Advertisement
ಮೂರು ಕಂಚಿನ ಪದಕ ಗೆದ್ದು ಇನ್ನೂ ಕೆಲವು ಪದಕಗಳನ್ನು ಸಣ್ಣ ಅಂತರದಲ್ಲಿ ಕಳೆದುಕೊಂಡು ದೊಡ್ಡ ನಿರೀಕ್ಷೆ ಇಟ್ಟುಕೊಂಡಿರುವ ಭಾರತಕ್ಕೆ ಫೈನಲ್ ತಲುಪಿ ಬಂಗಾರದ ಭರವಸೆ ಮೂಡಿಸಿದ್ದರು ವಿನೇಶ್ ಫೋಗಟ್. ಅವರು ದೈತ್ಯ ಪ್ರತಿಭೆಗಳಿಗೆ ಸೋಲುಣಿಸಿ ಫೈನಲ್ ಗೆ ಲಗ್ಗೆ ಇಟ್ಟಿರುವುದು ಸಣ್ಣ ಸಾಧನೆಯೇನಲ್ಲ.
Related Articles
Advertisement
ವಿನೇಶ್ ಅವರು ಕುಸ್ತಿಪಟು ರಾಜ್‌ಪಾಲ್ ಫೋಗಟ್ ಅವರ ಪುತ್ರಿ. ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಅವರ ಸೋದರಸಂಬಂಧಿ. ಕಾಮನ್‌ವೆಲ್ತ್ ಗೇಮ್ಸ್‌ನ 55 ಕೆಜಿ ವಿಭಾಗದಲ್ಲಿ ಆಕೆಯ ಸೋದರ ಸಂಬಂಧಿಗಳು ಚಿನ್ನ ಗೆದ್ದಿದ್ದರು.
ಆಮಿರ್ ಖಾನ್ ಅವರ ‘ದಂಗಲ್’ ಇನ್ನೊಂದು ಸರಣಿ?
2016 ರಲ್ಲಿ ಬಿಡುಗಡೆಯಾಗಿದ್ದ ನಿತೇಶ್ ತಿವಾರಿ ನಿರ್ದೇಶನದ ಕುಸ್ತಿ ಕಥಾ ಹಂದರದ, ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರ ಪ್ರೊಡಕ್ಷನ್ಸ್ ನಲ್ಲಿ ದಿ ವಾಲ್ಟ್ ಡಿಸ್ನಿ ಕಂಪನಿ ಇಂಡಿಯಾ ಅಡಿಯಲ್ಲಿ ಸಿದ್ಧಾರ್ಥ್ ರಾಯ್ ಕಪೂರ್ ಅವರೊಂದಿಗೆ ನಿರ್ಮಿಸಿದ್ದರು. ಚಿತ್ರದಲ್ಲಿ ಅಮೀರ್ ಖಾನ್ ಮಹಾವೀರ್ ಸಿಂಗ್ ಫೋಗಟ್ ಎಂಬ ಹವ್ಯಾಸಿ ಕುಸ್ತಿಪಟುವಾಗಿ ತೆರೆಯ ಮೇಲೆ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪುತ್ರಿಯರಾದ ಗೀತಾ ಫೋಗಟ್ ಮತ್ತು ಬಬಿತಾ ಕುಮಾರಿ ಅವರನ್ನು ಭಾರತದ ಮೊದಲ ವಿಶ್ವ ದರ್ಜೆಯ ಮಹಿಳಾ ಕುಸ್ತಿಪಟುಗಳಾಗಲು ತರಬೇತಿ ನೀಡುವುದು ಕಥಾ ಹಂದರವಾಗಿತ್ತು.
ಸದ್ಯ ‘ದಂಗಲ್’ ಚಿತ್ರದ ಇನ್ನೊಂದು ಸೀಕ್ವೆಲ್ ಬರಬೇಕು ಎಂದು ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಬಾಲಿವುಡ್ ನಿಂದ ಯಾರು ಚಿತ್ರ ನಿರ್ಮಾಣಕ್ಕೆ ಮುಂದಾಗಲಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.
