Advertisement

SBI MD ಆಗಿ ವಿನಯ ತೋನ್ಸೆ: ಪ್ರೊಬೆಶನರಿ ಅಧಿಕಾರಿಯಿಂದ ಎಂಡಿ ಹುದ್ದೆಗೆ

11:50 PM Nov 22, 2023 | Team Udayavani |

ಉಡುಪಿ: ದೇಶದ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್‌ ಆದ ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಪ್ರೊಬೆಶನರಿ ಅಧಿಕಾರಿಯಾಗಿ 1988ರಲ್ಲಿ ಸೇರಿದ ಉಡುಪಿ ತಾಲೂಕು ತೋನ್ಸೆ ಮೂಲದವರಾದ ವಿನಯ ಎಂ. ತೋನ್ಸೆ ಅವರು ಈಗ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ.

Advertisement

ಫೈನಾನ್ಶಿಯಲ್‌ ಸರ್ವಿಸಸ್‌ ಇನ್‌ಸ್ಟಿಟ್ಯೂಶನ್ಸ್‌ ಬ್ಯೂರೋ (ಎಫ್ಎಸ್‌ಐಬಿ) ವಿನಯ ಅವರ ಹೆಸರನ್ನು ಶಿಫಾರಸು ಮಾಡಿದ ಬಳಿಕ ಕೇಂದ್ರ ಸರಕಾರ 5 ಲಕ್ಷ ಕೋಟಿ ರೂ. ವ್ಯವಹಾರದ ಎಸ್‌ಬಿಐ ಆಡಳಿತ ನಿರ್ದೇಶಕರಾಗಿ ನೇಮಿಸಿ ಆದೇಶ ಹೊರಡಿಸಿದೆ. ಅವರು 2025ರ ನವೆಂಬರ್‌ 30ರ ವರೆಗೆ ಹೊಸ ಅಧಿಕಾರದಲ್ಲಿರುತ್ತಾರೆ. ಇದುವರೆಗೆ ಆಡಳಿತ ನಿರ್ದೇಶಕರಾಗಿದ್ದ ಸ್ವಾಮಿನಾಥನ್‌ ಜಾನಕಿರಾಮನ್‌ ಅವರು ರಿಸರ್ವ್‌ ಬ್ಯಾಂಕ್‌ ಉಪ ಗವರ್ನರ್‌ ಆಗಿ ನಿಯುಕ್ತಿಗೊಂಡ ಬಳಿಕ ತೆರವಾದ ಸ್ಥಾನದಲ್ಲಿ ವಿನಯ ತೋನ್ಸೆ ಅಲಂಕರಿಸಿದ್ದಾರೆ.

ವಿವಿಧ ಹೊಣೆಗಾರಿಕೆ
ಇವರು ಮೂರು ದಶಕಕ್ಕೂ ಹೆಚ್ಚು ಕಾಲ ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ದ್ದರು. ಇದುವರೆಗೆ ಅವರು ಉಪ ಆಡಳಿತ ನಿರ್ದೇಶಕ ರಾಗಿ ಕಾರ್ಪೊರೆಟ್‌ ಆಕೌಂಟ್ಸ್‌ ಗ್ರೂಪ್‌ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಇದಕ್ಕೂ ಹಿಂದೆ ಎಸ್‌ಬಿಐ ಫ‌ಂಡ್ಸ್‌ ಮ್ಯಾನೇಜ್ಮೆಂಟ್ ಲಿ.ನ ಆಡಳಿತ ನಿರ್ದೇಶಕ ಮತ್ತು ಸಿಇಒ, ಚೆನ್ನೈ ವೃತ್ತದ ಮುಖ್ಯ ಮಹಾಪ್ರಬಂಧಕ ಹೀಗೆ ವಿವಿಧ ಜವಾಬ್ದಾರಿಗಳನ್ನು ನಿರ್ವ ಹಿಸಿದ್ದರು. ಕಾರ್ಪೊರೆಟ್‌ ಕ್ರೆಡಿಟ್‌, ಇಂಟರ್‌ ನ್ಯಾಶನಲ್‌ ಬ್ಯಾಂಕಿಂಗ್‌ ಆಪರೇಶನ್ಸ್‌, ಟ್ರೆಶರಿ ಅಪರೇಶನ್ಸ್‌, ಈಕ್ವಿಟಿ ಪೋರ್ಟ್‌ಫೋಲಿಯೋ ಮ್ಯಾನೇಜ್ಮೆಂಟ್ , ಪ್ರೈವೇಟ್‌ ಈಕ್ವಿಟಿ, ವೆಂಚರ್‌ ಕ್ಯಾಪಿಟಲ್‌, ರೀಟೇಲ್‌ ಬ್ಯಾಂಕಿಂಗ್‌ ಮತ್ತು ತರಬೇತಿಯಂತಹ ಬ್ಯಾಂಕಿಂಗ್‌ ಕ್ಷೇತ್ರದ ವಿವಿಧ ಮಜಲುಗಳಲ್ಲಿ ಅಪಾರ ಅನುಭವ ಹೊಂದಿದವರಾಗಿದ್ದಾರೆ.

ಉಡುಪಿಯ ತೋನ್ಸೆ ಮೂಲ
ವಿನಯ ತೋನ್ಸೆ ಅವರ ತಂದೆ ಕಿನ್ನಿಮೂಲ್ಕಿ ಯಲ್ಲಿದ್ದ ಮುರಳೀಧರ ರಾವ್‌ ಅವರು ಸಣ್ಣ ಉಳಿತಾಯ ಮತ್ತು ಲಾಟರಿ ಇಲಾಖೆಯ ನಿರ್ದೇಶಕರಾಗಿದ್ದರು. ಮುರಳೀಧರ ರಾವ್‌ ಅವರು ಮಣಿಪಾಲದಲ್ಲಿ ಕಾರ್ಯನಿರ್ವಹಿಸಿದ್ದು ಪೈ ಬಂಧುಗಳ ನಿಕಟ ಸಂಪರ್ಕವಿದ್ದವರು. ವಿನಯರ ತಾತ ತೋನ್ಸೆ ನಾರಾಯಣ ರಾವ್‌ ಉಡುಪಿ ಬೋರ್ಡ್‌ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿದ್ದರು.

ಬಹುಮುಖಿ ವ್ಯಕ್ತಿತ್ವ
ವಿನಯ ಅವರು ಬೆಂಗಳೂರಿನಲ್ಲಿ ಶಿಕ್ಷಣವನ್ನು ಪಡೆದಿದ್ದರು. ಕಾಲೇಜು ಶಿಕ್ಷಣ ಪಡೆಯುವಾಗ ಉತ್ತಮ ಕ್ರೀಡಾಪಟುವಾಗಿ ರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. ಕ್ರಿಕೆಟ್‌, ಚದುರಂಗ, ಬ್ಯಾಡ್ಮಿಂಟನ್‌ ಆಟಗಳಲ್ಲಿ ಆಸಕ್ತಿ ಹೊಂದಿದ್ದರು. ಸಾಹಿತ್ಯ, ಸಿನೆಮಾ, ನಾಟಕ ರಂಗಗಳಲ್ಲಿಯೂ ಆಸ್ಥೆ ಹೊಂದಿದವರು.

Advertisement
Advertisement

Udayavani is now on Telegram. Click here to join our channel and stay updated with the latest news.

Next