ಪ್ಯಾರಿಸ್: ಭಾರತದ ಭರವೆಸೆಯ ಕುಸ್ತಿ ಆಟಗಾರ್ತಿ ವಿನೀಶ್ ಫೋಗಟ್ (Vinesh phogat) ಅವರು ಪ್ಯಾರಿಸ್ ಒಲಿಂಪಿಕ್ಸ್ (Paris Olympics) ನ 50 ಕೆಜಿ ವಿಭಾಗದಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಮಂಗಳವಾರ (ಆ.06) ನಡೆದ ಪ್ರೀ ಕ್ವಾರ್ಟರ್ ಫೈನಲ್ ಮತ್ತು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅತ್ಯದ್ಭುತವಾಗಿ ಗೆದ್ದ ವಿನೀಶ್ ಪದಕದ ಭರವಸೆ ಮೂಡಿಸಿದ್ದಾರೆ.
ಕ್ವಾರ್ಟರ್ ಫೈನಲ್‌ನಲ್ಲಿ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ವಿಭಾಗದ ಉಕ್ರೇನ್ ನ ಒಕ್ಸಾನಾ ಲಿವಾಚ್ ಅವರನ್ನು 7-5 ಅಂತರದಿಂದ ಸೋಲಿಸಿದ ವಿನೀಶ್ ಸೆಮಿಗೆ ಎಂಟ್ರಿ ಪಡೆದರು.
ಅದಕ್ಕೂ ಮೊದಲು ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಹಾಲಿ ಚಿನ್ನದ ಪದಕ ವಿಜೇತೆ ಯುಯಿ ಸುಸಾಕಿ ಅವರನ್ನು ಸೋಲಿಸಿ ವಿನೀಶ್ ಫೋಗಟ್ ಕುಸ್ತಿ ಜಗತ್ತಿಗೆ ಅಚ್ಚರಿ ಮೂಡಿಸಿದರು.
ಮಂಗಳವಾರ ಮುಂಜಾನೆ ನಡೆದ ಪಂದ್ಯದಲ್ಲಿ ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಮತ್ತು ಹಾಲಿ ಚಿನ್ನದ ಪದಕ ವಿಜೇತ ಜಪಾನ್‌ನ ಯುಯಿ ಸುಸಾಕಿ ಅವರಿಗೆ ಆಘಾತ ನೀಡಿ ಒಲಿಂಪಿಕ್ ಕ್ರೀಡಾಕೂಟದಲ್ಲಿ 50 ಕೆಜಿ ವಿಭಾಗದ ಈವೆಂಟ್‌ನ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದರು.
ಇದು ಸುಸಾಕಿ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸೋಲಾಗಿದ್ದು, ಇದು ವಿನೇಶ್ ಅವರ ಸಾಧನೆಯನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ. ಈ ಪಂದ್ಯಕ್ಕೂ ಮೊದಲು ಸುಸಾಕಿ ಅವರು 82 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಎಲ್ಲದರಲ್ಲೂ ಗೆಲುವು ಸಾಧಿಸಿದ್ದರು.
ವಿನೇಶ್ ಫೋಗಟ್ ಸೆಮಿ ಫೈನಲ್ ನಲ್ಲಿ ಕ್ಯೂಬಾದ ಯುಸ್ನಿಲಿಸ್ ಗುಜ್ಮಾನ್ ಅವರನ್ನು ಎದುರಿಸಲಿದ್ದಾರೆ. ಮಂಗಳವಾರ ರಾತ್ರಿ 10.30ಕ್ಕೆ ಈ ಪಂದ್ಯ ನಡೆಯಲಿದೆ.