ಇತ್ತೀಚೆಗಷ್ಟೇ ನಟ ವಿನೋದ್ ಪ್ರಭಾಕರ್ ಅಭಿನಯದ “ಶ್ಯಾಡೊ’ ಚಿತ್ರ ಬಿಡುಗಡೆಯಾಗಿದ್ದು ನಿಮಗೆ ನೆನಪಿರಬಹುದು. ಚಿತ್ರದ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ ನಟ ವಿನೋದ್ ಪ್ರಭಾಕರ್, “ಶ್ಯಾಡೊ’ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದ್ದರು. ಚಿತ್ರವನ್ನು ನೋಡಿ ಬೆಂಬಲಿಸುವಂತೆ ಪ್ರೇಕ್ಷಕರಲ್ಲಿ ಮನವಿ ಕೂಡ ಮಾಡಿಕೊಂಡಿದ್ದರು. ಆದರೆ ಅದಾದ ಕೇವಲ ನಾಲ್ಕೈದು ದಿನಗಳಲ್ಲಿ “ಶ್ಯಾಡೊ’ ಬಿಡುಗಡೆಯಾಗಿರುವುದು ನಟ ವಿನೋದ್ ಪ್ರಭಾಕರ್ ಬೇಸರಕ್ಕೆ ಕಾರಣವಾಗಿದೆ!
ಹೌದು, ಆ್ಯಕ್ಷನ್ – ಥ್ರಿಲ್ಲರ್ ಕಥಾಹಂದರ ಹೊಂದಿರುವ “ಶ್ಯಾಡೊ’ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಥಿಯೇಟರ್‌ಗಳ ಕಲೆಕ್ಷನ್‌ನಲ್ಲಿ ಚಿತ್ರ ಹಿಂದೆ ಬಿದ್ದಿದೆಯಂತೆ. ಇದಕ್ಕೆಲ್ಲ ಕಾರಣ ಸರಿಯಾದ ಸಮಯಕ್ಕೆ ಪ್ರಮೋಶನ್ ಇಲ್ಲದೆ ಸಿನಿಮಾ ರಿಲೀಸ್ ಮಾಡಿರುವುದು ಎಂದಿರುವ ವಿನೋದ್ ಪ್ರಭಾಕರ್, “ರಾಂಗ್ ಟೈಂ ರಿಲೀಸ್’ ಮಾಡಿರುವನಿರ್ಮಾಪಕರ ಮೇಲೆ ಬೇಸರ ಹೊರಹಾಕಿದ್ದಾರೆ.
“ಶ್ಯಾಡೊ’ ತೆರೆಕಂಡ ಮೂರೇ ದಿನಕ್ಕೆ ಮತ್ತೆ ಮಾಧ್ಯಮಗಳ ಮುಂದೆ ಬಂದಿರುವ ವಿನೋದ್ ಪ್ರಭಾಕರ್, “ನಾನೇ ಹೀರೋ ಆಗಿ ಅಭಿನಯಿ ಸಿದ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಅಂತ ನನಗೇ ಗೊತ್ತಿರಲಿಲ್ಲ. ನಿರ್ಮಾಪಕರು “ಶ್ಯಾಡೊ’ ರಿಲೀಸ್ ಬಗ್ಗೆ ನನಗೆ ಒಂದು ಮಾತೂ, ಹೇಳಿರಲಿಲ್ಲ. “ಶ್ಯಾಡೊ’ ರಿಲೀಸ್ ಮಾಡೋದಕ್ಕೆ ಇದು ಒಳ್ಳೆಯ ಟೈಮ್ ಅಲ್ಲ ಅಂದ್ರೂ ನಿರ್ಮಾಪಕರು ನನ್ನ ಮಾತು ಕೇಳಲಿಲ್ಲ. ಪೇಪರ್‌ನಲ್ಲಿ ಸಿನಿಮಾ ರಿಲೀಸ್ ಜಾಹೀರಾತು ಬಂದಾಗಲೇ ನನಗೆ “ಶ್ಯಾಡೊ’ ರಿಲೀಸ್ ಡೇಟ್ ಯಾವಾಗ ಅಂತ ಗೊತ್ತಾಯ್ತು. ಕೊನೆಗೆ ನಾನು ಕೂಡ ಏನೂ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅನಿವಾರ್ಯವಾಗಿ ಸಿನಿಮಾ ಪ್ರಮೋಶನ್‌ಗೆ ಬರ ಬೇಕಾಯ್ತು. ಒಂದು ಒಳ್ಳೆಯ ಸಿನಿಮಾ, ಸರಿಯಾದ ಪಬ್ಲಿ ಸಿಟಿ, ಪ್ರಮೋಶನ್ ಇಲ್ಲದೆ, ರಾಂಗ್ ಟೈಮ್‌ನಲ್ಲಿ ರಿಲೀಸ್ ಆಯ್ತು. ಸಿನಿಮಾ ರೈಟ್ಸ್ ಮೊದಲೇ ಸೇಲ್ ಆಗಿದ್ದರಿಂದ, ನಿರ್ಮಾಪಕರು ಸೇಫ್ ಆಗಿದ್ದರೂ, ಥಿಯೇಟರ್ ಕಲೆಕ್ಷನ್ಸ್ ಕಡಿಮೆಯಾಯ್ತು. ಇದರಿಂದ, ವೈಯಕ್ತಿಕವಾಗಿ ನನ್ನ ಸಿನಿಮಾ ಕೆರಿಯರ್‌ನಲ್ಲಿ ಹಿನ್ನಡೆ ಆದಂತಾಗಿದೆ…’ ಎಂದು ನಿರ್ಮಾಪಕರ ವಿರುದ್ಧ ಬೇಸರ ಹೊರಹಾಕಿದರು.
