Advertisement

ವಿನಯ್‌ ಕುಲಕರ್ಣಿ ಕುದುರೆ ಸವಾರಿ

02:46 PM Apr 25, 2019 | pallavi |

ಧಾರವಾಡ: ಅಂಬಾ ಎಂದು ಕೂಗುವ ಹಸುಗಳನ್ನುಸಂತೈಸುವುದು..ಎರಡು ದಿನಗಳ ಹಿಂದಷ್ಟೇ ಜನ್ಮತಾಳಿದ ಕುದುರೆ ಮರಿಯೊಂದಿಗೆ ಆಟವಾಡುತ್ತ ಕಾಲಹರಣ..ಕುರಿಗಳ ಆರೋಗ್ಯ ತಪಾಸಣೆ.. ಹಾಲಿನ ಲೆಕ್ಕ ಪರಿಶೀಲನೆ..ಮಧ್ಯಾಹ್ನ ಮತ್ತೆ ಜನರೊಂದಿಗೆ ಬೆರೆತು ಮದುವೆ, ತಿಥಿ ಕಾರ್ಯಗಳಲ್ಲಿ ಭಾಗಿ..ಒಟ್ಟಿನಲ್ಲಿ ರಿಲ್ಯಾಕ್ಸ್‌ ಮೂಡ್‌…

Advertisement

ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿನಯ್‌ ಕುಲಕರ್ಣಿ ಅವರು ಚುನಾವಣೆ ಮರುದಿನ ಬುಧವಾರ ಇಡೀ ದಿನ ತಮ್ಮ ಮನೆ-ಡೈರಿ ಮತ್ತು ಜನರೊಂದಿಗೆ ಬೆರೆತು ಪೂರ್ಣ ರಿಲ್ಯಾಕ್ಸ್‌ ಮೂಡ್‌ನ‌ಲ್ಲಿ ಕಾಲ ಕಳೆದರು.

ಬೆಳಗ್ಗೆ ಬೇಗ ಎದ್ದು ಡೈರಿಯತ್ತ ಪ್ರಯಾಣ ಬೆಳೆಸಿದ ವಿನಯ್‌, ಇಡೀ ಡೈರಿ ತುಂಬಾ ಸುತ್ತಾಡಿ ಅಲ್ಲಿ ಕೆಲಸ ಮಾಡುವ ಆಳುಗಳಿಂದ ಪ್ರತಿ ಆಕಳ ಆರೋಗ್ಯ, ಅವುಗಳ ಆರೈಕೆ ಸೇರಿದಂತೆ ಅಲ್ಲಿನ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಅಷ್ಟೇಯಲ್ಲ ಅನಾರೋಗ್ಯಕ್ಕೊಳಗಾಗಿದ್ದ ಕೆಲವು ಆಕಳುಗಳನ್ನು ಖುದ್ದು ಪರಿಶೀಲನೆ ನಡೆಸಿ ತಪಾಸಣೆಗೆ ಸೂಚಿಸಿ ಅವುಗಳಿಗೆ ಲಸಿಕೆ ಕೊಡಿಸುವ ವ್ಯವಸ್ಥೆ ಮಾಡಿದರು.

ಕಳೆದ ಎರಡು ದಿನಗಳ ಹಿಂದಷ್ಟೇ ಜನ್ಮತಾಳಿದ ಅವರ ನೆಚ್ಚಿನ ಕುದುರೆಯ ಮರಿಯನ್ನು ಆರೈಕೆ ಮಾಡಿ ಅದರೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆದರು. ಇನ್ನು ಪಕ್ಕದಲ್ಲೇ ಇರುವ ಆಡು-ಕುರಿಗಳ ದೊಡ್ಡಿಗೂ ಹೋಗಿ ಅವುಗಳ ವ್ಯವಸ್ಥೆ ಪರಿಶೀಲಿಸಿ, ಅಲ್ಲಿನ ಕೆಲಸಗಾರರಿಗೆ ಸೂಕ್ತ ಕ್ರಮಗಳ ಕುರಿತು ಮಾಹಿತಿ-ಸಲಹೆ ನೀಡಿದರು.

