“ದಿ ವಿಲನ್’ ಚಿತ್ರದ ಇಲ್ಲಿವರೆಗಿನ ಒಟ್ಟು ಕಲೆಕ್ಷನ್ ಎಷ್ಟು?’ ಅನೇಕರಿಗೆ ಈ ಕುತೂಹಲವಿದೆ. ಅದಕ್ಕೆ ಕಾರಣ ಚಿತ್ರದ ಮೊದಲ ದಿನದ ಗಳಿಕೆ. ಚಿತ್ರತಂಡ ಹೇಳಿಕೊಂಡಂತೆ ಮೊದಲ ದಿನ “ವಿಲನ್’ ಚಿತ್ರ ಬರೋಬ್ಬರಿ 20 ಕೋಟಿ ಕಲೆಕ್ಷನ್ ಮಾಡಿತ್ತು. ಮೊದಲ ದಿನವೇ ಇಷ್ಟೊಂದು ಗಳಿಕೆ ಕಂಡ ಚಿತ್ರ ಇಲ್ಲಿವರೆಗೆ ಎಷ್ಟು ಹಣ ಬಾಚಿರಬಹುದು, ನಿರ್ಮಾಪಕರ ಜೇಬಿಗೆ ಎಷ್ಟು ಸೇರಿರಬಹುದು ಎಂಬ ಕುತೂಹಲ ಅನೇಕರಿಗಿತ್ತು.
ಈಗ ಆ ಕುತೂಹಲಕ್ಕೆ ಸ್ವತಃ ನಿರ್ಮಾಪಕ ಸಿ.ಆರ್. ಮನೋಹರ್ ಉತ್ತರಿಸಿದ್ದಾರೆ. “ಸಿನಿಮಾದ ಒಟ್ಟು ಕಲೆಕ್ಷನ್ ಬಗ್ಗೆ ನನಗೆ ಐಡಿಯಾ ಇಲ್ಲ. ಆದರೆ ಇಲ್ಲಿವರೆ ನನಗೆ 30 ಕೋಟಿ ಶೇರ್ ಬಂದಿದೆ. ಅಷ್ಟು ಮಾತ್ರ ಹೇಳಬಲ್ಲೆ. ನನಗೆ ಸುಖಾಸುಮ್ಮನೆ ದೊಡ್ಡ ಮೊತ್ತ ಹೇಳುವ ಅಗತ್ಯವಿಲ್ಲ, ಫ್ಯಾನ್ಸಿ ನಂಬರ್ ಹೇಳಿ ಗೊತ್ತಿಲ್ಲ. ನನಗೆ ಏನು ಬಂದಿದೆಯೋ ಅದನ್ನಷ್ಟೇ ಹೇಳುತ್ತೇನೆ. ಇಲ್ಲಿವರೆಗೆ ನನಗೆ 30 ಕೋಟಿ ಶೇರ್ ಬಂದಿದೆ’ ಎಂದು ನೇರವಾಗಿ ಹೇಳುತ್ತಾರೆ ಮನೋಹರ್.
ಚಿತ್ರದ ಟಿವಿ ರೈಟ್ಸ್ ಆರೂವರೆ ಕೋಟಿಗೆ ಮಾರಾಟವಾಗಿದ್ದು, ಹಿಂದಿ ಡಬ್ಬಿಂಗ್ ರೈಟ್ಸ್‌ಗೆ 12 ಕೋಟಿವರೆಗೆ ಬೇಡಿಕೆ ಇದೆಯಂತೆ. “ಆರಂಭದಲ್ಲಿ ಸಿನಿಮಾದ ಕಲೆಕ್ಷನ್ ನೋಡಿ ಅನೇಕರು ಕುಹಕವಾಡಿದರು. ರಜೆ ಇದೆ, ಹಾಗಾಗಿ ಬರುತ್ತಾರೆಂದು. ಈಗ ರಜೆ ಕಳೆದಿದೆ. ಆದರೂ ನಮ್ಮ ಕಲೆಕ್ಷನ್ ಕಡಿಮೆಯಾಗಿಲ್ಲ’ ಎನ್ನುವುದು ಮನೋಹರ್ ಮಾತು. ಸಿನಿಮಾಕ್ಕೆ ಬರುತ್ತಿರುವ ಟೀಕೆಗಳನ್ನು ಮನೋಹರ್ ಕೂಡಾ ಗಮನಿಸಿದ್ದಾರೆ.
