (56) ಮತ್ತು ಲಕ್ಷಂವೀಡ್ ಕಾಲನಿಯ ಮುಹಮ್ಮದ್ ಕುಂಞಿ (59) ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಇದನ್ನೂ ಓದಿ:ಕೈ ನಾಯಕರ ವಿರುದ್ಧ ಜಮೀರ್ ಕೋಪ; ಸುರ್ಜೇವಾಲ ಎದುರು ಅಸಮಾಧಾನ ತೋಡಿದ ಜಮೀರ್ ಅಹಮದ್
ಅವರನ್ನು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅವರು ಸಲ್ಲಿಸಿದ ಮೇಲ್ಮನವಿಯಲ್ಲಿ ಮುಂದಿನ ಪ್ರಕ್ರಿಯೆ ಅಂಗವಾಗಿ ಮೂವರು ಶರಣಾಗಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿ ಬಾಲಕೃಷ್ಣ ಈ ಹಿಂದೆಯೇ ಸಾವಿಗೀಡಾಗಿದ್ದಾರೆ.
7 ವರ್ಷ ಸಜೆಯಾಗಿತ್ತು
ಕೊಗ್ಗು ಸಹಿತ ಮೂವರಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಏಳು ವರ್ಷ ಸಜೆ ವಿಧಿಸಿತ್ತು. ಈ ತೀರ್ಪಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. 2021ರ ಡಿಸೆಂಬರ್‌ನಲ್ಲಿ ಶಿಕ್ಷೆಯನ್ನು ನಾಲ್ಕು ವರ್ಷಗಳಾಗಿ ಹೈಕೋರ್ಟ್ ಕಡಿತಗೊಳಿಸಿ ತೀರ್ಪು ನೀಡಿತ್ತು.
ಇದರ ವಿರುದ್ಧ ಈ ಮೂವರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಮೇಲ್ಮನವಿಯನ್ನು ಸ್ವೀಕರಿಸಿದ ನ್ಯಾಯಾಲಯ ನಾಲ್ಕು ವಾರಗಳೊಳಗೆ ಜಿಲ್ಲಾ ನ್ಯಾಯಾಲಯದಲ್ಲಿ ಶರಣಾಗಲು ಆದೇಶಿಸಿತ್ತು. ಅವರು ಶರಣಾಗಿರುವ ಮಾಹಿತಿಯನ್ನೊಳಗೊಂಡ ದಾಖಲೆ ಪತ್ರಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಹಾಜರುಪಡಿಸಿದ್ದಲ್ಲಿ ಮಾತ್ರವೇ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸುವುದು ಎಂದು ಹೇಳಿತ್ತು. 1998ರ ಅಕ್ಟೋಬರ್ 9ರಂದು ವಿನು ಅವರ ಕೊಲೆ ನಡೆದಿತ್ತು.