Advertisement

Kapu: 14 ವರ್ಷದ ವನವಾಸ ಮುಗಿಸಿ ಮನೆ ಸೇರಿದ ವಿಮಲ!

05:54 PM Jul 30, 2024 | Team Udayavani |

ಕಾಪು: ಹನ್ನೆರಡು ವರ್ಷಗಳ ಹಿಂದೆ ಯಾರೂ ದಿಕ್ಕಿಲ್ಲದೆ ರಸ್ತೆ ಬದಿ ಅಲೆದಾಡುತ್ತಾ ಅಂತಿಮವಾಗಿ ವಿಶ್ವಾಸದ ಮನೆ ಅನಾಥಾಶ್ರಮಕ್ಕೆ ದಾಖಲಾಗಿದ್ದ ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆಯ ಮಹಿಳೆ ಕೊನೆಗೂ ಇದೀಗ ಮರಳಿ ಮನೆ
ಸೇರಿದ್ದಾರೆ. ಅವರ 14 ವರ್ಷಗಳ ವನವಾಸಕ್ಕೆ ತೆರೆ ಎಳೆದು ಕುಟುಂಬ ವರ್ಗದೊಂದಿಗೆ ಸೇರಿಸಿ ವಿಶ್ವಾಸದ ಮನೆಯ ಕಾರ್ಯಕರ್ತರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

2012ರ ಅಕ್ಟೋಬರ್‌ನಲ್ಲಿ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ತಿರುಗಾಡುತ್ತಿದ್ದರು. ಆಕೆ ಸ್ನಾನ ಮಾಡದೇ ತಲೆಗೂದಲು ಜಡೆಗಟ್ಟಿದ್ದವು, ಮೈಮೇಲಿದ್ದ ಬಟ್ಟೆಗಳು ದುರ್ನಾತ ಬೀರುತ್ತಿದ್ದವು. ವಿಶ್ವಾಸದ ಮನೆ ಆಶ್ರಮದ ಸಿಬ್ಬಂದಿಗಳು ಆಕೆಯನ್ನು ಕರೆತಂದು ಸ್ನಾನ ಮಾಡಿಸಿ, ಶುಚಿಗೊಳಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ ಉಪಚರಿಸಿದ್ದರು. ಆದರೆ ಆಕೆಯ ಭಾಷೆ ಅರ್ಥವಾಗದೇ ಇದ್ದುದರಿಂದ ವಿಳಾಸ ಪತ್ತೆ ಕಷ್ಟವಾಗಿತ್ತು. ಆದರೆ ಆರೈಕೆ ಮುಂದುವರಿದಿತ್ತು.

ಈ ನಡುವೆ ವಿಶ್ವಾಸದ ಮನೆಗೆ ಆಗಮಿಸಿದ ಕೆಎಂಸಿ ಆಸ್ಪತ್ರೆಯ ಮನೋ ರೋಗ ತಜ್ಞ ಡಾ| ಶರ್ಮಾ ಅವರ ಸಹಾಯಕ ಡಾ| ರಿಶಿಕೇಶ್‌ ಅವರು ಮಹಿಳೆಯನ್ನು ವಿಳಾಸವನ್ನು ಕೇಳಿ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದರು. ಆಕೆ ಮಹಾರಾಷ್ಟದ ಸತಾರ ಜಿಲ್ಲೆಯ ಮಸ್ವಾಡ್‌ ಹಳ್ಳಿಯ ನಿವಾಸಿಯೆಂದು ತಿಳಿದು ಬಂದಿತ್ತು. ಪೊಲೀಸರು ತಮ್ಮ ಪರಿಚಯದ ಸಾಗರ್‌ ಪವಾರ್‌ ಎಂಬಾತನ ಮೂಲಕವಾಗಿ ವಿಮಲಾ ಅವರ ಮಗನನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದರು. ತಾಯಿ ಪತ್ತೆಯಾದ ಸುದ್ದಿ ತಿಳಿಯುತ್ತಲೇ ಮಗ ಮತ್ತು ಸಹೋದರಿಯರು ಶಂಕರಪುರದ ವಿಶ್ವಾಸದಮನೆ ಅನಾಥಾಶ್ರಮಕ್ಕೆ ಆಗಮಿಸಿ ಆಕೆಯ ಗುರುತು ಪತ್ತೆ ಮಾಡಿದ್ದಾರೆ.

2010ರಲ್ಲೇ ಮನೆ ಬಿಟ್ಟಿದ್ದರು ವಿಮಲ
ಪತಿ ಮತ್ತು ಮೂರು ಮಕ್ಕಳೊಂದಿಗೆ ವಾಸವಿದ್ದ ವಿಮಲ ಅವರು ಮಾನಸಿಕ ಅಸ್ವಸ್ಥತೆಗೆ ಸಿಲುಕಿ, 2010ರಲ್ಲಿ ರಾತ್ರಿ ಮಲಗಿದಲ್ಲಿಂದ ಎದ್ದು ಹೋಗಿದ್ದರು. ಮನೆಯವರು ಎಲ್ಲ ಕಡೆ ಹುಡುಕಿ, ಸಿಗದೆ ಪೊಲೀಸರಿಗೆ ದೂರು ನೀಡಿದ್ದರು. ಆಗಲೂ ಸಿಗದೇ ಹೋದಾಗ ಮೃತಪಟ್ಟಿರಬೇಕೆಂದು ತಿಳಿದು ಕೊರಗಿದ್ದರು. ಇದೀಗ ವಿಶ್ವಾಸದಮನೆಯಲ್ಲಿ ತಾಯಿ ಪತೆಯಾಗಿದ್ದರಿಂದ ಮಕ್ಕಳು ಮತ್ತು ಸಹೋದರಿಯರು ಸಂಭ್ರಮಿಸಿದ್ದಾರೆ. ವಿಶ್ವಾಸದ ಮನೆಯ ಮುಖ್ಯಸ್ಥ ಪಾಸ್ಟರ್‌ ಸುನಿಲ್‌ ಜಾನ್‌ ಡಿ ಸೋಜ ಅವರಿಗೆ ಕೃತಜ್ಞತೆ ಸಲ್ಲಿಸಿ ತಮ್ಮ ಮನೆಗೆ ಕರೆದೊಯ್ದಿದ್ದಾರೆ.

– ರಾಕೇಶ್‌ ಕುಂಜೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next