ಆದರೆ, ಆ ಬಗ್ಗೆ ಅವರಿಗೆ ಯಾವುದೇ ಬೇಸರವಿಲ್ಲ. “ನಾವು ಬದುಕುತ್ತಿರೋದು ಸಮಾಜದಲ್ಲಿ. ಇಲ್ಲಿ ಯಾವುದನ್ನು ಮುಚ್ಚಿಡೋದಕ್ಕೆ ಆಗುವುದಿಲ್ಲ. ಅವರವರ ಭಾವವನ್ನು ಅವರು ವ್ಯಕ್ತಪಡಿಸುತ್ತಾರೆ. ಒಂದೆ ಹೋಟೆಲ್‌ಗೆ ಬರುವ ಅನೇಕರು ಟೋಕನ್ ತಗೋತ್ತಾರೆ. ಕೆಲವರಿಗೆ ಒಂದು ತಿಂಡಿ ರುಚಿಸಿದರೆ, ಇನ್ನೊಬ್ಬರಿಗೆ ರುಚಿಸೋದಿಲ್ಲ. ಅಂತಿಮವಾಗಿ ಮಾಲೀಕ ನೋಡೋದು ಹೋಟೆಲ್ ತುಂಬಿದೆಯಾ ಎಂದಷ್ಟೇ’ ಎನ್ನುವ ಮೂಲಕ ಸಿನಿಮಾ ಕಲೆಕ್ಷನ್ ಬಗ್ಗೆ ಖುಷಿಯಾಗಿದ್ದಾರೆ.
ಇನ್ನು ಚಿತ್ರದ ವಿತರಕರಾದ ಜಾಕ್ ಮಂಜು ಹಾಗೂ ಇತರರು ಕೂಡಾ ಖುಷಿಯಾಗಿದ್ದು, ತಾವು ಹಾಕಿದ ಬಂಡವಾಳ ಬಂದು, ಕಮಿಶನ್ ತೆಗೆದೂ ನಿರ್ಮಾಪಕರಿಗೆ ಹಣ ಕೊಡುತ್ತಿದ್ದೇವೆ ಎನ್ನುತ್ತಾರೆ. ಕಥೆ, ಕಾಸು ನಿಮುª ಸಿನಿಮಾ ನಂದು: ನಿರ್ದೇಶಕ ಪ್ರೇಮ್ ಕೂಡಾ ಸಿನಿಮಾದ ಕಲೆಕ್ಷನ್‌ನಿಂದ ಖುಷಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ವೈಯಕ್ತಿಕವಾಗಿ ಟೀಕೆ ಮಾಡುವವರ ಬಗ್ಗೆ ಸಿಟ್ಟಾಗಿದ್ದಾರೆ.
ಅದೇ ಕಾರಣದಿಂದ ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ಕಾಲೆಳೆಯುವವರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. “ಸಿನಿಮಾದ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ವೈಯಕ್ತಿಕವಾಗಿ ಟೀಕೆ ಮಾಡುವವರು ಒಂದು ಸಿನಿಮಾ ಮಾಡಿ. ಕಥೆ ನೀವೇ ಮಾಡಿ, ನಿರ್ಮಾಣನೂ ನೀವೇ ಮಾಡಿ, ನಿರ್ದೇಶನ ಮಾತ್ರ ನನಗೆ ಕೊಡಿ. ನಿಮಗೆ ಹೇಗೆ ಬೇಕೋ ಹಾಗೆ ತೆಗೆದುಕೊಡುತ್ತೇನೆ. ನನಗೆ ನನ್ನ ಕೂಲಿ ಕೊಟ್ಟರೆ ಸಾಕು. ದೂರದಿಂದ ಕೂತು ಮಾತನಾಡೋದು ಸುಲಭ.
ಇಲ್ಲಿ ಬಂದ ನಂತರ ಸಿನಿಮಾದ ಶ್ರಮ ಗೊತ್ತಾಗುತ್ತೆ’ ಎಂದು ಗರಂ ಆಗಿಯೇ ಹೇಳಿದ್ದಾರೆ. ಜೊತೆಗೆ ತನ್ನ ವಿರುದ್ಧ ವೈಯಕ್ತಿಕವಾಗಿ ನಿಂದನೆ ಮಾಡಿ, ತೇಜೋವಧೆ ಮಾಡಿದವರ ವಿರುದ್ಧ ಪ್ರೇಮ್ ಮಂಗಳವಾರ ದೂರು ನೀಡಿದ್ದಾರೆ. ಅವಹೇಳನಕಾರಿಯಾಗಿ ಬರಹಗಳು ಮತ್ತು ವೀಡಿಯೋಗಳಿಂದ ನನ್ನ ತೇಜೋವಧೆಯಾಗುತ್ತಿದೆ. ಇಂತಹವರ ವಿರುದ್ದ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಡಿಸಿಪಿ ರವಿ. ಡಿ ಚೆನ್ನಣ್ಣನವರ್ ಅವರಿಗೆ ದೂರು ನೀಡಿದ್ದಾರೆ.