ಬೆಂಗಳೂರು: ಇನ್ನು ರಾಜ್ಯದಲ್ಲಿ ಯಾವುದೇ ಗ್ರಾಮಗಳಿಗೆ ಜಾತಿ ಸೂಚಕ ಹೆಸರು ಇಡಲು ಅವಕಾಶ ನೀಡುವುದಿಲ್ಲ. ಜತೆಗೆ ಈಗಾಗಲೇ ಇರುವ ಇಂಥ ಹೆಸರುಗಳನ್ನು ಬದಲಾಯಿಸಲಾಗುವುದು ಎಂದು ಸರಕಾರ ತಿಳಿಸಿದೆ.
ವಿಧಾನಸಭೆ ಕಲಾಪದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಬಸನಗೌಡ ತುರವಿಹಾಳ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಆರ್. ಅಶೋಕ್ ಅವರು ಈ ವಿಷಯ ತಿಳಿಸಿದರು.
ಹೊಸದಾಗಿ ಕಂದಾಯ ಗ್ರಾಮಗಳು ಎಂದು ಸೇರ್ಪಡೆಯಾಗುತ್ತಿರುವುದರಲ್ಲಿ ಲಂಬಾಣಿ ತಾಂಡಾ ಸಹ ಇದ್ದು, ಆ ಹೆಸರುಗಳನ್ನೂ ಬದ ಲಾಯಿಸಲಾಗುವುದು. ಜಾತಿ ಸೂಚಕ ಹೆಸರು ಇಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಈ ನಡುವೆ, ಕಾಂಗ್ರೆಸ್ ರಮೇಶ್‌ಕುಮಾರ್ ಮಧ್ಯ ಪ್ರವೇಶಿಸಿ, ವಡ್ಡರಪಾಳ್ಯ, ಭೋವಿ ಕಾಲನಿ ಸಹಿತ ಕೆಲವು ಗ್ರಾಮಗಳಿಗೆ ಈ ಹಿಂದೆ ಜಾತಿ ಸೂಚಕ ಹೆಸರು ಇಡಲಾಗಿದೆ. ಇದು ಸರಿಯಲ್ಲ ಎಂದು ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಚಿವರು, ಈ ಹಿಂದೆ ಶ್ಮಶಾನಗಳಿಗೂ ಜಾತಿಸೂಚಕವಾಗಿ ಹೆಸರುಗಳಿದ್ದವು. ನಾನು ಸಚಿವನಾಗಿ ಬಂದ ಮೇಲೆ ಶ್ಮಶಾನಗಳಿಗಿದ್ದ ಜಾತಿಸೂಚಕ ಹೆಸರುಗಳನ್ನು ಬದಲಾಯಿಸಲಾಗಿದೆ ಎಂದರು.
ರಾಜ್ಯದಲ್ಲಿ 3499 ದಾಖಲೆ ರಹಿತ ಜನ ವಸತಿ ಗುರುತಿಸಿದ್ದು, 1,632 ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. 1,041 ಜನವಸತಿಗೆ ಸಂಬಂಧಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
-ಆರ್. ಅಶೋಕ್, ಕಂದಾಯ ಸಚಿವ