ಭಾರತೀಯ ಕುಸ್ತಿ ಫೆಡರೇಷನ್ ನಲ್ಲಿ ಲೈಂಕಿಕ ಕಿರುಕುಳ ನೀಡಲಾಗುತ್ತಿದೆ ಎಂದು ಬಿಜೆಪಿ ಸಂಸದ, ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಬೀದಿಗಿಳಿದು ಹೋರಾಟ ಆರಂಭಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದಿದ್ದ ಕ್ರೀಡಾಳುಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು ಕೇಂದ್ರ ಸರಕಾರಕ್ಕೆ ಭಾರೀ ಮುಜುಗರ ಉಂಟು ಮಾಡಿತ್ತು. ಹಲವು ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದವು. ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ, ಸಂಗೀತಾ ಫೋಗಟ್, ಸತ್ಯವರ್ತ್ ಕಡಿಯನ್, ಸೋಮವೀರ್ ರಾಠಿ ಮೊದಲಾದವರು ಮುಂಚೂಣಿಯಲ್ಲಿದ್ದರು. ಬರೆದ ಪತ್ರವೂ ವೈರಲ್
ಹೋರಾಟಕ್ಕಿಳಿದ ವೇಳೆ ವಿನೇಶ್ ಫೋಗಟ್ ಅವರು ನ್ಯಾಯ ಕೇಳಿ ಕೇಂದ್ರ ಕ್ರೀಡಾ ಸಚಿವರಾಗಿದ್ದ ಅನುರಾಗ್ ಠಾಕೂರ್ ಅವರಿಗೆ ಬರೆದ ಪತ್ರವೂ ಸದ್ಯ ವೈರಲ್ ಆಗುತ್ತಿದೆ. ಹಲವಾರು ಮಂದಿ ಸಾಮಾಜಿಕ ತಾಣದಲ್ಲಿ ಸೆಮಿ ಫೈನಲ್ ನಲ್ಲಿ ವಿನೇಶ್ ಸಾಧಿಸಿದ್ದ ಗೆಲುವು ‘ಸತ್ಯಕ್ಕೆ ಸಂದ ಜಯ’ ಎಂದು ನೇರವಾಗಿ ಬ್ರಿಜ್ ಭೂಷಣ್ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ನಿರಂತರವಾಗಿ ಆಯ್ಕೆಯಾಗುತ್ತಿದ್ದ ಬ್ರಿಜ್ ಭೂಷಣ್ ಅವರಿಗೆ ಹೋರಾಟದ ಬಿಸಿ ಮುಟ್ಟಿದ ಪರಿಣಾಮವಾಗಿ ಕೈಸರ್ ಗಂಜ್ ಕ್ಷೇತ್ರದ ಟಿಕೆಟ್ ತಪ್ಪಿತ್ತು, ಆದರೆ ಪುತ್ರನಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.
ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಒಂದೇ ದಿನ ಮೂರು ಗೆಲುವು ಸಾಧಿಸಿ ಬೆರಗು ಮೂಡಿಸಿದ್ದರು. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್, ವಿಶ್ವದ ನಂ.1 ರೆಸ್ಲರ್ ಜಪಾನ್‌ನ ಯೂಯಿ ಸುಸಾಕಿ ವಿರುದ್ಧ ಗೆದ್ದು ಪದಕದ ಭರವಸೆ ಮೂಡಿಸಿದ್ದರು. ಆ ಬಳಿಕ ಕ್ವಾರ್ಟರ್ ಫೈನಲ್‌ನಲ್ಲಿ ಉಕ್ರೇನ್‌ನ ಒಕ್ಸಾನಾ ಲಿವೆಚ್ ವಿರುದ್ಧ ಗೆದ್ದು, ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮಾನ್ ಅವರನ್ನು 5-0 ಅಂತರದಿಂದ ಮಣಿಸಿ ಚಿನ್ನದ ಸ್ಪರ್ಧೆಗೆ ಸಜ್ಜಾಗಿದ್ದರು. ಒಲಿಂಪಿಕ್ಸ್ ಫೈನಲ್ ಪ್ರವೇಶಿಸಿದ ಭಾರತದ ಮೊದಲ ವನಿತಾ ಕುಸ್ತಿಪಟು ಎಂಬ ಹೆಗ್ಗಳಿಗೆಗೂ ಭಾಜನರಾಗಿದ್ದರು. ಆದರೆ ಅನರ್ಹತೆ ಎನ್ನುವುದು ಕನಸೆಲ್ಲವೂ ಭೂಕುಸಿತದಲ್ಲಿ ಕೊಚ್ಚಿ ಹೋದ ಪರ್ವತದಂತಾಯಿತು. ಒಂದಿಡೀ ದಿನ ಭಾರೀ ಸುದ್ದಿಯಾಗಿದ್ದ ವಿನೇಶ್ ಪರ ಭಾರೀ ಬೆಂಬಲ ಸಾಮಾಜಿಕ ತಾಣದಲ್ಲಿ ವ್ಯಕ್ತವಾಗಿತ್ತು. ಇದರೊಂದಿಗೆ ಆಕೆಯ ಹೋರಾಟದ ಹಾದಿಯ ಫೋಟೋಗಳೂ ವೈರಲ್ ಆಗಿದ್ದವು. ಆಕೆಯನ್ನು ಬೀದಿಯಲ್ಲೇ ಭದ್ರತಾ ಸಿಬಂದಿಗಳು ಎಳೆದೊಯ್ಯುತ್ತಿದ್ದ ದೃಶ್ಯ ಹೆಚ್ಚು ಸುದ್ದಿಯಾಗಿತ್ತು, ಮಾತ್ರವಲ್ಲದೆ ಈಕೆಯೇ ಒಲಂಪಿಕ್ಸ್ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾ ಎನ್ನುವ ಪ್ರಶ್ನೆಗಳನ್ನೂ ಎತ್ತಲಾಗಿತ್ತು.
