Advertisement

ಲಾಭದಲ್ಲಿ ವಿಮುಲ್ಗೆ 2ನೇ ಸ್ಥಾನ

10:01 AM Jun 11, 2019 | Suhan S |

ವಿಜಯಪುರ : ಭೀಕರ ಬರದ ಮಧ್ಯೆಯೂ ವಿಜಯಪುರ-ಬಾಗಲಕೋಟೆ ಹಾಲು ಉತ್ಪಾದಕರ ಸಂಘದ ಒಕ್ಕೂಟ 2018-19ನೇ ಆರ್ಥಿಕ ವರ್ಷದಲ್ಲಿ ಇತರೆ ಜಿಲ್ಲೆಗಳಿಗಿಂತ ಹೆಚ್ಚು ಲಾಭದಲ್ಲಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. 250.62 ಕೋಟಿ ರೂ. ವಹಿವಾಟು ನಡೆಸಿರುವ ವಿಮುಲ್, 27.07 ಕೋಟಿ ರೂ. ಲಾಭ ಹಾಗೂ 2.92 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ವಿಮುಲ್ ಒಕ್ಕೂಟದ ನಿರ್ದೇಶಕ ಶ್ರೀಶೈಲಗೌಡ ಪಾಟೀಲ ಮಾಹಿತಿ ನೀಡಿದರು.

Advertisement

ನಗರದ ಹೊರವಲಯದ ಭೂತನಾಳ ಬಳಿ ಇರುವ ವಿಜಯಪುರ-ಬಾಗಲಕೋಟೆ ಹಾಲು ಉತ್ಪಾದಕರ ಸಂಘದ ಒಕ್ಕೂಟ (ಕೆಎಂಎಫ್) ಆಡಳಿತ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.14.5 ಹೆಚ್ಚು ವಹಿವಾಟು ಹೆಚ್ಚಾಗಿದೆ. ಬರದ ಹಿನ್ನೆಲೆಯಲ್ಲಿ ಅವಳಿ ಜಿಲ್ಲೆಯಲ್ಲಿ ಹಾಲು ಉತ್ಪಾದನೆಯಲ್ಲಿ ದಾಖಲೆ ಮಾಡಿದ್ದು, ಐಎಸ್‌ಒ 22000 ಗುಣಮಟ್ಟದ ಪ್ರಮಾಣಪತ್ರ ಹೊಂದಿದೆ. ಏಪ್ರಿಲ್ನಿಂದಲೇ ಹಾಲು ಉತ್ಪಾದಕರ ಖಾತೆಗೆ ಸರ್ಕಾರದಿಂದ ನೇರವಾಗಿ ಅವರ ಖಾತೆಗೆ ಹಣ ಜಮೆಯಾಗುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಹಾಲು ಖರೀದಿ ದರದಲ್ಲಿ 1ರೂ. ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ ಭೀಕರ ಬರ ಆವರಿಸಿರುವ ಕಾರಣ ಆವಳಿ ಜಿಲ್ಲೆಗಳ ಹಾಲು ಉತ್ಪಾದಕರನ್ನು ಆರ್ಥಿಕ ಸಬಲೀಕರಣ ಮಾಡುವುದಕ್ಕಾಗಿ 3ಕೋಟಿ ರೂ. ನೆರವು ನೀಡಲಾಗಿದೆ. ಪ್ರತಿ 50 ಕೆ.ಜಿ ಚೀಲ ಪಶು ಆಹಾರಕ್ಕೆ 100ರೂ. ರಿಯಾಯಿತಿ ನೀಡಲಾಗಿದೆ ಎಂದು ವಿವರಿಸಿದರು.

ಒಕ್ಕೂಟದ ವ್ಯಾಪ್ತಿಯಲ್ಲಿ 459 ಹಾಲು ಉತ್ಪಾದನೆ ಸಂಘಗಳಿದ್ದು, ಒಟ್ಟು 67,153 ಸದಸ್ಯರು ನಿತ್ಯವೂ ಹಾಲು ಪೂರೈಸುತ್ತಿದ್ದಾರೆ. 824 ಹಾಲು ವಿತರಕರಿದ್ದು, 16ಕ್ಷೀರ ಮಳಿಗೆ ಹೊಂದಿದೆ. 68 ನಂದಿನಿ ಪ್ರಾಂಚೈಸಿ ಹೊಂದಿದ್ದು, ಮಹಾರಾಷ್ಟ್ರದ ಸೋಲಾಪುರ, ಅಕ್ಕಲಕೋಟ, ಉಸ್ಮಾನಾಬಾದ್‌ ಹಾಗೂ ತೆಲಂಗಾಣದ ಹೈದ್ರಾಬಾದ್‌ ಮಾರುಕಟ್ಟೆಗೆ ಪ್ರತಿ ದಿನ 10 ಸಾವಿರ ಲೀ. ಹಾಲು ಮಾರಾಟ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಸದ್ಯ ನಮ್ಮ ಒಕ್ಕೂಟದ ವ್ಯಾಪ್ತಿಯಲ್ಲಿ ನಿತ್ಯವೂ 1.75ಲಕ್ಷ ಲೀಟರ್‌ ಹಾಲು ಉತ್ಪಾದಿಸುತ್ತಿದ್ದು, ಭವಿಷ್ಯದ 5 ವರ್ಷಗಳಲ್ಲಿ ವಿಮುಲ್ 3 ಲಕ್ಷ ಲೀಟರ್‌ ಹಾಲು ಉತ್ಪಾದನೆ ಗುರಿ ಹಾಕಿಕೊಳ್ಳಲಾಗಿದೆ. ನಿತ್ಯ 64.7 ಸಾವಿರ ಲೀಟರ್‌ ಹಾಲು ಮಾರಾಟ ಮಾಡಲಾಗುತ್ತಿದೆ. 65 ಸಾವಿರ ಲೀಟರ್‌ ಬಲ್ಕ್ ಹಾಲು ಮಾರಾಟವಾಗುತ್ತಿದೆ. ಕ್ಷೀರಭಾಗ್ಯ ಯೋಜನೆಯಡಿ 65 ಸಾವಿರ ಲೀಟರ್‌ ಹಾಲು ನೀಡಲಾಗುತ್ತಿದೆ ಎಂದರು.

