ಪಂಚಾಯತ್ ಸಂಬಂಧಿತ ಕೆಲಸಕ್ಕೆ ದೂರದ ಕಚೇರಿಗೆ ಹೋಗುವುದೇ ಕೋಡಿಬೆಂಗ್ರೆಯ ನಿವಾಸಿಗಳಿಗೆ ಒಂದು ದೊಡ್ಡ ಸವಾಲಾಗಿದೆ. 31ನೇ ತೋನ್ಸೆ ಗ್ರಾ.ಪಂ.ಗೆ ಸೇರ್ಪಡೆಗೊಳಿಸಿ ಎಂಬ ಗ್ರಾಮಸ್ಥರ ಮನವಿಗೆ ಇನ್ನೂ ಸಿಕ್ಕಿಲ್ಲ ಮನ್ನಣೆ.
ಮಲ್ಪೆ: ಪಕ್ಕದ ಕೆಮ್ಮಣ್ಣು ತೋನ್ಸೆ ಪಂಚಾಯತ್‌ಗೆ ಹೋಗಲು ಕೇವಲ 4 ಕಿ.ಮೀ. ದೂರ. ಆದರೆ ತಮ್ಮದೇ ಆದ ಕೋಡಿ ಗ್ರಾಮ ಪಂಚಾಯತ್‌ನ ಮೆಟ್ಟಿಲು ಹತ್ತಲು 30 ಕಿ.ಮೀ. ಸುತ್ತು ಬಳಸಿ ಹೋಗಬೇಕಾದ ಅನಿವಾರ್ಯತೆ ಇದೆ. ಇದು ಕೋಡಿ ಬೆಂಗ್ರೆಯ ಜನತೆಯ ಹಲವು ದಶಕಗಳಿಂದ ಪಂಚಾಯತ್‌ಗೆ ಸಂಬಂಧಿಸಿದ ಪ್ರತಿಯೊಂದು ಕೆಲಸಕ್ಕೆ ದೂರದ ಕೋಡಿಗೆ ಹೋಗಿ ಬರಲು ಎದುರಿಸುತ್ತಿರುವ ಸಮಸ್ಯೆ. ಕೋಡಿ ಬೆಂಗ್ರೆಯನ್ನು ಕೋಡಿಯಿಂದ ಬೇರ್ಪಡಿಸಿ ಸಮೀಪದ 31ನೇ ತೋನ್ಸೆ ಗ್ರಾಮಕ್ಕೆ ಸೇರಿಸುವಂತೆ ಕಳೆದ ಹಲವಾರು ವರ್ಷಗಳಿಂದ ಕೋಡಿ ಬೆಂಗ್ರೆಯ ಗ್ರಾಮಸ್ಥರು ಸ್ಥಳೀಯ ಸಂಘಸಂಸ್ಥೆಗಳು ಜಿಲ್ಲಾಧಿಕಾರಿಗಳ ಮುಖೇನ ಸರಕಾರಕ್ಕೆ ಮನವಿಯನ್ನು ನೀಡಿ ಒತ್ತಾಯಿಸುತ್ತಾ ಬಂದಿದ್ದರೂ ಇದುವರೆಗೂ ಯಾವ ಮನ್ನಣೆಯೂ ಸಿಕ್ಕಿಲ್ಲ.
ಸ್ವರ್ಣ ನದಿಯ ಮತ್ತು ಸೀತಾನದಿ ಸಂಗಮ ಸ್ಥಳ, ಅಳಿವೆ ಬಾಗಿಲಿನಲ್ಲಿರುವ ಈ ಕೋಡಿ ಬೆಂಗ್ರೆಯು ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಕೋಟ ಹೋಬಳಿಯನ್ನು ಹೊಂದಿರುವ ಈ ಪುಟ್ಟ ಊರು ಕುಂದಾಪುರ ವಿಧಾನಸಭಾ ಕೇÒತ್ರಕ್ಕೆ ಸೇರಿದೆ. ಮೂರು ಕಡೆ ಜಲ ಪ್ರದೇಶವಿದ್ದು, ಒಂದು ಕಡೆ ಮಾತ್ರ ರಸ್ತೆ ಸಂಪರ್ಕ ಹೊಂದಿದ್ದು, 2.5 ಕಿ ಮೀ ವಿಸೀ¤ರ್ಣವನ್ನು ಹೊಂದಿದೆ. ಒಟ್ಟು 275 ಕುಟುಂಬಗಳಿವೆ. ಶೇ. 8ಂರಷ್ಟು ಜನರ ಮುಖ್ಯ ಕಸುಬು ಮೀನುಗಾರಿಕೆ.