ವಿನೇಶ್ ಹಿಂದೆ ವಿಶ್ವ ಚಾಂಪಿಯನ್ ಶಿಪ್ ನಲ್ಲಿ 53 ಕೆಜಿ ವಿಭಾಗದಲ್ಲಿ ಆಡಿ 2 ಕಂಚಿನ ಪದಕ ಗೆದ್ದಿದ್ದರು. 2018 ರಲ್ಲಿ ಜಕಾರ್ತಾ ಏಷ್ಯನ್ ಗೇಮ್ಸ್ ನಲ್ಲಿ 50 ಕೆ.ಜಿ ವಿಭಾಗದಲ್ಲಿ ಆಡಿ ಚಿನ್ನ ಗೆದ್ದಿದ್ದರು. 2014 ರಲ್ಲಿ ದಕ್ಷಿಣ ಕೊರಿಯಾದ ಇಂಚಿಯಾನ್ ನಲ್ಲಿ 48 ಕೆ.ಜಿ ವಿಭಾಗದಲ್ಲಿ ಕಂಚು ಗೆದ್ದಿದ್ದರು. ಕಾಮನ್ವೆಲ್ತ್ ಗೇಮ್ಸ್ ನಲ್ಲಿ 2014, 2018, 2022ರಲ್ಲಿ 48.50 ಮತ್ತು 53 ಕೆಜಿ ವಿಭಾಗದಲ್ಲಿ ಆಡಿ ಮೂರು ಚಿನ್ನದ ಪದಕ ಗೆದ್ದ ದಾಖಲೆ ಬರೆದಿದ್ದಾರೆ. ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ 53 ಕೆಜಿ ವಿಭಾಗದಲ್ಲಿ ಮೂರು ಕಂಚು, 51 ಕೆಜಿ ವಿಭಾಗದಲ್ಲಿ ಒಂದು ಕಂಚು, 55 ಕೆಜಿ ವಿಭಾಗದಲ್ಲಿ, 50 ಕೆಜಿ ಮತ್ತು 48 ಕೆಜಿ ವಿಭಾಗದಲ್ಲಿ ಆಡಿ ಮೂರು ಬೆಳ್ಳಿಯ ಪದಕ ಗೆದ್ದಿದ್ದರು. 2021 ರಲ್ಲಿ 53 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದಿದ್ದರು. ಮೊದಲ ಒಲಂಪಿಕ್ಸ್ ಪದಕ ನಿರೀಕ್ಷೆಯಲ್ಲಿದ್ದ ವೇಳೆ ಅನರ್ಹತೆ ಎನ್ನುವ ಮಾನದಂಡ ಅಡ್ಡಿಯಾಗಿದೆ. ಛಲಗಾತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿದ್ದಾರೆ ಎನ್ನುವ ಆಶಯ, ಶುಭಾಶಯಗಳನ್ನು ಸದ್ಯಕ್ಕೆ ಎಲ್ಲ ಭಾರತೀಯರೂ ಸಲ್ಲಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಒಲಂಪಿಕ್ಸ್ ಸಮಿತಿ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವ ನಿರೀಕ್ಷೆಯಲ್ಲೂ ಇದ್ದಾರೆ.