ಇದಲ್ಲದೇ ಪ್ರತಿ ತಿಂಗಳು 8 ಮೆಟ್ರಿಕ್‌ ಟನ್‌ ತುಪ್ಪ ಮಾರಾಟ ಮಾಡಲಾಗುತ್ತಿದೆ. 11ಮೆಟ್ರಿಕ್‌ ಟನ್‌ ನಂದಿನಿ ಉತ್ಪನ್ನಗಳಾದ ಪೇಡಾ, ಮಸಾಲಾ ಮಜ್ಜಿಗೆ, ಲಸ್ಸಿ, ಬೆಣ್ಣೆ, ಸುವಾಸಿತ ಹಾಲು, ಜಾಮೂನ್‌ ಮಿಕ್ಸ್‌, ಜಾಮೂನ್‌, ರಸಗುಲ್ಲಾ, ಪನ್ನೀರ್‌, ಧಾರವಾಡ ಪೇಡಾ, ಬೆಳಗಾವಿ ಕುಂದಾ, ಐಸ್‌ಕ್ರೀಂ, ಹಾಲಿನ ಪುಡಿ ಹಾಗೂ ಇತರ ಸಿಹಿ ಸೇರಿದಂತೆ 3 ಸಾವಿರ ಲೀ. ಹಾಲಿನಿಂದ ವಿವಿಧ ಉತ್ಪನ್ನಗಳ ತಯಾರಿಸಲಾಗುತ್ತದೆ. 8,091 ಕೆಜಿ ಮೊಸರು ಉತ್ಪಾದನೆಯೂ ಇದೆ ಎಂದರು.

Advertisement

ಬಾಗಲಕೋಟೆ ಜಿಲ್ಲೆಯಲ್ಲಿ 1ಲಕ್ಷ ಲೀಟರ್‌ ಸಾಮರ್ಥ್ಯದ 22 ಕೋಟಿ ರೂ. ವೆಚ್ಚದಲ್ಲಿ ಡೇರಿ ನಿರ್ಮಾಣ ಯೋಜನೆ ರೂಪಿಸಲಾಗಿದ್ದು, 9.30 ಕೋಟಿ ರೂ. ವೆಚ್ಚದಲ್ಲಿ ಸಿವಿಲ್ ಕಾಮಗಾರಿ, ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಿಕಲ್ ಕಾಮಗಾರಿ, 40 ಲಕ್ಷ ರೂ. ವೆಚ್ಚದಲ್ಲಿ ಪ್ಯಾಂಕಿಂಗ್‌ ಯಂತ್ರ ಅಳವಡಿಕೆ ಮಾಡಲು ಯೋಜಿಸಲಾಗಿದೆ. ಇದಲ್ಲದೇ ಜಮಖಂಡಿಯಲ್ಲಿ 10 ಮೆಟ್ರಿಕ್‌ ಟನ್‌ ಸಾಮರ್ಥ್ಯದ 25 ಕೋಟಿ ರೂ. ವೆಚ್ಚದಲ್ಲಿ ಹಾಲಿನ ಪುಡಿ ತಯಾರಿಕೆ ಘಟಕ ಸ್ಥಾಪನೆ, ವಿಜಯಪುರ ಡೇರಿಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ರೆಫ್ರಿಜಿರೇಷನ್‌ ವ್ಯವಸ್ಥೆ ಬಲವರ್ಧನೆ ಮತ್ತು ಕೋಲ್ಡ್ ರೂಂ, 5 ಸಾವಿರ ಲೀ. ಸಾಮರ್ಥ್ಯದ ಐಸ್‌ಕ್ರಿಂ ತಯಾರಿಕೆ ಘಟಕ, ಪರಿಸರ ಸಂರಕ್ಷಣೆಗಾಗಿ 500 ಔಷಧೀಯ ಹಾಗೂ ಇತರ ಸಸಿಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಸಂಘದ ನಿರ್ದೇಶಕರಾದ ಸಂಗಣ್ಣ ಹಂಡಿ, ಅಶ್ವಿ‌ನಿ ಹಳ್ಳೂರ, ಮಹಾದೇವಪ್ಪ ಹನಗಂಡಿ, ಸಿದ್ದಪ್ಪ ಕಡಪಟ್ಟಿ, ಸಂಜಯ ತಳೇವಾಡ, ಸಂಘದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next