ವಿದ್ಯುತ್, ಕುಡಿಯುವ ನೀರು ಸರಾಬರಾಜು ಕೆಮ್ಮಣ್ಣು ಗ್ರಾಮದ ಮೂಲಕ ಇದೆ. ಪೊಲೀಸ್ ಠಾಣೆ ಮಲ್ಪೆ ವ್ಯಾಪ್ತಿಗೊಳಪಟ್ಟಿದೆ. ಮಳೆಗಾಲ ಹೊರತುಪಡಿಸಿ ಉಳಿದ ದಿನಗಳಲ್ಲಿ ನದಿದಾಟಿ ಕೋಡಿ ಪಂಚಾಯತ್‌ಗೆ ಆಟೋದಲ್ಲಿ ಹೋಗಬೇಕಾದ ಪರಿಸ್ಥಿತಿ. ರಸ್ತೆ ಮೂಲಕ ವಾಹನದಲ್ಲಿ ಹೋಗುವುದಾದರೆ 9 ಗ್ರಾಮಗಳನ್ನು ದಾಟಿ ಹೋಗಬೇಕು.
ಸುಂದರ ತಾಣ, ಮೂಲ ಸೌಕರ್ಯ ಇಲ್ಲ :
ಕೋಡಿ ಬೆಂಗ್ರೆ ತುದಿಯಲ್ಲಿ ರಮಣೀಯವಾದ ಡೆಲ್ಟಾ ಬೀಚ್ ಇದೆ. ಸಮುದ್ರ ಮತ್ತು ನದಿಗಳು ಸೇರುವ ಮನಮೋಹಕವಾದ ತ್ರಿವೇಣಿ ಸಂಗಮವಿದೆ. ಪ್ರತಿನಿತ್ಯ ಇಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಇಲ್ಲಿ ಯಾವುದೇ ಮೂಲ ಸೌಕರ್ಯಗಳು ಇಲ್ಲ. ಹಂಗಾರಕಟ್ಟೆ ಬೆಂಗ್ರೆಗೆ ಸೇತುವೆಯನ್ನು ನಿರ್ಮಾಣ ಮಾಡಿದರೆ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ದಿ ಪಡಿಸಬಹುದು. ಮಾತ್ರವಲ್ಲದೆ ಮೀನುಗಾರಿಕೆ ಉದ್ಯಮದಲ್ಲಿ ತೊಡಗಿಸಿಕೊಂಡ ಕೋಟ, ಕುಂದಾಪುರ, ಕೋಡಿ, ಸಾಸ್ತಾನ ಜನರಿಗೂ ಅನುಕೂಲವಾಗಲಿದೆ.
ಇತರ ಸಮಸ್ಯೆಗಳೇನು? :
- ಹಲವಾರು ದಶಕಗಳಿಂದ ಇಲ್ಲಿ ನೆಲೆಸಿರುವ ಮಂದಿಗೆ ಇನ್ನೂ ಹಕ್ಕು ಪತ್ರ ಸಿಕ್ಕಿಲ್ಲ.
- ಇಲ್ಲಿ ಸರಕಾರಿ ಜಾಗ ಇದ್ದರೂ ಆರೋಗ್ಯಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲ.