ನಂತರ ಡೈರಿಗೆ ಬರುತ್ತಿದ್ದ ಅವರ ಅಭಿಮಾನಿಗಳೊಂದಿಗೆ ನಿನ್ನೆ ನಡೆದ ಚುನಾವಣೆ ಕುರಿತು ಸಾಕಷ್ಟು ವಿಚಾರಗಳನ್ನು ಚರ್ಚಿಸಿದರು. ಧಾರವಾಡ ಗ್ರಾಮೀಣ, ಕಲಘಟಗಿ, ಕುಂದಗೋಳ, ಶಿಗ್ಗಾವಿ, ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿನ ಕ್ಷೇತ್ರಗಳಿಂದ ಆಗಮಿಸಿದ್ದ ಕಾರ್ಯಕರ್ತರೊಂದಿಗೂ ರಾಜಕೀಯ ವಿಚಾರಗಳನ್ನು ಚರ್ಚಿಸಿದರು. ಮಧ್ಯಾಹ್ನ ಡೈರಿಯಲ್ಲಿಯೇ ಕಾರ್ಯಕರ್ತರೊಂದಿಗೆ ಊಟ ಮಾಡಿದರು. ನಂತರ ಮನೆಗೆ ತೆರಳಿ ಕುಟುಂಬದವರೊಂದಿಗೆ ಒಂದಿಷ್ಟು ಹೊತ್ತು ಕಾಲ ಕಳೆದರು.

Advertisement

ಮದುವೆಗೂ ಭೇಟಿ: ಮಧ್ಯಾಹ್ನ ನಂತರ ಕಮಲಾಪೂರದಲ್ಲಿರುವ ಸಿದ್ದು ಸಪೂರಿ ಎಂಬುವರ ಮನೆಯಲ್ಲಿ ನಡೆಯುತ್ತಿದ್ದ ಮಂಗಳ ಕಾರ್ಯವೊಂದರಲ್ಲಿ ಪಾಲ್ಗೊಂಡು ಶುಭ ಕೋರಿದ ವಿನಯ್‌, ನಂತರ ಲಕಮಾಪೂರ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಧು ವರರನ್ನು ಹಾರೈಸಿದರು. ನಂತರ ಬಸವರಾಜ ಮಟ್ಟಿ ಎನ್ನುವರ ಮನೆಯಲ್ಲಿನ ದುಃಖ ತಪ್ತ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಈ ಚುನಾವಣೆಯಲ್ಲಿ ಎಲ್ಲಾ ಸಮುದಾಯ ಜನರು ನನ್ನ ಕೈ ಹಿಡಿದಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ನಾನು ವ್ಯವಸ್ಥಿತವಾಗಿ ಚುನಾವಣೆ ಕಾರ್ಯ ನಿರ್ವಹಿಸಿದ್ದು, ಹೀಗಾಗಿ ಗೆಲುವು ಖಚಿತ. ನಮ್ಮ ಶ್ರಮ ಮತ್ತು ನನ್ನ ಸೇವೆಗೆ ಜನರು ಈ ಬಾರಿ ಖಂಡಿತಾ ನನಗೆ ದೊಡ್ಡ ಜಯ ಕೊಡುತ್ತಾರೆ. ಯಶಸ್ಸು ಸಿಕ್ಕೇಸಿಗುತ್ತದೆ.
•ವಿನಯ್‌ ಕುಲಕರ್ಣಿ, ಮೈತ್ರಿ ಪಕ್ಷದ ಅಭ್ಯರ್ಥಿ.

ನನ್ನ ಪತಿಯ ಜನಸೇವೆಗೆ ಈ ಬಾರಿ ಖಂಡಿತಾ ಜಯ ಸಿಗುವ ವಿಶ್ವಾಸವಿದೆ. ಅವರು ಮಾಡಿದ ಕೆಲಸಕ್ಕೆ ಕೂಲಿ ಕೇಳಿದ್ದಾರೆ. ಈ ಬಾರಿ ಖಂಡಿತಾ ಜಯ ನಮ್ಮದೇ. ಅವರು ದಣಿವರಿಯದೇ ಕೆಲಸ ಮಾಡುವ ಗುಣ ಹೊಂದಿದ್ದಾರೆ. ಇದೀಗ ಮತ್ತೇ ಕುಂದಗೋಳ ಉಪ ಚುನಾವಣೆ ಬರುತ್ತಿದ್ದು ಅದಕ್ಕೆ ತಯಾರಿ ನಡೆಸುತ್ತಿದ್ದಾರೆ.
•ಶಿವಲೀಲಾ,ವಿನಯ್‌ ಕುಲಕರ್ಣಿ ಪತ್ನಿ.

Advertisement

Udayavani is now on Telegram. Click here to join our channel and stay updated with the latest news.

Next