ಕಿಕ್ಕೇರಿ: ವಾಹನ ಸೌಕರ್ಯ ಕಾಣದ ಹೋಬಳಿಯ ಗಡಿಯಂಚಿನ ಗ್ರಾಮವಾದ ಊಗಿನಹಳ್ಳಿ ಗ್ರಾಮದ ಹೃದಯ ಭಾಗದ ಆರೋಗ್ಯ ಸಹಾಯಕರ(ಎಎನ್‌ಎಂ) ಕೊಠಡಿ ಪಾಳುಬಿದ್ದಿದ್ದು ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಇನ್ನು ವಾಹನ ಸೌಕರ್ಯವಿಲ್ಲದ ಗ್ರಾಮಕ್ಕೆ ತುರ್ತು ಎಎನ್‌ಎಂ ಕೊಠಡಿ ಅವಶ್ಯಕತೆ ಇದೆ.
ಹೆಚ್ಚು ಉಪಯುಕ್ತವಾಗಿತ್ತು: 30ವರ್ಷಗಳ ಹಿಂದೆ ಸಾರಿಗೆ ಸಂಚಾರವಿಲ್ಲದ ಈ ಗ್ರಾಮ ಹಾಗೂಸುತ್ತಮುತ್ತಲ ಜನತೆಗೆ ಅನುಕೂಲವಾಗಲು ಎಎನ್‌ಎಂ ಕ್ವಾಟ್ರಸ್ ನಿರ್ಮಿಸಲಾಗಿದೆ. ಉದ್ಧೇಶಿತಆಲೋಚನೆಯಿಂದ ನಿರ್ಮಿತವಾದ ಆರೋಗ್ಯ ಶುಶ್ರೂಷಕರ ಕೊಠಡಿಯಿಂದ ಹಳ್ಳಿಗಾಡಿನ ಜನತೆಗೆ ಹೆಚ್ಚು ಉಪಯುಕ್ತವಾಗಿತ್ತು. ಸಣ್ಣಪುಟ್ಟ ಕಾಯಿಲೆಗಳಿಗಾಗಿ ಗರ್ಭಿಣಿ, ಬಾಣಂತಿಯರಿಗೆ, ವಯೋವೃದ್ಧರಿಗೆ ಬಹಳ ಅನುಕೂಲಕರವಾಗಿತ್ತು. ದೂರದ ಹೋಬಳಿ ಕೇಂದ್ರಕ್ಕೆ ತೆರಳಲು ಕಷ್ಟಕರವಾಗಿದ್ದ ಊಗಿನಹಳ್ಳಿ ಕೊಪ್ಪಲು, ಗೋವಿಂದನಹಳ್ಳಿ, ಉದ್ದಿನಮಲ್ಲನ ಹೊಸೂರು ಸೇರಿದಂತೆ ಹಲವು ಹಳ್ಳಿಗಾಡಿನ ಜನತೆಈ ಎಎನ್‌ಎಂ ಕೇಂದ್ರಕ್ಕೆ ಆಗಮಿಸಿ ಚಿಕಿತ್ಸೆ ಪಡೆದು ಮರಳುತ್ತಿದ್ದರು. ಇದರಿಂದಾಗಿ ಸಮಯದ ಜತೆಗೆ ಹಣವೂ ಉಳಿತಾಯವಾಗುತ್ತಿತ್ತು.
