Advertisement

ಜೋಶಿ ತಮ್ಮ ಹೆಸರಲ್ಲೇ ಚುನಾವಣೆ ಎದುರಿಸಲಿ

12:45 PM Apr 06, 2019 | keerthan |

ಹುಬ್ಬಳ್ಳಿ: ಕಳೆದ 15 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿಕೊಳ್ಳುವ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ, ಪ್ರಧಾನಿ ಮೋದಿಯವರ ಹೆಸರು ಬಿಟ್ಟು ವೈಯಕ್ತಿಕ ನೆಲೆಗಟ್ಟಿನಲ್ಲಿ ಚುನಾವಣೆ ಎದುರಿಸಲು ಮುಂದಾಗಲಿ, ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

Advertisement

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ವರ್ಸ್‌ಸ್‌ ಪ್ರಹ್ಲಾದ ಜೋಶಿ ಎಂದು ಚುನಾವಣೆ ಎದುರಿಸಲು ಅವರು ಮುಂದಾದರೆ ಅದಕ್ಕೆ ತಾವು ಸಿದ್ಧ. ಸಂಸದರ ಆದರ್ಶಗ್ರಾಮ ಹಾರೋಬೆಳವಡಿ ಸ್ಥಿತಿ ನೋಡಿದರೆ ಜೋಶಿಯವರ ಅಭಿವೃದ್ಧಿ ಏನೆಂಬುದು ಗೊತ್ತಾಗುತ್ತದೆ. ಕೇವಲ ಹು-ಧಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ಕೈಗೊಂಡಿದ್ದು ಬಿಟ್ಟರೆ, ಹಳ್ಳಿಗಳ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.

ರಾಜ್ಯದಲ್ಲಿ ಬಳಕೆಯಾಗುವ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಶುಲ್ಕವನ್ನೇ ಕೇಂದ್ರ ಸರಕಾರ ಸಿಆರ್‌ಎಫ್ ನಿಧಿ ನೀಡಿ ರಸ್ತೆಗಳ ಬಳಕೆಗೆ ನೀಡುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಅನುದಾನ ತರದೆ, ಚುನಾವಣೆ ಸಂದರ್ಭದಲ್ಲಿ ಒಂದೇ ಬಾರಿ ಸಿಆರ್‌ಎಫ್ ಅನುದಾನ ತಂದು ಅವಳಿನಗರಕ್ಕೆ ಬಳಸಲಾಗಿದೆ. ಅವಳಿನಗರದ ಒಳ ಸಣ್ಣ ರಸ್ತೆಗಳಿಗೂ ಈ ಹಣ ಬಳಕೆ ಮಾಡಲಾಗಿದೆ. ಪಾಲಿಕೆ ಸದಸ್ಯರ ವಾರ್ಡ್‌ ನಿಧಿಯ ಕಾಮಗಾರಿ ಸಹ ತಮ್ಮದೆಂಬಂತೆ ಜೋಶಿಯವರು ಬಿಂಬಿಸಿ ಪೋಟೋಗಳಿಗೆ ಫೋಸ್‌ ನೀಡುತ್ತಿದ್ದಾರೆ ಎಂದು ದೂರಿದರು.

ಧಾರವಾಡಕ್ಕೆ ಐಐಟಿ ತಂದಿದ್ದು ತಾವೇ ಎಂಬಂತೆ ಜೋಶಿ ಹೇಳಿ ಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಪಕ್ಷದ ಈ ಭಾಗದ ಮುಖಂಡರನ್ನು ಸೇರಿಸಿ ಸಿಎಂ ಮೇಲೆ ಒತ್ತಡ ತಂದು ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ನಾನು ಕಾರಣ. ರಾಜ್ಯ ಸರಕಾರ ಸುಮಾರು 480 ಎಕರೆ ಭೂಮಿ ನೀಡಿದೆ ಎಂದರು.

ಅಭಿವೃದ್ಧಿ ವಿಚಾರಕ್ಕೆ ಜೋಶಿ ಚರ್ಚೆಗೆ ಬರುವುದಾದರೆ ತಾವು ಸಿದ್ಧ. ಪಾಲಿಕೆಗೆ ಪಿಂಚಣಿ ಬಾಕಿ ಹಣ ಬಾರದಿರಲು ಬಿಜೆಪಿ ಆಡಳಿತ ಇರುವ ಪಾಲಿಕೆಯಿಂದ ಸರಿಯಾದ ಬಳಕೆ ಪ್ರಮಾಣ ಪತ್ರ ಇನ್ನಿತರ ದಾಖಲೆ ನೀಡದಿರುವುದೇ ಆಗಿದೆ. ಆದಾಗ್ಯೂ ಸುಮಾರು 16 ಕೋಟಿ ರೂ. ಬಾಕಿ ಹಣ ಬಿಡುಗಡೆ ಮಾಡಿಸಿದ್ದೇ ನಾನು. ಆದರೆ ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಹೇಳಿದರು.

Advertisement

ಮೋರೆ ಬೆಂಬಲಕ್ಕೆ ವಿನಯ್‌ ಮೊರೆ
ಧಾರವಾಡ: ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ, ಮಾಜಿ ಸಚಿವ ಎಸ್‌.ಆರ್‌. ಮೋರೆ ಅವರ ಮನೆಗೆ ಕೈ-ದಳ ಮೈತ್ರಿಅಭ್ಯರ್ಥಿ ವಿನಯಕುಲಕರ್ಣಿ ಅವರು ಶುಕ್ರವಾರ ಭೇಟಿನೀಡಿದರು. ಈ ವೇಳೆ ಮೋರೆ ಅವರಿಗೆ ಶಾಲು ಹೊದಿಸಿ, ಸನ್ಮಾನಿಸಿದ ಕುಲಕರ್ಣಿ ಈ ಚುನಾವಣೆಯಲ್ಲಿ ಬೆಂಬಲ ನೀಡಿ ಪ್ರಚಾರ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮೋರೆ, ನಾನು ಕಟ್ಟಾ ಕಾಂಗ್ರೆಸ್ಸಿಗ. ಪಕ್ಷದ ನಿರ್ಧಾರ ಸ್ವಾಗತಾರ್ಹ. ವಿನಯ ಕುಲಕರ್ಣಿ ಅವರಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು. ರಾಹುಲ್‌ ಗಾಂಧಿ ಪ್ರಧಾನ ಮಂತ್ರಿ ಆಗಬೇಕಾದರೆ ವಿನಯ ಅಂತಹ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು
ಬರುವುದು ಅಗತ್ಯ. ಹೀಗಾಗಿ ಕಾರ್ಯಕರ್ತರು ತಮ್ಮಲ್ಲಿರುವ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಮರೆತು ವಿನಯ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು. ಮಹೇಶ ಶೆಟ್ಟಿ, ಬಸವರಾಜ ಜಾಧವ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next