Advertisement

Sandalwood; ವಿನೋದ್‌ ಪ್ರಭಾಕರ್‌ ನಟನೆಯ ‘ಫೈಟರ್‌’ ರಿಲೀಸ್ ದಿನಾಂಕ ಘೋಷಣೆ

02:39 PM Sep 21, 2023 | Team Udayavani |

ವಿನೋದ್‌ ಪ್ರಭಾಕರ್‌ ನಾಯಕರಾಗಿರುವ “ಫೈಟರ್‌’ ಚಿತ್ರದ ಟೀಸರ್‌, ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿವೆ. ಸಹಜವಾಗಿಯೇ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಸಿನಿಮಾ ಪ್ರೇಮಿಗಳಲ್ಲಿತ್ತು. ಆ ಕುತೂಹಲಕ್ಕೆ ತೆರೆಬಿದ್ದಿದೆ. ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ದಿನಾಂಕ ಘೋಷಿಸಿದ್ದು, ಅಕ್ಟೋಬರ್‌ 6ರಂದು ಚಿತ್ರ ತೆರೆಕಾಣುತ್ತಿದೆ.

Advertisement

ಚಿತ್ರದ ಬಿಡುಗಡೆ ದಿನಾಂಕವನ್ನು ವಿಭಿನ್ನ ರೀತಿಯಲ್ಲಿ ಅನೌನ್ಸ್‌ ಮಾಡುವ ಮೂಲಕ ಚಿತ್ರತಂಡ ವಿಶೇಷತೆ ಮೆರೆದಿದೆ. “ಫೈಟರ್‌’ ಅಂದರೆ ಹೋರಾಟಗಾರ. ಹಾಗಾಗಿ, ಚಿತ್ರದ ರಿಲೀಸ್‌ ಡೇಟ್‌ ಘೋಷಣೆಗೆ ಕನ್ನಡ ಪರ ಹೋರಾಟಗಾರರನ್ನು ಆಹ್ವಾನಿಸಿ, ಅವರಿಂದ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

ಕೆಲವು ದಿನಗಳ ಹಿಂದಷ್ಟೇ ಚಿತ್ರತಂಡ “ಐ ವಾನಾ ಫಾಲೋ ಯೂ… ರುಕ್ಕೋ ರುಕ್ಕೋ ರೋಮಿಯೋ, ನನ್ನ ಕಡೆ ನೋಡಯ್ಯೋ…’ ಎಂಬ ಹಾಡು ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿನೋದ್‌ ಪ್ರಭಾಕರ್‌ ಹಾಗೂ ಲೇಖಾಚಂದ್ರ ಈ ಹಾಡಿನಲ್ಲಿ ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಮಾಸ್‌ ಟೀಸರ್‌ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಹಾಡಿನ ಸರದಿ.

ಇನ್ನು, ಈಗಾಗಲೇ ಬಿಡುಗಡೆಯಾಗಿರುವ ಹಾಡಿಗೆ ಗುರುಕಿರಣ್‌ ಸಂಗೀತವಿದ್ದು, ಕವಿರಾಜ್‌ ಸಾಹಿತ್ಯವಿದೆ. ಚೈತ್ರಾ ಹಾಡಿರುವ ಈ ಹಾಡಿಗೆ ಮೋಹನ್‌ ನೃತ್ಯ ನಿರ್ದೇಶನ ಮಾಡಿದ್ದಾರೆ. ಪಾಂಡಿಚೇರಿಯಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಅದನ್ನು ಪಾವನಾ ಹಾಗೂ ಲೇಖಾಚಂದ್ರ ನಿರ್ವಹಿಸಿದ್ದಾರೆ. ನಟಿ ನಿರೋಷಾ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ.

ಅಂದಹಾಗೆ, ಇದೊಂದು ಫ್ಯಾಮಿಲಿ ಡ್ರಾಮಾವಾಗಿದ್ದು, ಅನ್ಯಾಯದ ವಿರುದ್ಧ ನಾಯಕ ನಿಂತಾಗ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ. ಆಕಾಶ್‌ ಎಂಟರ್‌ಪ್ರೈಸಸ್‌ ಬ್ಯಾನರ್‌ನಡಿ ಸೋಮಶೇಖರ್‌ ಕಟ್ಟಿಗೇನಹಳ್ಳಿ ಈ ಚಿತ್ರವನ್ನು ನಿರ್ಮಿಸಿದ್ದು, ನೂತನ್‌ ಉಮೇಶ್‌ ನಿರ್ದೇಶಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next