ಸಮಸ್ಯೆ: ಗ್ರಾಮದಲ್ಲಿ ಸುಮಾರು 800ಜನಸಂಖ್ಯೆ ಇದ್ದು ಪಾಳುಬಿದ್ದ ಆರೋಗ್ಯ ಕೇಂದ್ರವಾಗಿದ್ದ ಕೊಠಡಿ ಇಲ್ಲದೇ ಆಶಾ ಕಾರ್ಯಕರ್ತೆಯರನ್ನು ಅವಲಂಬಿಸುವಂತಾಗಿದೆ. ಒಂದೆಡೆ ವಾಹನ ಸೌಲಭ್ಯಗಳಿಲ್ಲದೆ ಖಾಸಗಿ ವಾಹನ ಆಶ್ರಯಿಸಲು ಹೇಳಿದಷ್ಟು ಹಣ ನೀಡಿ ಹೋಬಳಿ ಕೇಂದ್ರ, ದೂರದ ತಾಲೂಕು ಕೇಂದ್ರಗಳಿಗೆ ತೆರಳಲು ಬಲು ಕಷ್ಟಕರವಾಗಿದೆ. ಅಲ್ಲದೇ, ಇಲ್ಲಿ ರೈತಾಪಿ ಸಮುದಾಯದವೇ ಹೆಚ್ಚಿದ್ದು ನಿತ್ಯ ಸಮಸ್ಯೆ ಎದುರಾಗುತ್ತಿದೆ.
ಬಾಗಿಲು, ಕಿಟಕಿಗಳು ಕಳ್ಳತನ :
ಗ್ರಾಮದ ಹೃದಯಭಾಗದ ಈ ಕೊಠಡಿ ಸುತ್ತ ಅನೈರ್ಮಲ್ಯತೆ ಆವರಿಸಿ ಹೊಲಸು ನಾರುವಂತಿದೆ. ದನದ ಕೊಟ್ಟಿಗೆಯಂತಾಗಿ ಕೊಠಡಿಯ ಚಾವಣಿ ಮೇಲೆ ಗಿಡಗಂಟಿ ಬೆಳೆದು ನಿಂತಿವೆ. ಕೊಠಡಿ ಬಾಗಿಲು, ಕಿಟಕಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಪಕ್ಕದಲ್ಲಿಯೇ ಅಂಗನವಾಡಿ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಹತ್ತಿರದಲ್ಲಿ ನೀರಿನ ತೊಂಬೆ ಇದ್ದು ತ್ಯಾಜ್ಯ ನೀರು ಸುತ್ತಲ ಪರಿಸರವನ್ನು ಆವರಿಸಿ ಮತ್ತಷ್ಟು ಹೊಲಸು ನಾರುತ್ತಿದೆ. ಸೊಳ್ಳೆಗಳ ಕಾಟ ಹಗಲಿನಲ್ಲಿಯೇ ಹೆಚ್ಚಿದೆ. ಕೊರೊನಾದಲ್ಲಿ ಮಕ್ಕಳು ಶಾಲೆಗೆ ಬಾರದಿರುವುದೊಂದೇ ಪುಣ್ಯ. ಶಾಲಾ ಮಕ್ಕಳು ಇತ್ತ ಓಡಾಡುವ ಮುನ್ನ ಹಾವು ಚೇಳುಗಳಂತಹ ವಿಷಕಾರಿ ಜಂತುಗಳಿಂದ ರಕ್ಷಣೆಯಾಗಬೇಕಿದೆ.
ನಮ್ಮೂರ ಆರೋಗ್ಯ ಕೇಂದ್ರ ಬಿಂದುವಾಗಿದ್ದ ಈ ಕೇಂದ್ರ ಮೊದಲಿನಂತಾಗಬೇಕಿದೆ. ಗ್ರಾಮದಲ್ಲಿನ ಆರೋಗ್ಯ ಸಮಸ್ಯೆಗೆ ಈ ಕೇಂದ್ರ ಬಹಳ ಅವಶ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು.
–ಗುರುಮೂರ್ತಿ, ಸಾಮಾಜಿಕ ಸೇವಾಕರ್ತ
ಗ್ರಾಮದಲ್ಲಿನ ಎಎನ್‌ಎಂ ಕೊಠಡಿ ಶಿಥಿಲಾವಸ್ಥೆ ತಲುಪಿದೆ. ಕೊಠಡಿಯ ಸಾಧಕ ಬಾಧಕಗಳನ್ನು ಮೇಲಧಿಕಾರಿಗಳಿಗೆ ತಿಳಿಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು.
–ಡಾ.ರಜಿನಿ, ವೈದ್ಯಾಧಿಕಾರಿ, ಆನೆಗೊಳ
–ತ್ರಿವೇಣಿ