Advertisement

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ

05:23 PM Apr 02, 2023 | Team Udayavani |

ಧಾರವಾಡ : ಧಾರವಾಡ ಗ್ರಾಮೀಣ- 71 ವಿಧಾನಸಭಾ ಮತಕ್ಷೇತ್ರ ಬಿಟ್ಟು ಹೋಗದೇ, ಈ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಆಗ್ರಹಿಸಿ ಇಲ್ಲಿಯ ಬಾರಾಕೋಟ್ರಿಯಲ್ಲಿ ಇರುವ ಮಾಜಿ ಸಚಿವ ವಿನಯ ಕುಲಕರ್ಣಿ ಸ್ವಗೃಹದ ಎದುರು ಬ್ಲಾಕ್ ಕಾಂಗ್ರೆಸ್- 71ರ ನೇತೃತ್ವದಲ್ಲಿ ಅವರ ಅಭಿಮಾನಿಗಳು ರವಿವಾರ ಧರಣಿ ಸತ್ಯಾಗ್ರಹ ನಡೆಸಿದರು.

Advertisement

ಸಿಎಂ ಎದುರು ಸ್ಪರ್ಧೆಗಾಗಿ ಶಿಗ್ಗಾಂವಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವ ಕುರಿತಂತೆ ಚರ್ಚೆ ಆಗುತ್ತಿದ್ದು, ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಯಾವುದೇ ಕಾರಣಕ್ಕೂ ಧಾರವಾಡ ಗ್ರಾಮೀಣ- 71 ಮತಕ್ಷೇತ್ರ ಬಿಟ್ಟು ವಿನಯ್ ಅವರು ಹೋಗಬಾರದು. ಇಲ್ಲಿಂದಲೇ ಸ್ಪರ್ಧೆ ಮಾಡಬೇಕು ಎಂದು ಆಗ್ರಹಿಸಿದರು.

ಈ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಇದಲ್ಲದೇ ಸಚಿವರಾಗಿ ಕೆಲಸ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ಇದೆ. ಕ್ಷೇತ್ರದ ಜನತೆಯೊಂದಿಗೆ ನಿಕಟ ಸಂಪರ್ಕದಿಂದ ಜನಪ್ರಿಯ ನಾಯಕರಾಗಿದ್ದಾರೆ. ಹೀಗಾಗಿ ಈ ಕ್ಷೇತ್ರ ಬಿಟ್ಟು ಹೋಗುವ ಚಿಂತನೆ ಮಾಡಬಾರದು. ಈ ಕೂಡಲೇ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನ ಕೈಕೊಳ್ಳಬೇಕು. ಇದಕ್ಕೆ ಪಕ್ಷದ ವರಿಷ್ಠರು ಕೂಡ ಅವಕಾಶ ಕಲ್ಪಿಸಿ ಕೊಡಬೇಕು. ಇಲ್ಲದೇ ಹೋದಲ್ಲಿ ಧಾರವಾಡ -71 ಬ್ಲಾಕ್ ಕಾಂಗ್ರೆಸ ನ ಎಲ್ಲ ಪದಾಧಿಕಾರಿಗಳು, ಮುಖಂಡರು ಸಾಮೂಹಿಕ ರಾಜೀನಾಮೆ ಕೊಡುತ್ತೇವೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.

ಇನ್ನು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರ ಪರವಾಗಿ ಉಪಾಧ್ಯಕ್ಷ ಪ್ರಕಾಶ ಹಳಿಯಾಳ ಮನವಿ ಸ್ವೀಕರಿಸಿದ್ದು, ಅಲ್ಲದೇ ಪ್ರತ್ಯೇಕವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಕೂಡ ಮನವಿ ಪತ್ರ ಸಲ್ಲಿಸಲಾಯಿತು. ಇದಲ್ಲದೇ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರಿಗೆ ಅಭಿಮಾನಿಗಳು ರಕ್ತದಿಂದ ಬರೆದ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ ಪರಮೇಶ ಕಾಳೆ, ಚನಬಸಪ್ಪ ಮಟ್ಟಿ, ಅಣ್ಣಪ್ಪ ಚಿನಗುಡಿ, ಕಿಶೋರ ಬಡಿಗೇರ, ಮಂಜು ಭೀಮಕ್ಕನವರ, ಆಯ್ .ಎಸ್. ಏಣಗಿ, ನಂದೀಶ ನಾಯ್ಕರ, ಮಿಲಿಂದ ಇಚ್ಚಂಗಿ,ಮೈಲಾರಗೌಡ ಪಾಟೀಲ ಗೌರಮ್ಮ ಬಳೋಗಿ, ಬಸವರಾಜ ಜಾಧವ, ನವೀನ ಕದಂ, ಸಿದ್ದು ತಿದಿ, ಸೂರಜ ಪುಡಕಲಕಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Advertisement

