ಉಡುಪಿ: ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣದ ನಾಲ್ವರಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಜೋಷಿ ಅವರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಬೈಕಾಡಿಯ ಮುತ್ತಪ್ಪ ಯಾನೆ ಸುರೇಶ್ ಬಳೆಗಾರ (36), ಆತನ ಸಹೋದರ ನಾಗರಾಜ ಬಳೆಗಾರ (33), ಮೈಸೂರಿನ ಶೇಖ್ ರಿಯಾಝ್ ಅಹಮ್ಮದ್(33) ಮತ್ತು ಕೊಪ್ಪಳ ಗಂಗಾವತಿಯ ಶರಣಪ್ಪ ಅಮರಾಪುರ್(33) ಶಿಕ್ಷೆಗೊಳಗಾದವರು.ಇವರ ಮೇಲಿನ ಆರೋಪ ಸಾಬೀತಾ ಗಿದೆ ಎಂದು ಬುಧವಾರ ನಿರ್ಧರಿಸಿದ್ದ ಕೋರ್ಟ್ ಗುರುವಾರ ಶಿಕ್ಷೆ ವಿಧಿಸಿದೆ.
2011ರಲ್ಲಿ ಹಿರಿಯಡಕದ ಜಿಲ್ಲಾ ಕಾರಾಗೃಹದಲ್ಲಿ ಕೊಲೆ ನಡೆದಿತ್ತು. ರೌಡಿ ಪಿಟ್ಟಿ ನಾಗೇಶ್ ಸಹಿತ ಒಟ್ಟು ಆರು ಮಂದಿ ಆರೋಪಿಗಳ ಪೈಕಿ ರಾಘವೇಂದ್ರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಪಿಟ್ಟಿ ನಾಗೇಶ್ ಕೊಲೆಯಾಗಿದ್ದಾನೆ.
ಆರೋಪಿಗಳಿಗೆ ಐಪಿಸಿ ಸೆಕ್ಷನ್ 302ರಂತೆ ಕೊಲೆ ಪ್ರಕರಣದಡಿ ಜೀವಾವಧಿ ಮತ್ತು 20 ಸಾ. ರೂ. ದಂಡ, ತೀವ್ರವಾಗಿ ಗಾಯಗೊಳಿಸಿರುವುದಕ್ಕೆ 3 ವರ್ಷ ಸಜೆ ಮತ್ತು 5 ಸಾ. ರೂ. ದಂಡ,ಸರಕಾರಿ ಸಿಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಕ್ಕೆ 1 ವರ್ಷ ಸಜೆ ಮತ್ತು 2 ಸಾ.ರೂ. ದಂಡ, ಸಿಬಂದಿಗೆ ಬೆದರಿಕೆ ಹಾಕಿರುವುದಕ್ಕೆ 1 ವರ್ಷ ಸಜೆ ಮತ್ತು 2 ಸಾ. ದಂಡ ವಿಧಿಸಲಾಗಿದೆ. ಆರೋಪಿಗಳ ಪೈಕಿ ನಾಗರಾಜ್ ಬೆಳಗಾವಿ ಕಾರಾಗೃಹದಲ್ಲಿ, ಉಳಿದ ಮೂವರು ಧಾರವಾಡ ಜೈಲಿ ನಲ್ಲಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಿತು.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಅವರು ವಿಚಾರಣೆ ನಡೆಸಿ ವಾದ ಮಂಡಿಸಿದ್ದಾರೆ.