- ಹಂಗಾರಕಟ್ಟೆಯಿಂದ ಹೊಳೆದಾಟಿ ಬರಲು ಬಾರ್ಜ್ ಇದ್ದರೂ, ಸಂಚಾರ ವ್ಯವಸ್ಥೆ ಸರಿಯಾಗಿಲ್ಲ.
- ಸರಕಾರಿ ಬಸ್ಸು ಸಂಚಾರಕ್ಕೆ ಪರವಾನಿಗೆ ಇದ್ದರೂ, ಇಲ್ಲಿನ ರಸ್ತೆಯಲ್ಲಿ ಸರಕಾರಿ ಬಸ್‌ನ ಓಡಾಟ ಇಲ್ಲ.
- ಕೋಡಿ ಬೆಂಗ್ರೆ ದೇಗುಲದಿಂದ ಡೆಲ್ಟಾ ಬೀಚ್‌ವರೆಗೆ ಕಡಲತೀರದಲ್ಲಿ ನಿರ್ಮಾಣವಾದ ಹೊಸ ರಸ್ತೆಯ ಅಭಿವೃದ್ಧಿಯಾಗಬೇಕಾಗಿದೆ.
ಹೊಸ ಸೇತುವೆ ಆಗಬೇಕು :
ಹಂಗಾರಕಟ್ಟೆ-ಕೋಡಿ ಬೆಂಗ್ರೆಗೆ ಸೇತುವೆ ನಿರ್ಮಾಣವಾದದಲ್ಲಿ ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರಕಿದಂತಾಗುತ್ತದೆ. ಈಗಿರುವ ಬಾರ್ಜ್ ಸೇವೆ ವ್ಯವಸ್ಥಿತವಾಗಿಲ್ಲ. ಮಳೆಗಾಲದಲ್ಲಿ ಸ್ಥಗಿತಗೊಳಿಸಲಾಗುತ್ತದೆ. ಇಲ್ಲಿ ಸೇತುವೆ ನಿರ್ಮಾಣವಾದರೆ ಕೋಡಿ ಬೆಂಗ್ರೆಯಿಂದ ರಾಷ್ಟ್ರೀಯ ಹೆದ್ದಾರಿಗೂ ಸಮೀಪವಾಗುತ್ತದೆ, ಪ್ರವಾಸೋದ್ಯಮವನ್ನು ಅಭಿವೃದ್ದಿ ಪಡಿಸಬಹುದಾಗಿದೆ. ಮೀನುಗಾರಿಕೆ ಬಂದರುಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ
. -ರಮೇಶ್ ತಿಂಗಳಾಯ ಕೋಡಿಬೆಂಗ್ರೆ, ಸ್ಥಳೀಯರು
ಗ್ರಾಮಸಭೆಯಲ್ಲಿ ನಿರ್ಣಯ :
ಗ್ರಾಮಸ್ಥರ ಪ್ರಮುಖ ಬೇಡಿಕೆಯಂತೆ ಕೋಡಿಬೆಂಗ್ರೆಯನ್ನು ಕೋಡಿ ಗ್ರಾ.ಪಂ. ನಿಂದ ಕೈಬಿಟ್ಟು ತೋನ್ಸೆ ಗ್ರಾ. ಪಂ. ಸೇರಿಸುವಂತೆ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡು ವರದಿಯನ್ನು ಜಿ.ಪಂ. ಗೆ ಕಳುಹಿಸಲಾಗಿದೆ. ಕಡತಗಳನ್ನು ಸಂಬಂಧಪಟ್ಟ ಇಲಾಖೆಗೆ ರವಾನೆಯಾಗಿರುವ ಬಗ್ಗೆ ಜಿ. ಪಂ. ಕಚೇರಿಯಿಂದ ಪತ್ರ ಬಂದಿದೆ.
– ಪ್ರಭಾಕರ ಮೆಂಡನ್, ಅಧ್ಯಕ್ಷರು ಕೋಡಿ ಗ್ರಾ.ಪಂ.
– ನಟರಾಜ್ ಮಲ್ಪೆ