ಜಿಲ್ಲೆಗೆ ಪ್ರವೇಶ ಇಲ್ಲದ ಕಾರಣ ಅವರ ಪರವಾಗಿ ಮತದಾರರ ಸಂಪರ್ಕ ಮಾಡುವ ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದ್ದೇನೆ ಹೊರತು ಧಾರವಾಡ ವಿಧಾನಸಭಾ ಕ್ಷೇತ್ರ- 71 ರ ಆಕಾಂಕ್ಷಿ ಅಥವಾ ಅಭ್ಯರ್ಥಿಯೂ ನಾನಲ್ಲ. ಹೀಗಾಗಿ ಯಾರೂ ಗೊಂದಲಕ್ಕೆ ಒಳಗಾಗಬೇಡಿ. ಎಲ್ಲ ಗೊಂದಲ, ಊಹಾಪೋಹಗಳಿಗೆ ಶೀಘ್ರವೇ ತೆರೆ ಬೀಳಲಿದೆ. ಕ್ಷೇತ್ರಕ್ಕೆ ಮರಳಿ ವಿನಯ ಅವರೇ ಬರಲಿದ್ದು, ಅವರೇ ಸ್ಪರ್ಧೆ ಮಾಡಲಿದ್ದಾರೆ.
-ಶಿವಲೀಲಾ ಕುಲಕರ್ಣಿ, ವಿನಯ ಕುಲಕರ್ಣಿ ಪತ್ನಿ

ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಧರಣಿ ಕೈಗೊಂಡ ಬೆಂಬಲಿಗರು, ಕಾರ್ಯಕರ್ತರನ್ನು ಸಮಾಧಾನಪಡಿಸುವ ಕೆಲಸ ಶಿವಲೀಲಾ ಕುಲಕರ್ಣಿ ಮಾಡಿದರು. ಇದಲ್ಲದೇ ವಿಡಿಯೋ ಕಾಲ್ ಮೂಲಕ ಧರಣಿನಿರತರೊಂದಿಗೆ ಮಾತನಾಡಿದ ವಿನಯ ಕುಲಕರ್ಣಿ, ಶಿಗ್ಗಾಂವಿಯಿಂದ ಸ್ಪರ್ಧೆ ಮಾಡುವಂತೆ ಪಕ್ಷದ ವರಿಷ್ಠರು ಕೇಳಿದ್ದು ನಿಜ, ಆದರೆ ನಾನು ಇಲ್ಲ ಎಂಬುದಾಗಿ ಸ್ಪಷ್ಟ ಸಂದೇಶ ನೀಡಿದ್ದೇನೆ. ಈ ಕ್ಷೇತ್ರ ಬಿಟ್ಟು ಹೋಗುವ ಮಾತೇ ಇಲ್ಲ. ಈ ಅಭಿಮಾನ, ಪ್ರೀತಿ ಬಿಟ್ಟು ಹೋಗುವ ವಿಚಾರವೂ ಇಲ್ಲ. ಈ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ ಎಂದು ಮನವೊಲಿಸಿದರು.

ಇದನ್ನೂ ಓದಿ: ಬೈಂದೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಮುನಿಯಾಲು ಉದಯಕುಮಾರ್ ಶೆಟ್ಟಿ ಹೆಸರು ಪ್ರಸ್ತಾಪ

Advertisement

Udayavani is now on Telegram. Click here to join our channel and stay updated with the latest news.

Next