ಧಾರವಾಡ: ಡಾ|ಶಂ.ಬಾ.ಜೋಶಿ, ಎಂ.ಗೋವಿಂದ ಪೈ, ಸೇಡಿಯಾಪು ಕೃಷ್ಣಭಟ್ಟರಂತಹ ಹಿಂದಿನ ಅನೇಕ ದಿಗ್ಗಜರ ಸಂಶೋಧನಾ ವಿಧಾನಕ್ಕೂ ಇಂದಿನ ಸಂಶೋಧನಾ ವಿಧಾನಕ್ಕೂ ತೀರ ಭಿನ್ನತೆಯಿದ್ದು, ಅಂದಿನ ಪಂಡಿತರ ವಿನಯವಂತಿಕೆಯನ್ನೂ ನಾವಿಂದು ಕಳೆದುಕೊಂಡಿದ್ದೇವೆ ಎಂದು ಮಂಗಳೂರಿನ ಲೇಖಕ ಪ್ರೊ| ಎ.ವಿ.ನಾವಡ ವಿಷಾದ ವ್ಯಕ್ತಪಡಿಸಿದರು.
ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಆಶ್ರಯದಲ್ಲಿ ಶಂ.ಬಾ.ಜೋಶಿ ಅವರ ಜನ್ಮದಿನ ಅಂಗವಾಗಿ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಹಮ್ಮಿಕೊಂಡಿದ್ದ “ಸಂಸ್ಕೃತಿ ಸಂಶೋಧನ ದಿನ’ ಕಾರ್ಯಕ್ರಮದಲ್ಲಿ ಡಾ|ಶಂ.ಬಾ. ಜೋಶಿ ತೆರೆದಿಟ್ಟ ನುಡಿಸಂಪತ್ತು ವಿಷಯ ಕುರಿತು ಅವರು ಮಾತನಾಡಿದರು.
ಸಂಶೋಧಕರಲ್ಲಿದ್ದ ಸೈದ್ಧಾಂತಿಕ ಆಲೋಚನೆಗಳು ಈಗ ಮರೆಯಾಗುತ್ತಿದ್ದು, ಅಷ್ಟರ ಮಟ್ಟಿಗೆ ಇಂದು ಕನ್ನಡವು ಬಡವಾಗತೊಡಗಿದೆ ಎಂದರು. ಶಂ.ಬಾ.ಜೋಶಿಯವರದ್ದು ದೇಶೀಯ ಮಾದರಿಯ ಆಲೋಚನೆ ಗಳಾಗಿದ್ದು, ಭಾಷಾ ಬೆಳವಣಿಗೆಯಲ್ಲಿ ಅವರಿಗೆ ಪಾಂಡಿತ್ಯ ಪರಿಶ್ರಮವಿತ್ತು.
ಕನ್ನಡವು ಸಶಕ್ತವಾದ ಸಂವಹನ ಮತ್ತು ಜ್ಞಾನದ ಭಾಷೆಯಾಗಬೇಕು ಎನ್ನುವುದು ಅವರ ನಿರಂತರ ತುಡಿತವಾಗಿತ್ತು. ಶಂಬಾ ರೂಪಿಸಿದ ಶಬ್ದಗಳ ಬೆಸುಗೆಗಳು, ವಿಸ್ತರಣೆಗಳು, ಒಂದು ಶಬ್ದ ಹಿಡಿದುಕೊಂಡು ಅದರಾಳಕ್ಕಿಳಿದು ಹುಡುಕಾಡಿದ ಅರಿವಿನ ಘಟ್ಟಗಳು, ಅವರು ತೆರೆದಿಟ್ಟ ಶಬ್ದ ಸೃಷ್ಟಿಯ ಅನೇಕ ಸೂತ್ರಗಳಿಂದ ಕೂಡಿದ ಅಧ್ಯಯನವನ್ನು ಮುನ್ನಡೆಸುವ, ಈ ಕಾಲಕ್ಕೆ ತಕ್ಕಂತೆ ಅನುಸಂಧಾನಗೊಳಿಸುವ ಕಾರ್ಯ ಜರುಗಬೇಕಿದೆ ಎಂದರು.
ಇತ್ತೀಚೆಗೆ ನಿಧನರಾದ ಸಹಕಾರ ಸಚಿವ ದಿ.ಎಚ್. ಎಸ್.ಮಹದೇವ ಪ್ರಸಾದ್ ಅವರಿಗೆ ಸಂತಾಪ ಸೂಚಿಸಲಾಯಿತು. ಡಾ|ಸಂಗಮೇಶ ಸವದತ್ತಿಮಠ, ಪೊ|ದುಷ್ಯಂತ ನಾಡಗೌಡ, ಡಾ|ಕೆ.ಜಿ.ಭಟ್ ಸೂರಿ, ಎಸ್.ಎಚ್. ಕೆರೂರ, ಡಾ|ಶಾಲಿನಿ ರಘುನಾಥ, ಡಾ|ಹ.ವೆಂ. ಕಾಖಂಡಿಕಿ, ಕವಿ ಜನಾರ್ದನ ನಾಯಕ, ವಿ.ಜಿ.ತಿಗರಿ, ಎಸ್.ಎಸ್.ಬಂಗಾರಿಮಠ ಇದ್ದರು. ಗಾಯಕ ಶ್ರೀಧರ ಕುಲಕರ್ಣಿ ಪ್ರಾರ್ಥಿಸಿದರು. ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ|ಶ್ಯಾಮಸುಂದರ ಬಿದರಕುಂದಿ ಸ್ವಾಗತಿಸಿದರು. ಟ್ರಸ್ಟ್ ಸದಸ್ಯ ನರಸಿಂಹ ಪರಾಂಜಪೆ ನಿರೂಪಿಸಿ, ವಂದಿಸಿದರು.