ಪಡುಪಣಂಬೂರು: ಇಲ್ಲಿನ ಪಡುಪಣಂಬೂರು ಗ್ರಾಮ ಪಂಚಾಯತ್‌ನ ಬೆಳ್ಳಾಯರು ಗ್ರಾಮದ ಕೆರೆಕಾಡು ಜಳಕದ ಕೆರೆಯ ನಿವಾಸಿ ಪ್ರಮಿಳಾ ಅವರು ಪತಿಯನ್ನು ಕಳೆದುಕೊಂಡು ಬುದ್ಧಿಮಾಂದ್ಯ ಮಗ ಚರಣ್‌ನೊಂದಿಗೆ ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದಾರೆ.
ಈಕೆ ವಾಸಿಸುತ್ತಿದ್ದ ಮನೆಯ ಮೆಲ್ಛಾವಣಿ ಕುಸಿಯುವ ಹಂತ ದಲ್ಲಿದ್ದು ಅಪಾಯವನ್ನು ಗಮನಿಸಿದ ಪಕ್ಷಿಕೆರೆಯ ಶ್ರೀ ವಿನಾಯಕ ಮಿತ್ರಮಂಡಳಿಯ ಸದಸ್ಯರು ತಮ್ಮ ತಿಂಗಳ ಸ್ವತ್ಛ ಭಾರತ್ ಅಭಿಯಾನದಲ್ಲಿ ದುರಸ್ತಿ ಮಾಡಿ ಪ್ರಮೀಳಾ ಅವರಿಗೆ ಆಸರೆಯಾಗಿದ್ದಾರೆ.
ಮಂಗಳೂರಿನ ಯುವ ಕಾರ್ಯ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಇದರ ಮಾರ್ಗದರ್ಶನದಲ್ಲಿ ಅಲ್ಲಲ್ಲಿ ಸ್ವತ್ಛತಾ ಕಾರ್ಯವನ್ನು ನಡೆಸುತ್ತಿರುವ ವಿನಾಯಕ ಮಿತ್ರ ಮಂಡಳಿಯು ಪ್ರಮೀಳಾ ಅವರ ಮನೆಯ ಅಂಗಣವನ್ನೇ ತಿಂಗಳ ಸ್ವತ್ಛತಾ ಅಭಿಯಾನಕ್ಕೆ ಬಳಸಿಕೊಂಡು ಬೀಳುವ ಸ್ಥಿತಿಯಲ್ಲಿದ್ದ ಮೇಲ್ಛಾವಣಿಯನ್ನು ದಿನಪೂರ್ತಿ ನಡೆಸಿದ ಶ್ರಮದಾನದ ಮೂಲಕ ಹೆಂಚುಗಳನ್ನು ತೆಗೆದು, ಪಕ್ಕಾಸು ಮತ್ತು ರೀಪುಗಳನ್ನು ಕಳಚಿ ದೀರ್ಘಕಾಲಿಕಾವಾಗಿ ಬಾಳಿಕೆ ಬರುವ ಶೀಟ್‌ಗಳನ್ನು ಅಳವಡಿಸಿ, ಸುತ್ತ ಸಿಮೆಂಟ್ ಬ್ಲಾಕ್‌ನಿಂದ ಮನೆಗೆ ಭದ್ರತೆಯನ್ನು ನೀಡಿದೆ.
ದಾನಿಗಳ ಸಹಕಾರವನ್ನು ಹಾಗೂ ಮಂಡಳಿಯ ಸದಸ್ಯರ ನೆರವಿನಿಂದ ಸುಮಾರು 35 ಸಾವಿರ ರೂ. ವೆಚ್ಚದ ಸಾಮಗ್ರಿಗಳನ್ನು ಬಳಸಲಾಗಿದೆ. ಸದಸ್ಯರ ಶ್ರಮದಾನಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್‌ದಾಸ್, ಸದಸ್ಯರಾದ ಹೇಮನಾಥ ಅಮೀನ್, ಸುದರ್ಶನ್ ಬಂಗೇರ, ಧನಂಜಯ ಪಿ. ಶೆಟ್ಟಿಗಾರ್, ರಾಜೇಶ್ ದಾಸ್, ಉಮೇಶ್ ಶೆಟ್ಟಿಗಾರ್, ಮಾರ್ಗದರ್ಶಕರಾದ ವಿನೋದ್ ತೋಕೂರು, ಉಮೇಶ್ ಪಂಜ, ಕಿರಣ್ ಸಾಲ್ಯಾನ್, ಹರೀಶ್ ಹೊಸಕಾಡು, ಧನುಷ್, ಅಶೋಕ್ ಪಾಲ್ಗೊಂಡಿದ್ದರು.