“ರಾಂಗ್ ಟೈಮ್‌ನಲ್ಲಿ ರಿಲೀಸ್ ಮಾಡಿ ಆ ಸಿನಿಮಾ ಸೋತರೆ ಅದರ ಹೊಣೆಯನ್ನು ನಾನೇ ಹೊರಬೇಕಾಗುತ್ತದೆ. ನಿರ್ಮಾಪಕರು ಸೇಫ್ ಆಗಿದ್ರೂ, ಥಿಯೇಟರ್ ಕಲೆಕ್ಷನ್ಸ್‌ನಲ್ಲಿ ಸಿನಿಮಾ ಸೋತಿದೆ ಅಂಥ ಆ ಸೋಲನ್ನ ನನ್ನ ಮೇಲೆ ಹಾಕಲಾಗುತ್ತದೆ. ಇಷ್ಟು ವರ್ಷಗಳ ಒಂದೊಂದು ಹೆಜ್ಜೆ ಇಟ್ಟು ಈ ಮಟ್ಟಕ್ಕೆ ಬಂದಿದ್ದೇನೆ. ಯಾರೋ ಒಬ್ಬರು ನಿರ್ಮಾಪಕರು ಈ ರೀತಿ ಮಾಡುವುದರಿಂದ, ಅದು ನನ್ನ ಸಿನಿಮಾ ಕೆರಿಯರ್‌ಗೆ ಬ್ಲಾಕ್ ಮಾರ್ಕ್ ಆಗುತ್ತದೆ’ ಎಂದರು ವಿನೋದ್ ಪ್ರಭಾಕರ್.
ಇದನ್ನೂ ಓದಿ : ಪ್ರೀತಿಗೆ ಮತ್ತಿಷ್ಟು ಸಿಹಿ “ಟೆಡ್ಡಿ ಡೇ”
“ನಿಜಕ್ಕೂ “ಶ್ಯಾಡೊ’ ಒಂದೊಳ್ಳೆ ಸಿನಿಮಾ. ನಿರ್ದೇಶಕ ರವಿ ಗೌಡ ತುಂಬ ಕಷ್ಟಪಟ್ಟು ಒಂದೊಳ್ಳೆ ಸಿನಿಮಾ ಮಾಡಿದ್ದಾರೆ. ಕೋವಿಡ್ ಕಾರಣದಿಂದ ಸುಮಾರು ಒಂದು ವರ್ಷ ಕಾದಿದ್ದೇವೆ. ನಿರ್ಮಾಪಕರು ಇನ್ನೂ ಕೆಲ ಸಮಯ ಕಾದಿದ್ದರೆ, ಖಂಡಿತವಾಗಿಯೂ ಸಿನಿಮಾಕ್ಕೆ ಒಳ್ಳೆಯ ರಿಸೆಲ್ಟ್ ಸಿಗುತ್ತಿತ್ತು. ಆದ್ರೆ ನಿರ್ಮಾಪಕರು ಅದೇಕೋ ದುಡುಕಿನ ನಿರ್ಧಾರದಿಂದ ಸಿನಿಮಾ ರಿಲೀಸ್ ಮಾಡಿದರು. ಇತ್ತೀಚೆಗಷ್ಟೇ ಜನ ಥಿಯೇಟರ್‌ಗೆ ಬರುತ್ತಿದ್ದಾರೆ. ಇನ್ನೂ ಕೆಲ ಸಮಯ ಕಾದಿದ್ದರೆ ಎಲ್ಲವೂ ಸಹಜ ಸ್ಥತಿಗೆ ಬರುತ್ತಿತ್ತು. ಆಗ ಸಿನಿಮಾ ರಿಲೀಸ್ ಮಾಡಿದ್ದರೆ, ಇನ್ನೂ ಚೆನ್ನಾಗಿ ಹೋಗುತ್ತಿತ್ತು. ಇದೆಲ್ಲದರ ನಡುವೆಯೂ ಸಿನಿಮಾ ನೋಡಿದವರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ’ ಎಂದರು ವಿನೋದ್.