ಗಂಗಾವತಿ: ಚಿಕ್ಕರಾಂಪುರ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಗ್ರಾ,ಮಸ್ಥರು ಮತದಾನ ಆರಂಭವಾಗಿ 2 ತಾಸು ಕಳೆದರೂ ಮತಗಟ್ಟೆಯತ್ತ ಬಾರದೆ ಬಹಿಷ್ಕಾರವನ್ನು ಮಾಡಿದ್ದಾರೆ.
ಗ್ರಾಮಕ್ಕೆ ಮೂಲಭೂತ ಸೌಕರ್ಯ ಹಾಗೂ ಮನೆಗಳಿಗೆ ಪಟ್ಟ ವಿತರಣೆ ಮಾಡಲು 5-6 ದಶಕಗಳಿಂದ ಹೋರಾಟ ನಡೆಸಿದ್ದರು. ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಖಂಡಿಸಿ ತಾಲೂಕಿನ ಚಿಕ್ಕ ರಾಂಪುರ ಗ್ರಾಮದ ಮತದಾರರು ಚುನಾವಣಾ ಬಹಿಷ್ಕಾರ ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಮತದಾನ ಆರಂಭವಾಗಿ ಎರಡು ತಾಸು ಕಳೆದರು ಒಬ್ಬ ಮತದಾರ ಕೂಡ ಮತಗಟ್ಟೆಯತ್ತ ಧಾವಿಸಿಲ್ಲ.
ಕಳೆದ 15 ದಿನಗಳಿಂದ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡುವುದಾಗಿ ತಾಲೂಕು ಆಡಳಿತದ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಜೊತೆಗೆ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ನೇತೃತ್ವದಲ್ಲಿ ಗ್ರಾಮಸ್ಥರ ಮನವೊಲಿಸುವ ಕಾರ್ಯವು ನಡೆದು ವಿಫಲವಾಗಿತ್ತು. ಮಂಗಳವಾರ ಮತದಾನ ದಿನವಾಗಿದ್ದು ಗ್ರಾಮದ ಯಾವೊಬ್ಬ ಮತದಾರರು ಮತಗಟ್ಟೆಯತ್ತ ಸುಳಿಯುತ್ತಿಲ್ಲ.
ಈ ಕುರಿತು ತಾಲೂಕು ಆಡಳಿತದ ಗಮನ ಸೆಳೆದಾಗ ಗ್ರಾಮಸ್ಥರ ಮನವೊಲಿಸಿ ಮತದಾನ ಮಾಡಲು ಯತ್ನಿಸಲಾಗುತ್ತಿದೆ ಎಂದು ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಉದಯವಾಣಿಗೆ ತಿಳಿಸಿದ್ದಾರೆ.
ಗ್ರಾಮದಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳಿದ್ದು ಯಾವೊಂದು ಮನೆಗೂ ಗ್ರಾ.ಪಂ ನವರು, ತಾಲೂಕು ಆಡಳಿತದವರು ಪಟ್ಟ ವಿತರಣೆಗೆ ಕ್ರಮ ಕೈಗೊಂಡಿಲ್ಲ. ಜೊತೆಗೆ ಅರಣ್ಯ ಇಲಾಖೆ ಪದೇಪದೇ ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದೆ. ಇಲ್ಲಿನ ಜನ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದು ಇನ್ನೂ ಪಟ್ಟ ವಿತರಣೆಯಾಗಿಲ್ಲ.
ಈ ಕುರಿತು ಕಳೆದ ವಿಧಾನಸಭಾ ಚುನಾವಣೆಯಲ್ಲೂ ಹನುಮನಹಳ್ಳಿ, ರಂಗಾಪುರ ,ಸಾಣಾಪೂರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ಎಚ್ಚರಿಕೆ ನೀಡಿದ ನಂತರ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ಮತದಾನ ಮಾಡಿಸಿದ್ದರು. ಇದೀಗ ಚಿಕ್ಕ ರಾಂಪುರ ಗ್ರಾಮದಲ್ಲಿ ಗ್ರಾಮಸ್ಥರು ಒಗ್ಗಟ್ಟಿನಿಂದ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿ ಇದುವರೆಗೂ ಮತದಾನಕ್ಕೆ ತೆರಳಿಲ್ಲ.