Advertisement

ವಿನಾಯಕ ಚಿತ್ರಕಥಾ

01:43 PM Sep 07, 2019 | Team Udayavani |

ಪೌರಾಣಿಕ ಜಗತ್ತಿನ ಅದ್ಭುತಗಳನ್ನು ಒಂದು ಸಾಲಿನಲ್ಲಿ ನಿಲ್ಲಿಸುತ್ತಾ ಹೋದರೆ, ಅಲ್ಲಿನ ಪ್ರಥಮಪಂಕ್ತಿಯಲ್ಲಿ ಗಜಮುಖನೇ ಕಾಣಿಸುತ್ತಾನೆ. ಅದರಲ್ಲೂ ಮಕ್ಕಳಿಗೆ ಗಣಪತಿಯ ರೂಪವೇ ಒಂದು ಕುತೂಹಲದ ಆಕರ್ಷಣೆ. ಮನುಷ್ಯನಂತೆ ಇದ್ದ ದೇವರಿಗೆ, ಆನೆಯ ಮುಖ ಹೇಗೆ ಬಂತು ಎನ್ನುವ ಪ್ರಶ್ನೆ ಎಲ್ಲರ ಬಾಲ್ಯದಲ್ಲೂ ಕಾಡಿದ ಸಹಜ ಸುಂದರ ಪ್ರಶ್ನೆ. ಗಣೇಶನ ಈ ಜನ್ಮವೃತ್ತಾಂತವನ್ನು ತೆರೆದಿಡುವ ಪಾರ್ಕ್‌ ಒಂದು ಜನರನ್ನು ಸೆಳೆಯುತ್ತದೆ. ಹೊನ್ನಾವರದಿಂದ ಇಡಗುಂಜಿಗೆ ಬರುವ ದಾರಿಯಲ್ಲಿ ವಿನಾಯಕ ಪ್ರತಿದಿನ ಬರುವ ಪ್ರವಾಸಿಗರನ್ನು ಸ್ವಾಗತಿಸಿ, ತನ್ನ ಜನ್ಮ ವೃತ್ತಾಂತವನ್ನು ಹೇಳುತ್ತಿದ್ದಾನೆ. ಈ “ವಿನಾಯಕ ವನ’ದಲ್ಲಿರುವ ಪ್ರತಿ ಕಲಾಕೃತಿಗಳೂ, ಜೀವದೃಶ್ಯಗಳಾಗಿ ಕತೆ ಹೇಳುತ್ತವೆ.

Advertisement

ಪಾರ್ವತಿ ಸ್ನಾನಕ್ಕೆ ಹೋಗುವಾಗ ಬಾಗಿಲು ಕಾಯುವ ಗಣಪ; ಅದೇ ಸಮಯಕ್ಕೆ ಆಗಮಿಸಿದ ಶಿವನನ್ನು ತಡೆದ ಬಾಲ ಗಣಪ; ಕೋಪಗೊಂಡ ಶಿವನು ಗಣಪನ ಶಿರವನ್ನು ಕತ್ತರಿಸಿದಾಗ, ಪಾರ್ವತಿಯ ಗೋಳಾಟ; ಆಗ ವ್ಯಕ್ತವಾಗುವ ಪಾರ್ವತಿಯ ಮಾತೃಪ್ರೇಮ… ಇವೆಲ್ಲವನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇಲ್ಲಿನ ಕಲಾಕೃತಿಗಳಲ್ಲಿ ನಿರೂಪಿಸಲಾಗಿದೆ. ಶಿವನ ಸೂಚನೆಯಂತೆ ಉತ್ತರ ದಿಕ್ಕಿಗೆ ಮಲಗಿದ ವ್ಯಕ್ತಿಯ ತಲೆಯನ್ನು ತರಲು ಹೊರಟವನಿಗೆ ಕಂಡಿದ್ದು ಆನೆ. ಅದರ ತಲೆಯನ್ನು, ಗಣಪನಿಗೆ ಜೋಡಿಸಿ, ಜೀವ ತುಂಬಿದ ರೋಮಾಂಚಕ ಕ್ಷಣ, ಹಾವನ್ನು ಬಿಗಿದು ಕಟ್ಟಿದ ಡೊಳ್ಳು ಹೊಟ್ಟೆಯ ಲಂಬೋದರನ ಬದುಕಿನ ನಾನಾ ಸನ್ನಿವೇಶಗಳು ಇಲ್ಲಿ ಹೃನ್ಮನ ಸೆಳೆಯುವಂತೆ ಕೆತ್ತಲಾಗಿದೆ.

ಇದೆಲ್ಲದರ ಜತೆಗೆ ಪೋಷಕರಿಗೊಂದು ಪಾಠವೂ ಇಲ್ಲಿ ದರ್ಶನವಾಗುತ್ತದೆ. ಯಾವುದೇ ಮಗು “ವಿಶೇಷ’ ರೂಪದಲ್ಲಿ ಜನಿಸಿದರೆ ಅದನ್ನು ಕಡೆಗಣಿಸಬೇಡಿ, ಪ್ರೀತಿಯಿಂದ ನೋಡಿಕೊಳ್ಳಿ. ಅದಕ್ಕೆ ಆತ್ಮವಿಶ್ವಾಸ ತುಂಬಿ. ಅದಕ್ಕೂ ವಿಶೇಷ ಶಕ್ತಿಯಿದೆ. ಅದನ್ನು ಗುರುತಿಸುವ ಕೆಲಸ ಮಾಡಿ… ಎನ್ನುವ ಸಂದೇಶದ ಮೂಲಕ ಈ ಗಣಪನ ದೃಶ್ಯಗಳು ನಮ್ಮ ಮನದಾಳದಲ್ಲಿ ನೆಲೆ ನಿಲ್ಲುತ್ತವೆ.

 

Advertisement

ಚಿತ್ರ-ಲೇಖನ: ಟಿ. ಶಿವಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next